ಮಕ್ಕಳಿಗೂ ಸಿಗ್ತಿದೆಯೇ ವಯಸ್ಕರ ಕಂಟೆಂಟ್?; ಆನ್​ಲೈನ್​ ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ

Mobile Addiction
Published on

ನವದೆಹಲಿ: ಆನ್​ಲೈನ್ ವೇದಿಕೆಗಳಲ್ಲಿ ಮಕ್ಕಳಿಗೂ ವಯಸ್ಕರ ಕಂಟೆಂಟ್ ಸಿಗುತ್ತಿರುವುದನ್ನು ತಾವು ಗಮನಿಸಿರುವುದಾಗಿ ಶೇ. 60ರಷ್ಟು ಪಾಲಕರು ಒಪ್ಪಿಕೊಂಡಿದ್ದಾರೆ. ಈ ಕುರಿತು ಆನ್​ಲೈನ್ ಸಮೀಕ್ಷೆ ವೇದಿಕೆಯಾದ ‘ಲೋಕಲ್​ಸರ್ಕಲ್ಸ್’ ಸಮೀಕ್ಷೆ ನಡೆಸಿತ್ತು.

ಜೂಜು, ಗೇಮಿಂಗ್, ಒಳಉಡುಪು, ಲೈಂಗಿಕ ಆರೋಗ್ಯ ಮುಂತಾದ ವಯಸ್ಕರ ವಿಷಯವಸ್ತುಗಳ ವಿಡಿಯೋ ಅಥವಾ ಫೋಟೋಗಳನ್ನು ಆನ್​ಲೈನ್​ನಲ್ಲಿ ಮಕ್ಕಳೂ ಸೇರಿದಂತೆ ಎಲ್ಲರೂ ನೋಡಬಹುದಾದ ಸಾರ್ವತ್ರಿಕ ಕಂಟೆಂಟ್ ಎಂಬುದಾಗಿ ವರ್ಗೀಕರಿಸಲಾಗಿದೆ. ಇದನ್ನು ತಾವು ಗಮನಿಸಿರುವುದಾಗಿ ಶೇ. 60ರಷ್ಟು ಪಾಲಕರು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

ದೇಶದ 305 ಜಿಲ್ಲೆಗಳ 30 ಸಾವಿರ ಪಾಲಕರನ್ನು ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿದೆ. ‘ಉಪಕರಣದ (ಮೊಬೈಲ್ ಫೋನ್​ಅಥವಾ ಕಂಪ್ಯೂಟರ್) ಮಾಲೀಕರ ವ್ಯೂವಿಂಗ್ ಪ್ರೊಫೈಲ್ ಗಮನದಲ್ಲಿ ಇಟ್ಟುಕೊಂಡು ಆನ್​ಲೈನ್ ವೇದಿಕೆಗಳು ಜಾಹೀರಾತುಗಳನ್ನು ಬಿತ್ತರಿಸುತ್ತವೆ. ಆದರೆ ಭಾರತದಲ್ಲಿ ಬಹುತೇಕ ಮಕ್ಕಳು ತಮ್ಮ ಪಾಲಕರ ಉಪಕರಣಗಳನ್ನೇ ಬಳಸುತ್ತಾರೆ. ಈ ಅಂಶವನ್ನು ವೇದಿಕೆಗಳು ಮತ್ತು ಸರ್ಕಾರ ಗಮನಿಸಬೇಕು. ವಯೋನಿರ್ದಿಷ್ಟ ಜಾಹೀರಾತು ಪ್ರಸಾರ ನಿಯಮವನ್ನು ಉಲ್ಲಂಘಿಸುವ ವೇದಿಕೆಗಳಿಗೆ ಸರ್ಕಾರ ಭಾರಿ ದಂಡ ವಿಧಿಸಬೇಕು ಎಂಬುದಾಗಿ ಶೇ. 88ರಷ್ಟು ಪಾಲಕರು ಆಗ್ರಹಿಸಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಮಗೆ ಬರುತ್ತಿರುವ ಜಾಹೀರಾತುಗಳಲ್ಲಿ ಜೂಜು ಮತ್ತು ಗೇಮಿಂಗ್​ಗೆ ಸಂಬಂಧಿಸಿದವುಗಳೇ ಜಾಸ್ತಿ ಇರುತ್ತವೆ ಎಂದು ಶೇ. 41ರಷ್ಟು ಜನ ಹೇಳಿದ್ದಾರೆ. ಒಳಉಡುಪುಗಳ ಜಾಹೀರಾತು ಬರುತ್ತವೆ ಎಂದು ಶೇ. 35 ಮಂದಿ, ಲೈಂಗಿಕ ಆರೋಗ್ಯ ಕುರಿತ ಜಾಹೀರಾತು ಹೆಚ್ಚಾಗಿರುತ್ತವೆ ಎಂದು ಶೇ. 29 ಜನ, ಮದ್ಯ-ತಂಬಾಕು ಕುರಿತ ಸಂದೇಶಗಳಿರುತ್ತವೆ ಎಂದು ಶೇ. 24 ಜನ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಅಶ್ಲೀಲತೆ ತಡೆಗೆ ಕಠಿಣ ಕಾನೂನು: ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಅಶ್ಲೀಲ ಕಂಟೆಂಟ್ ಪ್ರಸಾರವಾಗುತ್ತಿ ರುವುದನ್ನು ತಡೆಯಲು ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಬುಧವಾರ ಹೇಳಿದ್ದಾರೆ. ಸಂಸತ್ತಿನ ಸ್ಥಾಯಿ ಸಮಿತಿ ಇದಕ್ಕೆ ಸಂಬಂಧಿಸಿದಂತೆ ರ್ಚಚಿಸಿ ಮಾರ್ಗಸೂಚಿ ರೂಪಿಸಬೇಕು. ಕಠಿಣಾತಿಕಠಿಣ ನಿಯಮಗಳನ್ನು ರೂಪಿಸಲು ಒಮ್ಮತ ರೂಪುಗೊಳ್ಳಬೇಕು ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net