

ಉಡುಪಿ: ನಂದಳಿಕೆಯ ವರಕವಿ ಮುದ್ದಣನ 150ನೇ ಜಯಂತಿ (ಜ.24) ಪ್ರಯುಕ್ತ ಕೇಂದ್ರ ಸರ್ಕಾರ 150 ರೂ. ಮೌಲ್ಯದ ನಾಣ್ಯ ಹೊರತರಲಿದೆ.
ಈ ನಾಣ್ಯ ಹಲವು ವಿಶೇಷತೆಯನ್ನು ಒಳಗೊಂಡಿದೆ. 35 ಗ್ರಾಂ ತೂಕದ 44 ಮಿ.ಮೀ. ಸುತ್ತಳತೆಯ ಈ ನಾಣ್ಯವನ್ನು 4 ಬಗೆಯ ಲೋಹಗಳ ಮಿಶ್ರಣದಿಂದ ತಯಾರಿಸಲಾಗಿದೆ. ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.05 ನಿಕಲ್ ಹಾಗೂ ಶೇ.05 ಸತು ಹೊಂದಿದೆ. ನಾಣ್ಯದ ಒಂದು ಕಡೆ (ಹೆಡ್)ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹದ ತಲೆ, ಕೆಳಗೆ 'ಸತ್ಯಮೇವ ಜಯತೆ' ಎಂದು ಬರೆದಿದೆ. ಬಲ ಬದಿಯ ವೃತ್ತದೊಳಗೆ 'ಭಾರತ್' ಎಂದೂ, ವೃತ್ತದೊಳಗೆ 'ಇಂಡಿಯಾ' ಎಂದು ಬರೆಯಲಾಗಿದೆ. ಸಿಂಹದ ತಲೆಯ ಕೆಳಗೆ ರೂ. ಚಿಹ್ನೆ ಹಾಗೂ ಮೌಲ್ಯ 150 ಎಂದು ಬರೆದಿದೆ. ನಾಣ್ಯದ ಮತ್ತೊಂದು ಭಾಗದ ಮಧ್ಯೆ ಕವಿ ಮುದ್ದಣನ ಚಿತ್ರ, ಮೇಲಿನ ವೃತ್ತದಲ್ಲಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕವಿ ಮುದ್ದಣನ 150ನೇ ಜನ್ಮ ದಿನಾಚರಣೆ ಎಂಬ ಉಲ್ಲೇಖವಿದೆ.
ಮುದ್ದಣನ ಚಿತ್ರದ ಕೆಳಗೆ ಅಂತರಾಷ್ಟ್ರೀಯ ಅಂಕೆಯಲ್ಲಿ ವರ್ಷ 1870-2020 ಎಂದು ಬರೆಯಲಾಗಿದೆ. ಭಾರತ ಸರ್ಕಾರದ ನಾಣ್ಯ ಮತ್ತು ಕರೆನ್ಸಿ ವಿಭಾಗದ ಜಂಟಿ ಕಾರ್ಯದರ್ಶಿ ಮನೀಶಾ ಸಿನ್ಹಾ ಜ.19ರಂದು ಈ ಪ್ರಕಟಣೆ ನೀಡಿದ್ದಾರೆ.