Instagram Comments: ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ವಿಡಿಯೋಗಳು ಕಾಣಿಸಿಕೊಂಡರೆ ಸಾಕು, ಹಲವರು ಮೊದಲು ವಿಡಿಯೋ ವೀಕ್ಷಿಸಿ ಬಳಿಕ ಕಾಮೆಂಟ್ ಸೆಕ್ಷನ್ಗೆ ಭೇಟಿ ನೀಡುತ್ತಾರೆ. ಇನ್ನೂ ಕೆಲವರಿಗೆ ವಿಡಿಯೋ ನೋಡುವುದಕ್ಕಿಂತ ಅದರ ಕೆಳಗೆ ನೆಟ್ಟಿಗರು ಹಾಕಿರುವ ಕಾಮೆಂಟ್ಗಳನ್ನು ಓದುವುದರಲ್ಲೇ ಹೆಚ್ಚು ಆಸಕ್ತಿ.
ಹಾಗಾದರೆ, ಜನರಿಗೆ ಕಾಮೆಂಟ್ ಸೆಕ್ಷನ್ ಮೇಲೆ ಅಷ್ಟೊಂದು ಕುತೂಹಲ ಯಾಕೆ? ಇದರ ಹಿಂದೆ ಮನುಷ್ಯನ ಸಹಜ ಸ್ವಭಾವ, ಮನಸ್ಥಿತಿ ಮತ್ತು ಮನಃಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಕುತೂಹಲಕಾರಿ ಕಾರಣಗಳಿವೆ.
ಒಂದು ವಿಡಿಯೋ ನೋಡಿದಾಗ ನಮಗೆ ಅನಿಸಿದ ಅಭಿಪ್ರಾಯವೇ ಇತರರಿಗೂ ಇದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಕಾಮೆಂಟ್ಗಳಲ್ಲಿ ನಮ್ಮ ಯೋಚನೆಗೆ ಹೋಲುವ ಅಭಿಪ್ರಾಯಗಳು ಕಂಡಾಗ ಒಂದು ರೀತಿಯ ಸಮಾಧಾನ ಸಿಗುತ್ತದೆ. ಇದನ್ನು ಸಾಮಾಜಿಕ ದೃಢೀಕರಣ (Social Validation) ಎನ್ನಬಹುದು.
ಕೆಲವೊಮ್ಮೆ ಟ್ರೋಲ್ ವಿಡಿಯೋಗಿಂತ ಅದಕ್ಕೆ ಜನರು ಹಾಕುವ ವ್ಯಂಗ್ಯಭರಿತ ಮತ್ತು ಕ್ರಿಯೇಟಿವ್ ಕಾಮೆಂಟ್ಗಳೇ ಹೆಚ್ಚು ನಗು ತರಿಸುತ್ತವೆ. ಜನರ ವಿಭಿನ್ನ ರೀತಿಯ ಹಾಸ್ಯಪ್ರಜ್ಞೆ ಕಾಮೆಂಟ್ ಸೆಕ್ಷನ್ ಮೇಲಿನ ಆಸಕ್ತಿಯನ್ನು ಹೆಚ್ಚಿಸುತ್ತದೆ.
ಮನುಷ್ಯ ಸಂಘಜೀವಿ. ಒಂದು ವಿಷಯದ ಬಗ್ಗೆ ಉಳಿದವರು ಏನು ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದುಕೊಳ್ಳುವ ಸಹಜ ಕುತೂಹಲ ಇರುತ್ತದೆ. ವಿಡಿಯೋದ ಹಿನ್ನೆಲೆ ಅಥವಾ ಅಸಲಿ ವಿಚಾರ ಅರ್ಥವಾಗದಿದ್ದಾಗಲೂ ಕಾಮೆಂಟ್ಗಳನ್ನು ಓದಿ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆ.
ಕಾಮೆಂಟ್ ಬಾಕ್ಸ್ನಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವರು ಪರವಾಗಿ ಮಾತನಾಡಿದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಇಂತಹ ವಾದ-ವಿವಾದಗಳನ್ನು ಓದುವುದೂ ಹಲವರಿಗೆ ಮನರಂಜನೆ ನೀಡುತ್ತದೆ.
ಕೆಲವರಿಗೆ ಪೂರ್ತಿ ವಿಡಿಯೋ ನೋಡುವುದಕ್ಕಿಂತ ಅದರ ಪ್ರಮುಖ ಕಾಮೆಂಟ್ಗಳನ್ನು ಓದುವುದೇ ಸುಲಭ. ಟಾಪ್ ಕಾಮೆಂಟ್ಗಳನ್ನು ನೋಡಿದರೆ ವಿಡಿಯೋದಲ್ಲಿ ಏನಿದೆ, ಜನರು ಅದನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಬಗ್ಗೆ ತಕ್ಷಣ ಒಂದು ಅಂದಾಜು ಸಿಗುತ್ತದೆ.
ಇದನ್ನೂ ಓದಿ: ಹೊಟ್ಟೆಯೊಳಗಿದ್ದ 4 ಅಡಿ ಪೈಪ್ ಹೊರತೆಗೆದ ವೈದ್ಯರು; ಯುವಕನಿಗೆ ಮರುಜೀವ! | Jodhpur Hospital
ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡುವುದು ಎಷ್ಟು ಮುಖ್ಯವೋ, ಅದರ ಕಾಮೆಂಟ್ಗಳನ್ನು ಓದುವುದೂ ಅಷ್ಟೇ ಆಸಕ್ತಿದಾಯಕವಾಗಿದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಾಮೆಂಟ್ ಸೆಕ್ಷನ್ ಕೇವಲ ಅಭಿಪ್ರಾಯ ಹಂಚಿಕೊಳ್ಳುವ ಜಾಗವಲ್ಲ, ಜನರು ತಮ್ಮ ಹಾಸ್ಯ, ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುವ ಒಂದು ಡಿಜಿಟಲ್ ಹರಟೆ ಕಟ್ಟೆಯಾಗಿದೆ.