ಸಿಎಎ ಪರ-ವಿರೋಧಿಗಳ ನಡುವೆ ಕಲ್ಲು ತೂರಾಟ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಅಶ್ರುವಾಯು ಪ್ರಯೋಗ

CAA Stone Pelting'
Published on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ದೆಹಲಿಯ ಮೌಜ್​ಪುರ್​ ಏರಿಯಾದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವುದಾಗಿ ಭಾನುವಾರ ಸಂಜೆ ವರದಿಯಾಗಿದೆ.

ಸಿಎಎ ವಿರೋಧಿಸಿ ಸಾಕಷ್ಟು ಸಂಖ್ಯೆಯಲ್ಲಿ ಧರಣಿ ಕುಳಿತಿರುವ ಜಫರಾಬಾದ್ ಬಳಿಯೇ ಮೌಜ್​ಪುರ ಇದೆ. ಏಕಕಾಲದಲ್ಲಿ ಎರಡು ಗುಂಪುಗಳು ಒಂದೆಡೆ ಸೇರಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಹೀಗಾಗಿ ಜಫರಾಬಾದ್​ಗೆ ಹಾಗೂ ಮೌಜ್​ಪುರ್​ ಸಂಧಿಸುವ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಪೂರ್ವ ಜಿಲ್ಲೆ ಸೇರಿದಂತೆ ಇತರೆ ಪ್ರದೇಶದ ಡಿಸಿಪಿಗಳಿಗೂ ಸ್ಥಳಕ್ಕೆ ಬುಲಾವ್​ ನೀಡಲಾಗಿದೆ. ಅಲ್ಲದೆ, ಅರೆಸೇನಾ ಪಡೆಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿತ ಮತ್ತು ಸಿಎಎ ವಿರೋಧಿಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಇರದಿದ್ದ ಕಾರಣ ಪರಿಸ್ಥಿತಿ ನಿಯಂತ್ರಣಯನ್ನು ಮೀರಿತ್ತು. ಹೀಗಾಗಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸ್​ ಸಿಬ್ಬಂದಿ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ಈ ಘಟನೆಯಲ್ಲಿ ಅನೇಕ ಪ್ರತಿಭಟನಾಕಾರರು ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯು ಮೊಳಗಿತ್ತು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಬಿಜೆಪಿಯ ವಿವಾದಿತ ನಾಯಕ ಕಪಿಲ್​ ಮಿಶ್ರಾ ಮತ್ತು ಇತರರು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಜಫರಾಬಾದ್​ ಮೆಟ್ರೋ ನಿಲ್ದಾಣ ಬಳಿ ಬಂದು ರಸ್ತೆಯನ್ನು ಖಾಲಿ ಮಾಡುವಂತೆ ಪ್ರತಿಭಟನಾಕಾರರನ್ನು ಕೋರಿದ್ದಾರೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿ 4 ಗಂಟೆ ಸುಮಾರಿಗೆ ರಸ್ತೆಗೆ ಇಳಿದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net