More

    ನೂತನ ರಸ್ತೆಗೂ ದುರಸ್ತಿ ಭಾಗ್ಯ!

    ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ದುರಸ್ತಿ ಮಾಡುವ ಸ್ಥಿತಿಗೆ ತಲುಪಿವೆ. ಮತ್ತೊಂದೆಡೆ ನೂತನ ಚರಂಡಿ ಮಾರ್ಗಗಳು ಕುಸಿದು ಬೀಳುತ್ತಿದ್ದು, ಇದು ಕಳಪೆ ಕಾಮಗಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಬೆಳಗಾವಿಯ ನೆಹರು ನಗರ ಹಾಗೂ ಶಿವಬಸವ ನಗರದ ನಡುವಿನ ಕೆಪಿಟಿಸಿಎಲ್ ಮಾರ್ಗದ 0.75 ಕಿ.ಮೀ. ಉದ್ದದ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ 2018ರಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ರಸ್ತೆಗಳು ಹಾಳಾಗುತ್ತಿವೆ. ಮುಖ್ಯ ರಸ್ತೆಯ ಎರಡೂ ಬದಿಗೆ ನಿರ್ಮಿಸಿರುವ ುಟ್‌ಪಾತ್‌ಗಳು ಹಾಳಾಗುತ್ತಿವೆ.

    ಹೈಟೆಕ್ ನೆಪ: ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರಥಮ ಹಂತವಾಗಿ ಬೆಳಗಾವಿ ನಗರದ ಕೆಪಿಟಿಸಿಎಲ್ ಕಚೇರಿ ಎದುರಿಗಿನ 0.75 ಕಿ.ಮೀ. ಉದ್ದದ ರಸ್ತೆಯನ್ನು ಹೈಟೆಕ್ ಮಾಡುವುದಾಗಿ ಸ್ಮಾರ್ಟ್‌ಸಿಟಿ ಹಾಗೂ ಮಹಾನಗರ ಪಾಲಿಕೆ ಇಂಜಿನಿಯರ್‌ಗಳು ಹೇಳುತ್ತಿದ್ದಾರೆ. ಆದರೆ, ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಅಲ್ಲದೆ, ಅಲ್ಲಿನ ಸಿಮೆಂಟ್ ರಸ್ತೆ ನಿರ್ಮಿಸಿ ವರ್ಷ ಪೂರ್ಣಗೊಂಡಿಲ್ಲವಾದರೂ ತಗ್ಗು-ಗುಂಡಿ ಬಿದ್ದಿವೆ.

    ಪ್ರಧಾನಿ ಮೋದಿಗೆ ದೂರು

    ಬೆಳಗಾವಿಯಲ್ಲಿ ಕಳೆದ 2 ವರ್ಷಗಳಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಬೀದಿ ದೀಪ ಸೇರಿ ವಿವಿಧ ಕಾಮಗಾರಿ ನಡೆಯುತ್ತಿವೆ. ಆದರೆ, ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ಅಲ್ಲದೆ, ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೇ ವರ್ಷ ಬಸ್ ತಂಗುದಾಣ, ಶೌಚಗೃಹಗಳು, ಬೀದಿ ದೀಪ ಅಳವಡಿಸಲಾಗಿದೆ. ಆದರೆ, ಅವು ಈಗ ದುರಸ್ತಿಗೆ ಬಂದಿವೆ. ಈ ಕುರಿತು ಸ್ಮಾರ್ಟ್ ಸಿಟಿಯ ಸ್ಥಳೀಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಸ್ಪಂದಿಸುತ್ತಿಲ್ಲ. ಹಾಗಾಗಿ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಪ್ರೊಬೆಷನಲ್ ಪೋರಂ ದೂರು ಸಲ್ಲಿಸಿದೆ.

    ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಮೇಲ್ನೋಟಕ್ಕೆ ಕಳಪೆಯಾಗಿವೆ. ನೂತನವಾಗಿ ನಿರ್ಮಿಸಿರುವ ಸಿಮೆಂಟ್ ರಸ್ತೆಗಳನ್ನೆಲ್ಲ ದುರಸ್ತಿ ಮಾಡಲಾಗುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
    | ಪ್ರೊ. ಜಿ.ಕೆ. ಖಡಬಡಿ ಶಿವಬಸವ ನಗರ ನಿವಾಸಿ

    ಬೆಳಗಾವಿ ಕೆಪಿಟಿಸಿಎಲ್ ಕಚೇರಿ ಮುಂಭಾಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಸಿಮೆಂಟ್ ರಸ್ತೆಯಲ್ಲಿ ಸಣ್ಣ-ಪುಟ್ಟ ಬಿರುಕು ಕಂಡುಬಂದಿದ್ದು, ತಜ್ಞರಿಂದ ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗುವುದು. ಈ ರಸ್ತೆಯ ನಿರ್ವಹಣೆಯನ್ನು 5 ವರ್ಷ ಗುತ್ತಿಗೆದಾರರಿಗೇ ವಹಿಸಲಾಗಿದೆ. ಸದ್ಯ ಎಲ್ಲ ರಸ್ತೆಗಳ ಗುಣಮಟ್ಟ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.
    | ಶಶಿಧರ ಕುರೇಶ ಸ್ಮಾರ್ಟ್‌ಸಿಟಿ ಎಂಡಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts