ದೆಹಲಿ-ಪುಣೆ ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ! ಕಾರಣ ತಿಳಿಸಿ, ಪ್ರಯಾಣಿಕರಿಗೆ ಹಣ ವಾಪಾಸ್​ | Air India

ವಿಜಯವಾಣಿ (71)
Published on

Air India: ಅಹಮದಾಬಾದ್​ ಏರ್ ಇಂಡಿಯಾ ವಿಮಾನ ಭೀಕರ ದುರಂತಕ್ಕೀಡಾದ ಬಳಿಕ ಸಂಸ್ಥೆಗೆ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಲೇ ಇವೆ. ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾಗಿ ಸ್ಫೋಟಗೊಂಡ ಏರ್ ಇಂಡಿಯಾ ವಿಮಾನ ತನ್ನ ಪ್ರಯಾಣಿಕರು ಸೇರಿದಂತೆ ಒಟ್ಟು 274 ಜನರ ಸಾವಿಗೆ ಕಾರಣವಾಯಿತು. ಈ ದುರ್ಘಟನೆ ಬೆನ್ನಲ್ಲೇ ಹಲವಾರು ಏರ್ ಇಂಡಿಯಾ ವಿಮಾನಗಳು ತುರ್ತು ಭೂಸ್ಪರ್ಶ ಮತ್ತು ತಾಂತ್ರಿಕ ದೋಷಗಳಿಂದ ತನ್ನ ಹಾರಾಟವನ್ನು ಬಲವಂತವಾಗಿ ರದ್ದುಗೊಳಿಸುವಂತಾಗಿದೆ. ಇದು ಪ್ರಯಾಣಿಕರಲ್ಲಿ ದೊಡ್ಡ ಗೊಂದಲವನ್ನು ಹುಟ್ಟುಹಾಕಿದೆ.

ಒಂದೇ ದಿನ ಅಂತಾರಾಷ್ಟ್ರೀಯ ಮತ್ತು ದೇಶಿಯ ಸೇರಿದಂತೆ ಒಟ್ಟು 8 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವ ಏರ್ ಇಂಡಿಯಾ ಸಂಸ್ಥೆ, ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದ ಪ್ರಯಾಣಿಕರಿಗೆ ಕಾರಣ ತಿಳಿಸಿ, ಹಣವನ್ನು ಹಿಂತಿರುಗಿಸಿದೆ. ಈ ಸಾಲಿನಲ್ಲಿ ಇಂದು ಪುಣೆ-ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ ಸಂಸ್ಥೆ, ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಹಿನ್ನಲೆ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಕಾರಣ ತಿಳಿಸಿ, ಹಣವನ್ನು ವಾಪಾಸ್ ನೀಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟಾಟಾ ಗ್ರೂಪ್ ವಿಮಾನಯಾನ ಸಂಸ್ಥೆ, ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ ಎಂದು ಹೇಳಿದೆ.

ಯಾವ ವಿಮಾನಗಳು ರದ್ದು?

ಅಂತಾರಾಷ್ಟ್ರೀಯ ವಿಮಾನಗಳು

1. ದುಬೈ-ಚೆನ್ನೈ AI906

2. ದೆಹಲಿ-ಮೆಲ್ಬೋರ್ನ್‌ AI308

3. ಮೆಲ್ಬೋರ್ನ್‌- ದೆಹಲಿ AI309

4. ದುಬೈ- ಹೈದರಾಬಾದ್‌ AI2204

ದೇಶೀಯ ವಿಮಾನಗಳು

1. ಪುಣೆ-ದೆಹಲಿ AI874

2. ಅಹಮದಾಬಾದ್‌- ದೆಹಲಿ AI456

3. ಹೈದರಾಬಾದ್‌- ಮುಂಬೈ AI-2872

4. ಚೆನ್ನೈ- ಮುಂಬೈ AI571

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net