ಕರೊನಾ ನಡುವೆ ಗುಜರಾತ್​ ಮತ್ತು ಮಹಾರಾಷ್ಟ್ರಕ್ಕೆ ಚಂಡಮಾರುತದ ಭೀತಿ

cyclone
Published on

ನವದೆಹಲಿ: ಭಾರತದ ಒಟ್ಟಾರೆ ಕರೊನಾ ಸೋಂಕಿತರ ಪೈಕಿ ಗರಿಷ್ಠ ಸೋಂಕಿತರನ್ನು ಹೊಂದಿರುವ ಗುಜರಾತ್​ ಮತ್ತು ಮಹಾರಾಷ್ಟ್ರ ರಾಜ್ಯಗಳು ನೈಸರ್ಗಿಕ ವಿಕೋಪಕ್ಕೂ ತುತ್ತಾಗುವುದು ಬಹುತೇಕ ನಿಶ್ಚಿತವಾಗಿದೆ.

ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ್​ನ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸೋಮವಾರದಂದು ಅದು ಗರಿಷ್ಠ ಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಇದೆ. ಮರುದಿನ ಅದು ಚಂಡಮಾರುತವಾಗಿ ರೂಪಾಂತರಗೊಂಡು ಗುಜರಾತ್​ ಮತ್ತು ಮಹಾರಾಷ್ಟ್ರದ ಉತ್ತರ ಕರಾವಳಿ ಪ್ರದೇಶಕ್ಕೆ ಜೂನ್​ 3ರಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತವು ಉತ್ತರ ದಿಕ್ಕಿನಲ್ಲಿ ಚಲಿಸುತ್ತಾ ಗುಜರಾತ್​ ಮತ್ತು ಮಹಾರಾಷ್ಟ್ರದ ಉತ್ತರ ಕರಾವಳಿ ಪ್ರದೇಶವನ್ನು ಜೂ.3ರ ಸಂಜೆ ತಲುಪಿ, ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಮೇ 20ರಂದು ಅಂಫಾನ್​ ಚಂಡಮಾರುತ ಭಾರತದ ಪೂರ್ವ ಕರಾವಳಿ ಪ್ರದೇಶಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಅಪ್ಪಳಿಸಿತ್ತು. ಅಂದಾಜು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಈಗ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net