More

    ಸುರತ್ಕಲ್ ರೈಲು ನಿಲ್ದಾಣಕ್ಕೆ ಕಾಯಕಲ್ಪ, ರಾಜ್ಯ ಸರ್ಕಾರ, ಮುಡಾದಿಂದ 1.50 ಕೋಟಿ ರೂ.ವೆಚ್ಚದ ಯೋಜನೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಿಂದ 17.2 ಕಿ.ಮೀ. ಸಮಾನ ದೂರದಲ್ಲಿರುವ ಸುರತ್ಕಲ್ ರೈಲು ನಿಲ್ದಾಣದ ಅಭಿವೃದ್ಧಿಯ ಶಖೆ ಆರಂಭವಾಗುವ ಸೂಚನೆ ಗೋಚರಿಸುತ್ತಿದೆ.

    ಸುರತ್ಕಲ್ ನಿಲ್ದಾಣ ಅಭಿವೃದ್ಧಿಗೆ ರಾಜ್ಯ ನಗರಾಭಿವೃದ್ಧಿ ಸಚಿವಾಲಯ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಹಯೋಗದಲ್ಲಿ 1.50 ಕೋಟಿ ರೂ.ವೆಚ್ಚದ ಯೋಜನೆ ರೂಪುಗೊಂಡು, 50 ಲಕ್ಷ ರೂ.ಬಿಡುಗಡೆಯಗಿದೆ. ಈ ಮೊತ್ತದಲ್ಲಿ ರೈಲು ನಿಲ್ದಾಣದ ಒಳಗೆ ನೆಲಕ್ಕೆ ಟೈಲ್ಸ್, ನಿಲ್ದಾಣದ ಹೊರಗೆ ಇಂಟರ್‌ಲಾಕ್, ಕಾಂಕ್ರೀಟ್, ಎಲ್‌ಇಡಿ ವ್ಯವಸ್ಥೆ ಮುಂತಾದ ಮೂಲಸೌಕರ್ಯ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ (ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್) ಇತ್ತೀಚೆಗೆ ಆರಂಭವಾಗಿದೆ. ಇದು ಸ್ಥಳೀಯರ 10 ವರ್ಷ ಹಿಂದಿನ ಬೇಡಿಕೆ.

    ದೂರದ ರಾಜ್ಯಗಳ ಜನರ ವಾಸ: ಪ್ರಸ್ತುತ ಮುಂಬೈ, ಗುಜರಾತ್ ಮುಂತಾದ ಪ್ರದೇಶಗಳಿಗೆ ಸಾಗುವ ಲಾರಿಗಳನ್ನು ತೆರೆದ ಗೂಡ್ಸ್‌ಗಳಲ್ಲಿ ಹೊತ್ತೊಯ್ಯುವ ರೋರೋ ಸೇವೆ ಸುರತ್ಕಲ್ ನಿಲ್ದಾಣದಿಂದ ನಡೆಯುತ್ತಿವೆ. ಮಂಗಳೂರು- ಮುಂಬೈ ಮತ್ಸೃಗಂಧ ಎಕ್ಸ್‌ಪ್ರೆಸ್, ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್, ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ಸಹಿತ ದೂರದ ನಗರಗಳಿಗೆ ಪ್ರಯಾಣಿಸುವ ಕೆಲವು ರೈಲುಗಳಿಗಷ್ಟೇ ಇಲ್ಲಿ ನಿಲುಗಡೆ ಇದೆ.

    ಎರ್ನಾಕುಳಂ ಜಂಕ್ಷನ್- ಹಝ್ರತ್ ನಿಜಾಮುದೀನ್ ಮಂಗಳಾ ಎಕ್ಸ್‌ಪ್ರೆಸ್ ರೈಲಿಗೆ ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆ ಒದಗಿಸಬೇಕು ಎನ್ನುವುದು ಕೂಡ ಇಲ್ಲಿ ವಿವಿಧ ಉದ್ಯಮಗಳಲ್ಲಿ ದುಡಿಯುತ್ತಿರುವ ಹೊರ ಭಾಗದ ಜನರ ದೀರ್ಘ ಕಾಲದ ಬೇಡಿಕೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್), ಎನ್‌ಐಟಿಕೆ, ಮಂಗಳೂರು ವಿಶೇಷ ಆರ್ಥಿಕ ವಲಯ, ಎಂಸಿಎಫ್ ಮುಂತಾದ ಉದ್ಯಮಗಳ ನಡುವೆ ಇರುವ ಸುರತ್ಕಲ್ ರೈಲು ನಿಲ್ದಾಣ ರೋರೋ ಸೇವೆಗೆ ಅನುಕೂಲಕರವಾಗಿದೆ.

