

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Bangalore Airport) ಟರ್ಮಿನಲ್ 2 ಕಣ್ತುಂಬಿಕೊಂಡ ಜಪಾನ್ ಮೂಲದ ಟ್ರಾವೆಲ್ ವ್ಲಾಗರ್ ಒಂದು ನಿಮಿಷ ಇಲ್ಲಿನ ಕಟ್ಟಡ ವಿನ್ಯಾಸಕ್ಕೆ ಮಾರುಹೋಗಿದ್ದಾರೆ. ಈ ಕುರಿತು ತಮ್ಮ ಅನುಭವವನ್ನು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿರುವ ಅವರು, ವಿಡಿಯೋ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಮಾನ ಇಳಿದ ನಂತರ ಏರ್ಪೋರ್ಟ್ ಒಳಗೆ ಬಂದ ಜಪಾನ್ನ ಕಿಕಿ ಚೆನ್ ಎಂಬ ಯುವತಿ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಿಲ್ದಾಣದ ಆರ್ಕಿಟೆಕ್ಚರಲ್ ಕಡೆ ಕೈತೋರಿಸುತ ವಿವರಿಸಿದ್ದಾರೆ. ವಿಶ್ರಾಂತಿ ಸ್ಥಳ, ಪ್ರಯಾಣಿಕರ ಕಾಯುವಿಕೆ ಸ್ಥಳ ಮತ್ತು ರೂಮ್ಗಳನ್ನು ಪರಿಶೀಲಿಸಿದ ಅವರು, ನನಗೆ ಇದನ್ನು ನೋಡಿ ಆಶ್ಚರ್ಯವಾಗುತ್ತಿದೆ. ಎಷ್ಟು ಚೆನ್ನಾಗಿದೆ ಇಲ್ಲಿನ ವಿನ್ಯಾಸ, ವಾಹ್ ಎಂದು ಖುಷಿ ಹಂಚಿಕೊಂಡಿದ್ದಾರೆ.
''ಭಾರತದ ಅತ್ಯುತ್ಯಮ ವಿಮಾನ ನಿಲ್ದಾಣ ಇದು! ಚೆಕ್ ಇನ್ ಕೌಂಟರ್ ಸೇರಿದಂತೆ ಎಲ್ಲವನ್ನೂ ಸಹ ಬಿದಿರಿನಿಂದ ನಿರ್ಮಿಸಲಾಗಿದೆ. ನಾನು ಭಾರತದ ವಿಮಾನ ನಿಲ್ದಾಣದಲ್ಲಿ ಇದ್ದೇನೆ ಎಂದು ನಿಜಕ್ಕೂ ನನ್ನಿಂದ ನಂಬಲಾಗುತ್ತಿಲ್ಲ ಎಂದು ತಮ್ಮ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರು ಚೆನ್ ಅವರ ಮಾತುಗಳಿಗೆ ಫಿದಾ ಆಗಿದ್ದಾರೆ,(ಏಜೆನ್ಸೀಸ್).