

ಬೆಂಗಳೂರಿನಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಶೋಗೆ ಬಾಂಬ್ ಬೆದರಿಕೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವರಾಜ್ ಎಂಜೆಗೆ ಮಾಹಿತಿ.
ಬೆದರಿಕೆ ಇ-ಮೇಲ್ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಂದ ತನಿಖೆ ಚುರುಕು.
ಬೆಂಗಳೂರು: ನವೆಂಬರ್ 29ರಂದು ನೈಸ್ ರೋಡ್ನಲ್ಲಿ ಆಯೋಜಿಸಲಾಗಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ (ಕಾನ್ಸರ್ಟ್) ಐಇಡಿ (IED) ಬಾಂಬ್ ಸ್ಫೋಟದ ಬೆದರಿಕೆ ಇ- ಮೇಲ್ ಬಂದಿದೆ. ನವೆಂಬರ್ 9 ರಂದು ಈ ಬೆದರಿಕೆ ಇ-ಮೇಲ್ ಬಂದಿದ್ದು, ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನವೆಂಬರ್ 29 ರಂದು ಬೆಂಗಳೂರಿನಲ್ಲಿ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಸಲು ಯೋಜಿಸಲಾಗಿತ್ತು. ನವೆಂಬರ್ 9 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವರಾಜ್ ಎಂ.ಜೆ. ಅವರಿಗೆ ಕಂಟ್ರೋಲ್ ರೂಂನಿಂದ ಕರೆ ಬಂದಿದ್ದು, ಬೆದರಿಕೆ ಇ-ಮೇಲ್ ಬಗ್ಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.
weismith3727@gmail.com ಎಂಬ ವಿಳಾಸದಿಂದ ಎಚ್‌ಡಿಎಂಸಿ ಆಯುಕ್ತರ ಇ-ಮೇಲ್ ಐಡಿ (commissioner.hdmc@gmail.com) ಮತ್ತು eedharawad@gmail.com ಗೆ ಈ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ.
ನವೆಂಬರ್ 29 ರಂದು ಮಾದಾವರದ ನೈಸ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ದೋಸಾಂಜ್ ಅವರ ಸಂಗೀತ ಕಚೇರಿಯಲ್ಲಿ ಐಇಡಿ ಸ್ಫೋಟಕ ಇರಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಎಚ್ಚರಿಸಲಾಗಿದೆ. ಅಲ್ಲದೆ, ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರದಂತೆ ಮತ್ತು ಮೆಟ್ರೋದಲ್ಲಿ ಪ್ರಯಾಣಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಇ-ಮೇಲ್‌ನ ಕೊನೆಯಲ್ಲಿ ಖಲಿಸ್ತಾನ್ ಪರ ಘೋಷಣೆಯಾದ 'ಖಲಿಸ್ತಾನ್ ಜಿಂದಾಬಾದ್' ಎಂದು ಬರೆಯಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದು, ನೈಸ್ ಗ್ರೌಂಡ್ಸ್‌ನಲ್ಲಿ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಿಗದಿಯಾಗಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಸದ್ಯ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351 ಹಾಗೂ ಸೆಕ್ಷನ್ 353 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇ-ಮೇಲ್ ಕಳುಹಿಸಿದವರ ಐಪಿ ವಿಳಾಸ ಮತ್ತು ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಚೇರಿ ನಡೆಯುವ ಸ್ಥಳವನ್ನು ಪೊಲೀಸರು ಸಂಪೂರ್ಣವಾಗಿ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.