    ಮಂಗಳೂರು ಉತ್ತರ ಸ್ಟೇಷನ್!: ಸುರತ್ಕಲ್ ನಿಲ್ದಾಣವನ್ನು ‘ಮಂಗಳೂರು ಉತ್ತರ ರೈಲು ನಿಲ್ದಾಣ’ ಎಂದು ಹೆಸರು ಬದಲಾವಣೆ ನಿಲ್ದಾಣದ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚು ಸೂಕ್ತ ಎಂದು ರೈಲ್ವೆ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ಸುರತ್ಕಲ್ ಪೇಟೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಿಂದ ಇಲ್ಲಿನ ರೈಲು ನಿಲ್ದಾಣಕ್ಕೆ ವಾಹನದಲ್ಲಿ 10 ನಿಮಿಷ ಪ್ರಯಾಣದ ಅವಧಿ.

    ನಡೆದರೂ ತಲುಪುವುದು ಸುಲಭ. ರೈಲಿನಲ್ಲಿ ಸುರತ್ಕಲ್ ಪೇಟೆಗೆ ಬಂದು, ಮಂಗಳೂರು ಮುಖ್ಯ ನಗರ ತಲುಪುವುದು ಸುಲಭ. ಮಂಗಳೂರು ಜಂಕ್ಷನ್ ನಿಲ್ದಾಣದಿಂದ ನಗರ ತಲುಪುವುದು ಸುಲಭವಿಲ್ಲ. ನಿಲ್ದಾಣದ ಹೆಸರಿನೊಂದಿಗೆ ಮಂಗಳೂರು ಸೇರುವುದರಿಂದ ನಿಲ್ದಾಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವುದು ಸುಲಭ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

    ಈ ನಿಲ್ದಾಣವೇ ಯಾಕೆ?: ಮಂಗಳೂರು ಉಪನಗರದಲ್ಲಿ ಬಹುದುಡ್ಡ ಟರ್ಮಿನಲ್ ರೈಲು ನಿಲ್ದಾಣವಾಗಿ ಅಭಿವೃದ್ಧಿಯಾಗಲು ಅವಕಾಶವಿದ್ದ ಸುರತ್ಕಲ್ ರೈಲು ನಿಲ್ದಾಣದಲ್ಲಿ ಈಗ ನಿಲುಗಡೆಯಾಗುತ್ತಿರುವ ದೂರದ ಊರುಗಳ ರೈಲುಗಳು ಕಡಿಮೆ. ಪ್ರಸ್ತುತ ಕೊಂಕಣ ರೈಲ್ವೆ ಈ ಭಾಗದಲ್ಲಿ ಹೆಚ್ಚು ಅವಲಂಬಿತ ಆಗಿರುವುದು ಮಂಗಳೂರು ಜಂಕ್ಷನ್ ನಿಲ್ದಾಣವನ್ನು.

    ಸುರತ್ಕಲ್ ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಗೊಳಿಸಿ ರೈಲ್ವೆ ಸೇವೆಯಲ್ಲಿ ಹೆಚ್ಚಿನ ಸ್ವಾವಲಂಬನೆ ಹೊಂದಲು ಕೊಂಕಣ ರೈಲ್ವೆಗೆ ಅವಕಾಶವಿದೆ. ರೈಲು ಪ್ರಯಾಣ ಆರಂಭ ಮತ್ತು ಮುಕ್ತಾಯದ ಎಲ್ಲ ಸೌಲಭ್ಯಗಳನ್ನು ಟರ್ಮಿನಲ್ ರೈಲ್ವೆ ನಿಲ್ದಾಣ ಹೊಂದಿರಬೇಕು. ಮುಖ್ಯವಾಗಿ ನೀರು ತುಂಬುವುದು, ರೈಲ್ವೆ ಸಿಬ್ಬಂದಿ ವಿಶ್ರಾಂತಿ ಪಡೆಯುವ ಕೊಠಡಿ, ರೈಲ್ವೆ ಬೋಗಿಗಳನ್ನು ನಿಲುಗಡೆಗೊಳಿಸಲು ಹೆಚ್ಚುವರಿ ಹಳಿಗಳನ್ನು ಟರ್ಮಿನಲ್ ನಿಲ್ದಾಣ ಹೊಂದಿರಬೇಕು. ವಿದ್ಯುದೀಕರಣ ಪೂರ್ಣಗೊಂಡಿರುವ ಕಾರಣ ಡೀಸೆಲ್ ತುಂಬುವ ವ್ಯವಸ್ಥೆ ಆವಶ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts