More

    ಹೊಸ ವರ್ಷಕ್ಕೆ ಕ್ಷೇತ್ರ ತುಂಬಿದ ಭಕ್ತರು, ಸಂಭ್ರಮದ ರೂಪುರೇಷೆ ಬದಲಾಯಿಸಿದ ಕೋವಿಡ್

    ಮಂಗಳೂರು/ಉಡುಪಿ/ಸುಬ್ರಹ್ಮಣ್ಯ: ಹೊಸ ವರ್ಷದ ಮೊದಲ ಶುಕ್ರವಾರ, ಧನುರ್ಮಾಸ ಮತ್ತು ಮಾರ್ಗಶಿರ ಜತೆಯಾಗಿ ಬಂದಿರುವ ಶುಕ್ರವಾರ ಹಾಗೂ ಹೊಸ ವರ್ಷ ದೇವರ ದರ್ಶನ ನಡೆಸಿದರೆ ವರ್ಷಪೂರ್ತಿ ಒಳ್ಳೆಯದಾಗುವುದು ಎನ್ನುವ ನಂಬಿಕೆ ಈ ದಿನ ಭಕ್ತರು ಕ್ಷೇತ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಿದೆ.
    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಕೇರಳ, ತಮಿಳುನಾಡಿನಿಂದ ಸಹಿತ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಳವನ್ನು ಹೂವು ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

    ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹೂ, ಹಣ್ಣು, ಅಡಕೆ, ಬಾಳೆ, ಜೋಳ, ಎಲೆ ಇತ್ಯಾದಿ ಪ್ರಾಕೃತಿಕ ಪರಿಕರಗಳಿಂದ ವಿಶೇಷವಾಗಿ ಅಲಂಕೃತಗೊಂಡಿದ್ದು, ಕ್ಷೇತ್ರಕ್ಕೆ ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ ಧನುರ್ಮಾಸ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಶ್ರೀ ದೇವರ ರಥೋತ್ಸವ ಜರುಗಿತು. ಉಡುಪಿ ಕೃಷ್ಣಮಠ, ಮಂಗಳಾದೇವಿ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಹಿತ ಪ್ರಮುಖ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು ಇತ್ತು.

    ಕುಕ್ಕೆಯಲ್ಲಿ ಪುಷ್ಪಾಲಂಕಾರ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಹೊರಾಂಗಣ, ಸುತ್ತುಗೋಪುರ, ಒಳಾಂಗಣಗಳಲ್ಲಿ ಪುಷ್ಪಗಳಿಂದ ಹಾಗೂ ಒಳಾಂಗಣದಲ್ಲಿ ತರಕಾರಿ- ಹಣ್ಣು ಹಂಪಲುಗಳಿಂದ 5 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಅಲಂಕಾರ ಸೇವೆ ಭಕ್ತರಿಂದ ನೆರವೇರಿತು. ಬೆಂಗಳೂರಿನ ಉದ್ಯಮಿಗಳಾದ ಟಿ.ಎನ್.ಮಂಜುನಾಥ್, ಉಮೇಶ್, ಬಾಲಾಜಿ, ಕುಮಾರ್ ಎಂ.ಆರ್, ವಿಜಯ ಕುಮಾರ್, ಕೃಷ್ಣಮೂರ್ತಿ, ಪ್ರಸಾದ್, ಸುಧಾ ಸೇವಾಕರ್ತರಾಗಿದ್ದು, ಮೂರು ವರ್ಷಗಳಿಂದ ದೇವಳದಲ್ಲಿ ವರ್ಷದ ಮೊದಲ ದಿನ ಪುಷ್ಪಾಲಂಕಾರ ಸೇವೆ ನೆರವೇರಿಸುತ್ತಿದ್ದಾರೆ. ದೇವರಿಗೆ ಅಲಂಕಾರಕ್ಕೆ ಬಾಳೆದಿಂಡಿನ ತಿರುಳಿನಿಂದ ತಯಾರಿಸಿದ ಹಾರ ಅರ್ಪಿಸಲಾಯಿತು. ರಂಜನ್ ಅಲಂಕಾರ ನೆರವೇರಿಸಿದ್ದು, ದೇವಳದ ನಾಗೇಶ್ ಎ.ವಿ. ಮತ್ತು ಜಗದೀಶ್ ಸಹಕರಿಸಿದರು.

