ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದ ಗಂಗೋತ್ರಿ ಹಕ್ಕಿಗಳು: ಊಹೆಗೂ ನಿಲುಕದ ಎತ್ತರದಲ್ಲಿ 26 ಜಾತಿಯ ಪಕ್ಷಿಗಳು ಪತ್ತೆ | Gangotri Birds

Gangotri Birds
ಉತ್ತರಾಖಂಡದ ಗಂಗೋತ್ರಿ ಹಿಮಾಲಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಪತ್ತೆಯಾದ ಪಕ್ಷಿಗಳು
Published on: 

Gangotri Birds: ಉತ್ತರಾಖಂಡದ ಗಂಗೋತ್ರಿ ಪ್ರದೇಶದಲ್ಲಿ ಪಕ್ಷಿ ಸಂಕುಲದ ಕುರಿತು ಮಹತ್ವದ ಸಂಶೋಧನೆಯೊಂದು ನಡೆದಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ (WII) ವಿಜ್ಞಾನಿಗಳು ಕೈಗೊಂಡ ಈ ಅಧ್ಯಯನದಲ್ಲಿ, ಈ ಹಿಂದೆ ದಾಖಲಾಗಿದ್ದ ಎತ್ತರದ ಮಿತಿಗಿಂತಲೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ಬರೋಬ್ಬರಿ 26 ಜಾತಿಯ ಪಕ್ಷಿಗಳು ಪತ್ತೆಯಾಗಿರುವ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.

2016ರಿಂದ 2018ರವರೆಗೆ ಮೂರು ವರ್ಷಗಳ ಕಾಲ ಭಗೀರಥಿ ನದಿ ಜಲಾನಯನ ಪ್ರದೇಶದಲ್ಲಿ ಅಧ್ಯಯನ ನಡೆಸಲಾಗಿತ್ತು. ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ 2,500ರಿಂದ 5,250 ಮೀಟರ್ ಎತ್ತರದ ಪ್ರದೇಶಗಳಲ್ಲಿ ಅಳವಡಿಸಿದ್ದ 228 ಕ್ಯಾಮೆರಾ ಟ್ರ್ಯಾಪ್‌ಗಳ ಮೂಲಕ 55 ಜಾತಿಯ ಪಕ್ಷಿಗಳ 551 ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ 26 ಜಾತಿಯ ಪಕ್ಷಿಗಳು ಈ ಹಿಂದಿನ ದಾಖಲೆಗಳಿಗಿಂತ ಹೆಚ್ಚಿನ ಎತ್ತರದಲ್ಲಿ ಕಾಣಿಸಿಕೊಂಡಿವೆ.

ಅದರಲ್ಲೂ 14 ಜಾತಿಯ ಪಕ್ಷಿಗಳು ಹಲವು ಕ್ಯಾಮೆರಾ ಕೇಂದ್ರಗಳಲ್ಲಿ ಪುನರಾವರ್ತಿತವಾಗಿ ಪತ್ತೆಯಾಗಿವೆ. ಇವುಗಳಲ್ಲಿ ಹಿಮಾಲಯನ್ ಮೊನಾಲ್, ಸ್ನೋ ಪಿಜನ್, ಬ್ಲ್ಯಾಕ್ ರೆಡ್‌ಸ್ಟಾರ್ಟ್, ಆಲಿವ್ ಬ್ಯಾಕ್ಡ್ ಪಿಪಿಟ್ ಮತ್ತು ಹಿಮಾಲಯನ್ ಸ್ನೋಕಾಕ್ ಪ್ರಮುಖವಾಗಿವೆ.

ಕೆಲವು ಪಕ್ಷಿಗಳು ಈ ಹಿಂದಿನ ಎತ್ತರದ ದಾಖಲೆಗಿಂತ ಸಾವಿರಾರು ಮೀಟರ್ ಮೇಲಿನ ಪ್ರದೇಶಗಳಲ್ಲಿ ಪತ್ತೆಯಾಗಿವೆ. ರೆಡ್-ವಾಟಲ್ಡ್ ಲ್ಯಾಪ್‌ವಿಂಗ್ ಪಕ್ಷಿ 3,286 ಮೀಟರ್, ಬ್ರಾಹ್ಮಿಣಿ ಸ್ಟಾರ್ಲಿಂಗ್ 2,466 ಮೀಟರ್ ಹಾಗೂ ಆಲಿವ್ ಬ್ಯಾಕ್ಡ್ ಪಿಪಿಟ್ 2,091 ಮೀಟರ್ ಹೆಚ್ಚುವರಿ ಎತ್ತರದಲ್ಲಿ ದಾಖಲಾಗಿವೆ. ಆದರೆ, ಇಂತಹ ಕೆಲವು ದಾಖಲೆಗಳು ಕಡಿಮೆ ಸಂಖ್ಯೆಯ ಪತ್ತೆಗಳನ್ನು ಆಧರಿಸಿರುವುದರಿಂದ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸಮವಸ್ತ್ರದಲ್ಲೇ ಕುಡಿದು ತೂರಾಡಿದ ಕಾನ್ಸ್ಟೇಬಲ್! 12 ವರ್ಷದ ಬಾಲಕಿಗೆ ಕಾರು ಡಿಕ್ಕಿ ಹೊಡೆದ ಖಾಕಿ? | Amritsar Police

ಹವಾಮಾನ ಬದಲಾವಣೆಯಿಂದಲೇ ಪಕ್ಷಿಗಳು ಎತ್ತರದ ಪ್ರದೇಶಗಳಿಗೆ ವಲಸೆ ಹೋಗಿವೆ ಎಂದು ಈಗಲೇ ತೀರ್ಮಾನಿಸಲು ಸಾಧ್ಯವಿಲ್ಲ. ಅವುಗಳ ಚಲನವಲನ ಮತ್ತು ವಾಸಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆಯಲು ದೀರ್ಘಕಾಲದ ಅಧ್ಯಯನ ಹಾಗೂ ಮತ್ತಷ್ಟು ಸಮೀಕ್ಷೆಗಳು ಅಗತ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.