More

    ಸೂರ್ಯನ ಅತ್ಯಂತ ಹತ್ತಿರದ ಫೋಟೋ ಬಿಡುಗಡೆ: ಕನ್ಫ್ಯೂಸ್​ ಆಗಬೇಡಿ ಇದು ಶೇಂಗಾ ಚಿಕ್ಕಿಯಲ್ಲ…

    ಹವಾಯಿ: ಸೂರ್ಯಮಂಡಲದ ಅಧಿಪತಿ ಸೂರ್ಯನ ಅತ್ಯಂತ ಹತ್ತಿರದ ಫೋಟೋವನ್ನು ಅಮೆರಿಕದ ಬಾಹ್ಯಾಕಾಶ ತಜ್ಞರು ಬಿಡುಗಡೆ ಮಾಡಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ದೂರದರ್ಶಕವಾಗಿರುವ ಡೇನಿಯಲ್​ ಕೆ.ಇನೌವೆ ಸೋಲಾರ್​ ದೂರದರ್ಶಕದ (ಡಿಕೆಐಎಸ್​ಟಿ) ತೆಗೆದಿರುವ ಈ ಪೋಟೋದಲ್ಲಿ ಸೂರ್ಯನ ಮೇಲ್ಮೈ ಥೇಟ್​ ಶೇಂಗಾ ಚಿಕ್ಕಿಯಂತೆಯೇ ಕಾಣಿಸುತ್ತಿದ್ದು, ನೋಡುಗರಿಗೆ ಕುತೂಹಲ ಮೂಡಿಸಿದೆ.

    ಸೂರ್ಯನ ಮೇಲ್ಮೈ ಪ್ಲಾಸ್ಮಾದಿಂದ ತುಂಬಿದ್ದು, ಇದರ ಫೋಟೋವನ್ನು ಹವಾಯಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋಟೋದಲ್ಲಿ ಬಂಗಾರದ ಬಣ್ಣದ ಪ್ಲಾಸ್ಮಾಗಳನ್ನು ಗಮನಿಸಬಹುದಾಗಿದೆ. ಅಲ್ಲಲ್ಲಿ ಕಪ್ಪು ಬಣ್ಣದ ರೇಖೆಗಳಿದ್ದು, ಅದು ಸೂರ್ಯನ ಒಳಮೈನೊಂದಿಗೆ ಪ್ಲಾಸ್ಮಾ ಸಂಪರ್ಕ ಹೊಂದಿರುವ ಸ್ಥಳವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ಲಾಸ್ಮಾದ ಅನೇಕ ಕೋಶಗಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರತಿ ಕೋಶವೂ ನೂರಾರು ಕಿಲೋಮೀಟರ್​ನಷ್ಟು ವ್ಯಾಪ್ತಿ ಹೊಂದಿದೆ.

    ಈ ಹಿಂದೆಯೂ ಸಹ ಅನೇಕ ದೂರದರ್ಶಕಗಳ ಮೂಲಕ ಸೂರ್ಯನ ಮೇಲ್ಮೈ ಫೋಟೋ ತೆಗೆಯಲಾಗಿತ್ತು. ಆದರೆ ಈ ಹಿಂದೆ ತೆಗೆದ ಫೋಟೋಗಳಿಗೆ ಹೋಲಿಸಿದರೆ ಈ ಫೋಟೋ ಐದು ಪಟ್ಟು ಹೆಚ್ಚಿನ ರೆಸಲ್ಯೂಷನ್​​ ಹೊಂದಿದೆ ಎನ್ನಲಾಗಿದೆ. ಫೋಟೋ ಜತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸೂರ್ಯನ ಮೇಲ್ಮೈನ 200 ಮಿಲಿಯನ್​ ಚದರ ಕಿ.ಮೀ. ಜಾಗದಲ್ಲಿ 10 ನಿಮಿಷಗಳ ಕಾಲದಲ್ಲಿ ಆಗುವ ಬದಲಾವಣೆಗಳನ್ನು ಚಿತ್ರೀಕರಿಸಲಾಗಿದೆ. 10 ನಿಮಿಷಗಳ ವಿಡಿಯೋವನ್ನು 14 ಸೆಕೆಂಡುಗಳಿಗೆ ಕ್ರೋಢೀಕರಿಸಲಾಗಿದೆ. ಡಿಸೆಂಬರ್​ 10ರಂದು ಈ ಫೋಟೋ ಮತ್ತು ವಿಡಿಯೋವನ್ನು ಚಿತ್ರೀಕರಿಸಿರುವುದಾಗಿ ಡಿಕೆಐಎಸ್​ಟಿಯ ನಿರ್ದೇಶಕ ಥಾಮಸ್​ ರಿಮ್ಮೆಲೆ ತಿಳಿಸಿದ್ದಾರೆ. ಮುಂದಿನ ಆರು ತಿಂಗಳುಗಳಲ್ಲಿ ಸೂರ್ಯನ ಬಗ್ಗೆ ಇನ್ನಷ್ಟು ವಿಷಯಗಳನ್ನು ಅಧ್ಯಯನ ಮಾಡುವುದಾಗಿ ಅವರು ತಿಳಿಸಿದ್ದಾರೆ.

    ಡಿಕೆಐಎಸ್​ಟಿ ಕೇವಲ ಸೂರ್ಯನ ಮೇಲ್ಮೈನ ಫೋಟೋ ತೆಗೆಯುವುದು ಮಾತ್ರವಲ್ಲದೆ ಅಲ್ಲಿನ ಕಾಂತೀಯ ಕ್ಷೇತ್ರದ ಬಗ್ಗೆಯೂ ಮಾಹಿತಿ ನೀಡಲಿದೆ. ಇದರಿಂದ ಸೂರ್ಯನ ಕೆಲವು ರಹಸ್ಯಗಳನ್ನು ಭೇದಿಸಲು ಸಹಾಯವಾಗಲಿದೆ ಎಂದು ಥಾಮಸ್​ ತಿಳಿಸಿದ್ದಾರೆ.

    ಇಂದು ಸೂರ್ಯನ ಫೋಟೋ ಬಿಡುಗಡೆಗೊಳ್ಳುತ್ತಿದ್ದಂತೆಯೇ ಜನಸಾಮಾನ್ಯರು ಈ ಫೋಟೋ ಮತ್ತು ವಿಡಿಯೋ ಬಗ್ಗೆ ಭಾರಿ ಪ್ರಮಾಣದ ಚರ್ಚೆ ಆರಂಭಿಸಿದ್ದಾರೆ. ಥೇಟ್​ ಚಿಕ್ಕಿಯಂತೆ ಕಾಣುವ ಈ ಫೋಟೋವನ್ನು ನಿಜವಾದ ಚಿಕ್ಕಿ ಫೋಟೋ ಜತೆ ಕೊಲ್ಯಾಜ್​ ಮಾಡಿ ಟ್ವಿಟರ್​ನಲ್ಲಿ ಹಾಕುತ್ತಿದ್ದಾರೆ ಟ್ವಿಟ್ಟಿಗರು. ಕೇವಲ ಚಿಕ್ಕಿ ಮಾತ್ರವಲ್ಲದೆ, ಮೆಕ್ಕೆ ಜೋಳ ಮತ್ತು ಪಾಪ್​ ಕಾರ್ನ್​ಗೂ ಸಹ ಸೂರ್ಯನನ್ನು ಹೋಲಿಕೆ ಮಾಡಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts