ಭಾರತ್‌ಪೇ ಹಣ ದುರುಪಯೋಗ: ಕಂಪನಿಯ ಮಾಜಿ ಅಧಿಕಾರಿ ಬಂಧನ

bharath
Published on

ನವದೆಹಲಿ: ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರ ಕುಟುಂಬದ ಸದಸ್ಯ ದೀಪಕ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.

ಈ ಪ್ರಕರಣದಲ್ಲಿ ಆರೋಪಿ ದೀಪಕ್ ಗುಪ್ತಾನನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಒಡಬ್ಲ್ಯೂ ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ 2023 ರಲ್ಲಿ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಮಾಧುರಿಯವರ ಸಹೋದರಿಯ ಪತಿ ದೀಪಕ್ ಗುಪ್ತಾ ಅವರನ್ನು ಹೆಸರಿಸಲಾಗಿತ್ತು. ಇದಕ್ಕೂ ಮುನ್ನ ಈ ಪ್ರಕರಣದ ಮತ್ತೊಬ್ಬ ಆರೋಪಿ ಅಮಿತ್ ಬನ್ಸಾಲ್​ರನ್ನೂ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಪ್ತಾ ಭಾಗಿಯಾಗಿರುವುದು ಆರೋಪಿ ಅಮಿತ್ ಬನ್ಸಾಲ್ ವಿಚಾರಣೆಯಿಂದ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಶ್ನೀರ್ ಗ್ರೋವರ್ (ಭಾರತ್‍ಪೇ ಸ್ಥಾಪಕ ಮತ್ತು ಮಾಜಿ ನಿರ್ದೇಶಕ), ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಮತ್ತು ಇತರ ಅಧಿಕಾರಿಗಳು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ವಿವಿಧ ನಕಲಿ ದಾಖಲೆಗಳ ಬಳಸಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಗೆ 81 ಕೋಟಿ ರೂ. (ಅಂದಾಜು) ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಭಾರತ್‌ಪೇ ಡಿಸೆಂಬರ್ 2022 ರಲ್ಲಿ ಅಶ್ನೀರ್ ಗ್ರೋವರ್, ಮಾಧುರಿ ಗ್ರೋವರ್, ಶ್ವೇತಾಂಕ್ ಜೈನ್ (ಮಾಧುರಿಯ ಸಹೋದರ), ಸುರೇಶ್ ಜೈನ್ (ಅಶ್ನೀರ್ ಅವರ ಮಾವ) ಮತ್ತು ದೀಪಕ್ ಗುಪ್ತಾ (ಅಶ್ನೀರ್ ಮತ್ತು ಮಾಧುರಿಯ ಸೋದರ ಮಾವ) ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net