

ಬ್ರಿಟನ್: ಹಾಲಿವುಡ್‌ನ ಖ್ಯಾತ ನಟ, ಸಾಹಸ ದೃಶ್ಯಗಳ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ನಟನೆಂದರೆ ಟಾಮ್ ಕ್ರೂಸ್. ವಯಸ್ಸು 64 ಆದರೂ ಇಂದಿಗೂ ಚಿರ ಯುವಕನಂತೆ ಹೊಳೆಯುತ್ತಿದ್ದಾರೆ.
ಇತ್ತೀಚೆಗೆ, ಟಾಮ್ ಕ್ರೂಸ್ ಬ್ರಿಟಿಷ್ ರಾಜಮನೆತನದೊಂದಿಗೆ ತಮಗಿರುವ ದೀರ್ಘಕಾಲದ ಒಡನಾಟದ ಬಗ್ಗೆ ಕೆಲವೊಂದು ರೋಚಕ ಹಾಗೂ ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ದಿವಂಗತ ರಾಜಕುಮಾರಿ ಡಯಾನಾ ತಮ್ಮ ಮೊದಲ 'ಮಿಷನ್: ಇಂಪಾಸಿಬಲ್' ಚಿತ್ರದ ಸೆಟ್‌ಗೆ ಕರೆತಂದಿದ್ದ ಅಪರೂಪದ ಕ್ಷಣವನ್ನು ಅವರು ಮೆಲುಕು ಹಾಕಿದ್ದಾರೆ.
ದಿ ಜೆನ್ನಿಫರ್ ಹಡ್ಸನ್ ಶೋ ನಲ್ಲಿ ಮಾತನಾಡುತ್ತಾ ಟಾಮ್ ಕ್ರೂಸ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಅದು 'ಮಿಷನ್: ಇಂಪಾಸಿಬಲ್' ಚಿತ್ರದ ಮೊದಲ ಭಾಗದ ಸಮಯ. ರಾಜಕುಮಾರಿ ಡಯಾನಾ ಅವರು ಮುದ್ದಾದ ರಾಜಕುಮಾರ ವಿಲಿಯಂ ಅವರನ್ನು ಚಿತ್ರೀಕರಣದ ಸ್ಥಳಕ್ಕೆ ಕರೆತಂದಿದ್ದರು ಎಂದು ಕ್ರೂಸ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ರಾಜಕುಮಾರಿ ಡಯಾನಾ ಮತ್ತು ಆ ಪುಟ್ಟ ಬಾಲಕ ವಿಲಿಯಂ ಸ್ವಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟಾಮ್, "ಡಯಾನಾ ಬಹಳ ಮುದ್ದಾದ, ಸುಂದರವಾದ ವ್ಯಕ್ತಿಯಾಗಿದ್ದರು! ಆ ಹುಡುಗ ವಿಲಿಯಂ ಕೂಡ ಎಲ್ಲರೊಂದಿಗೆ ಬಹಳ ಸಭ್ಯವಾಗಿ ಮತ್ತು ತಮಾಷೆಯ ಸ್ವಭಾವದಿಂದ ವರ್ತಿಸುತ್ತಿದ್ದ. ಇಂದಿಗೂ ಅವರ ಆ ವ್ಯಕ್ತಿತ್ವ ಹಾಗೇ ಇದೆ" ಎಂದು ಕೊಂಡಾಡಿದ್ದಾರೆ.
ಕೇವಲ ಹಳೆಯ ನೆನಪುಗಳಷ್ಟೇ ಅಲ್ಲದೆ, ಸೆಪ್ಟೆಂಬರ್ 22 ರಂದು ಲಂಡನ್‌ನಲ್ಲಿ ನಡೆದ ತಮ್ಮ ಹೊಸ ಸಿನಿಮಾ 'ಡಿಗ್ಗರ್' ಪ್ರೀಮಿಯರ್‌ನಲ್ಲಿ ರಾಜಕುಮಾರ ವಿಲಿಯಂ ಹಾಗೂ ವೇಲ್ಸ್‌ನ ರಾಜಕುಮಾರಿ ಕ್ಯಾಥರೀನ್ ಅವರನ್ನು ಭೇಟಿಯಾದ ಕ್ಷಣಗಳನ್ನು ಟಾಮ್ ಕ್ರೂಸ್ ಹಂಚಿಕೊಂಡಿದ್ದಾರೆ.
ಪ್ರದರ್ಶನದ ಸಮಯದಲ್ಲಿ ರಾಜ ದಂಪತಿಗಳ ಪಕ್ಕದಲ್ಲೇ ಕುಳಿತಿದ್ದ ನಟ, ಅವರು ತುಂಬಾ ನಗುತ್ತಾ, ಸೌಜನ್ಯಯುತವಾಗಿ ನಡೆದುಕೊಂಡರು. ನಮ್ಮ ಸಿನಿಮಾವನ್ನು ಕೂಡ ತುಂಬಾನೇ ಇಷ್ಟಪಟ್ಟರು. ಅವರು ಅತ್ಯಂತ ಆಕರ್ಷಕ ಹಾಗೂ ಘನತೆಯುಳ್ಳ ದಂಪತಿಗಳು ಎಂದಿದ್ದಾರೆ.
ಅಲ್ಲದೆ, ವಿಲಿಯಂ ಅವರ ಸಂಗಾತಿಯ ಆಯ್ಕೆಯನ್ನು ಹೊಗಳುತ್ತಾ, ರಾಜ ದಂಪತಿಗಳು ತಮ್ಮ ದೇಶಕ್ಕಾಗಿ ಮತ್ತು ಜಗತ್ತಿಗಾಗಿ ಮಾಡುವ ಕೆಲಸಗಳು ಅದ್ಭುತ. ಅವೆಲ್ಲಕ್ಕಿಂತ ಹೆಚ್ಚಾಗಿ ಅವರು ತುಂಬಾ ಸರಳ ಮತ್ತು ವಿನಮ್ರ ವ್ಯಕ್ತಿಗಳು ಎಂದು ಪ್ರಶಂಸಿಸಿದ್ದಾರೆ, (ಏಜೆನ್ಸೀಸ್).