

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಾರತ 1,300 ಅಮೆರಿಕನ್ನರನ್ನು ಇತ್ತೀಚೆಗೆ ತಾಯ್ನಾಡಿಗೆ ರವಾನಿಸಿದೆ. ಇನ್ನು ಐದು ಹೆಚ್ಚುವರಿ ವಿಮಾನಗಳು ಈ ವಾರ ಹಾರಾಟ ನಡೆಸಲಿದೆೆ. ಆದರೆ, ಅಮೆರಿಕದಲ್ಲಿ ಕರೊನಾ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಹುತೇಕರು ತಾಯ್ನಾಡಿಗೆ ವಾಪಸು ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸುಮಾರು 7 ಸಾವಿರ ಮಂದಿ ಅಮೆರಿಕನ್ನರು ತಾಯ್ನಾಡಿಗೆ ಹಿಂದಿರುಗಲು ಭಾರತದಲ್ಲಿರುವ ಅಮೆರಿಕದ ದೂತಾವಾಸ ಮತ್ತು ಕಾನ್ಸುಲೆಟ್ ಕಚೇರಿಗಳಲ್ಲಿ ನೋಂದಾಯಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ. ವೇಲ್ಸ್ ತಿಳಿಸಿದ್ದಾರೆ.
ಜನವರಿ 29ರ ನಂತರ ಭಾರತ, ಪೆರು, ಈಜಿಪ್ಟ್, ನೇಪಾಳಗಳಿಂದ 43 ಸಾವಿರ ಅಮೆರಿಕನ್ನರು ತಾಯ್ನಾಡಿಗೆ ಮರಳಿದ್ದಾರೆ.