    ಮನೆಗಳಲ್ಲೇ ಸಂಭ್ರಮಾಚರಣೆ: ಆತಂಕದ ನಡುವೆಯೇ ಮಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಗೆ ಹೋಟೆಲ್‌ಗಳು, ಪಬ್‌ಗಳು ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದವು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಬಾನಂಗಳದಲ್ಲಿ ಬಣ್ಣ ಬಣ್ಣದ ಪಟಾಕಿಗಳು ಚಿತ್ತಾರ ಮೂಡಿಸಿದವು. ಈ ವರ್ಷ ಹೊಸ ವರ್ಷಾಚರಣೆಗೆ ಮಂಗಳೂರಿನಲ್ಲಿ ಅಷ್ಟೊಂದು ಉತ್ಸಾಹ ಕಂಡು ಬಂದಿಲ್ಲ. ಹೊರಗಿನಿಂದ ಬಂದವರ ಸಂಖ್ಯೆ ವಿರಳವಾಗಿತ್ತು. ಬಹುತೇಕ ಮಂದಿ ಮನೆಗಳಲ್ಲೇ ಹೊಸ ವರ್ಷಾಚರಣೆ ಮಾಡಿದರು. ಹೋಟೆಲ್, ಪಬ್ ಮೊದಲಾದ ಕಡೆಗಳಲ್ಲಿ ಜನ ಸೇರುವಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿತ್ತು.

    ಬೀಚ್‌ಗಳು ಭಣಭಣ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಕಡಲ ತೀರಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಿರುವ ಜಿಲ್ಲಾಡಳಿತ ಕ್ರಮ ಫಲ ನೀಡಿದೆ. ದ.ಕ. ಜಿಲ್ಲೆಯಲ್ಲಿ ಜ.2ರವರೆಗೆ ಬೀಚ್ ಪ್ರವೇಶ ನಿರ್ಬಂಧಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಜ.1ರ ಬೆಳಗ್ಗಿನವರೆಗೆ ಮಾತ್ರ ನಿರ್ಬಂಧಿಸಿದ್ದರೂ ಸಾಯಂಕಾಲ ಅಷ್ಟೇನೂ ಪ್ರವಾಸಿಗರು ಕಂಡುಬರಲಿಲ್ಲ.

    ದ.ಕ. 117, ಉಡುಪಿ 17 ಮಕ್ಕಳ ಜನನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021ರ ಹೊಸ ವರ್ಷದ ಮೊದಲ ದಿನ (ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದ ಸಾಯಂಕಾಲ 6ರವರೆಗೆ) 117 ಶಿಶುಗಳ ಜನನವಾಗಿದೆ. ಈ ಪೈಕಿ 17 ಮಕ್ಕಳು ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸಿದ್ದು, 8 ಹೆಣ್ಣು ಮತ್ತು 9 ಗಂಡು ಮಕ್ಕಳು. 8 ಹೆರಿಗೆಗಳು ಸಿಸೇರಿಯನ್ ಎಂದು ಲೇಡಿಗೋಷನ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಉಳಿದ 100 ಮಕ್ಕಳ ಜನನ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಗಿವೆ. ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 17 ಮಕ್ಕಳು ಜನಿಸಿದ್ದು, ಹೆಣ್ಣುಮಕ್ಕಳೇ ಅಧಿಕವಿರುವುದು ವಿಶೇಷ. ಉಡುಪಿ ಬಿಆರ್‌ಎಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 4 ಗಂಡು, 8 ಹೆಣ್ಣು ಸಹಿತ 12 ಮಕ್ಕಳು, ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 2 ಗಂಡು, 1 ಹೆಣ್ಣು, ಕುಂದಾಪುರ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ 2 ಹೆಣ್ಣು ಮಕ್ಕಳ ಜನನವಾಗಿದೆ. ಇತರ ಆಸ್ಪತ್ರೆಗಳ ಮಾಹಿತಿ ಲಭಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts