More

    ಸಂಸತ್ ಶಿಲಾನ್ಯಾಸಕ್ಕೆ ಉಡುಪಿ ಪುರೋಹಿತ

    ಉಡುಪಿ: ದೇಶದ ಶಕ್ತಿಕೇಂದ್ರ ನೂತನ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮದ ಪೌರೋಹಿತ್ಯ ನಿರ್ವಹಣೆಯ ಅಪೂರ್ವ ಅವಕಾಶ ಉಡುಪಿಯ ವೇದಶಿಕ್ಷಕರಿಗೂ ಲಭಿಸಿದೆ.

    ಪ್ರಧಾನಿ ನರೇಂದ್ರ ಮೋದಿಯವರಿಂದ ನೆರವೇರಿದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳ ಜವಾಬ್ದಾರಿಯನ್ನು ಶೃಂಗೇರಿ ಮಠಕ್ಕೆ ವಹಿಸಲಾಗಿತ್ತು. ಈ ಪೈಕಿ ಹರಿಯಾಣ ಗುರುಗ್ರಾಮದಲ್ಲಿರುವ ಶೃಂಗೇರಿ ಮಠದ ಪುರೋಹಿತ, ಶಂಕರನಾರಾಯಣ ಮೂಲದ ರಾಘವೇಂದ್ರ ಭಟ್ಟ ಎಂಬವರೂ ಭಾಗಿಯಾಗಿದ್ದರು.
    ಶೃಂಗೇರಿ ಮಠದಿಂದ ಟಿ.ವಿ ಶಿವಕುಮಾರ ಶರ್ಮ, ಕೆ.ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಗಣೇಶ ಸೋಮಯಾಜಿ, ಸಿ.ನಾಗರಾಜ ಅಡಿಗ ಹಾಗೂ ದೆಹಲಿಯಿಂದ ರಾಘವೇಂದ್ರ ಭಟ್ಟ, ಋಷ್ಯಶೃಂಗ ಭಟ್ ಪಾಲ್ಗೊಂಡಿದ್ದರು.

    ‘ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರಿಶಂಕರ್ ಸೂಚನೆಯಂತೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಯಾರಿ ನಡೆಸಿದೆವು. ಅಧಿಕಾರಿಗಳು ಉತ್ತಮ ವ್ಯವಸ್ಥೆ ಮಾಡಿಕೊಟ್ಟು, ಸಹಕರಿಸಿದರು. ಗುರುವಾರ ಬೆಳಗ್ಗೆ 8ರಿಂದ 11 ಗಂಟೆವರೆಗೆ ಗುರು ಗಣಪತಿ ಪೂಜೆ, ಪುಣ್ಯಾವಾಚನ, ಭುವನೇಶ್ವರಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶೃಂಗೇರಿಯಿಂದ ಜಗದ್ಗುರುಗಳು ಪೂಜಿಸಿ ಕಳುಹಿಸಿಕೊಟ್ಟಿದ್ದ ಶಂಕು, ನವರತ್ನ ಪೀಠ ಇರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಧ್ಯಾಹ್ನ 12.55ಕ್ಕೆ ಸಂಕಲ್ಪಿಸಿ ಶಿಲಾನ್ಯಾಸ ನೆರವೇರಿಸಲಾಯಿತು’ ಎಂದು ರಾಘವೇಂದ್ರ ಭಟ್ಟ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ದಿ.ಶಂಕರಭಟ್ಟ- ಸುಶೀಲಾ ಭಟ್ಟ ದಂಪತಿ ಪುತ್ರ ರಾಘವೇಂದ್ರ ಭಟ್ಟ ಶಂಕರನಾರಾಯಣದ ಕುಪ್ಪಾರು ನಿವಾಸಿ. ಊರಿನಲ್ಲೇ ಪ್ರೌಢಶಾಲೆ ಶಿಕ್ಷಣ ಪಡೆದು, ಬಳಿಕ ಕೊಲ್ಲೂರು ಎಸ್‌ಜೆಎಸ್ ವೇದ ಪಾಠಶಾಲೆಯಲ್ಲಿ ವೇದಮೂರ್ತಿ ಮಂಜುನಾಥ ಅಡಿಗರಲ್ಲಿ ವೇದಾಧ್ಯಯನ ಶಿಕ್ಷಣ ಪೂರೈಸಿದ್ದರು. ನಂತರ ಕಮಲಶಿಲೆ ಅಗ್ನಿಹೋತ್ರಿ ಶ್ರೀ ವಾಮನ ಭಟ್ ಅವರಿಂದ ದಶಗ್ರಂಥ ಪೌರೋಹಿತ್ಯ ಅಭ್ಯಾಸ ಮಾಡಿದ್ದರು. ಶೃಂಗೇರಿ ಮಠದ ದೆಹಲಿ ಶಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿರುವ ಇವರು 2011ರಿಂದ ಗುರುಗ್ರಾಮದ ವೇದ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ. ಇವರಲ್ಲಿ ಪ್ರತಿವರ್ಷ 15ರಿಂದ 20 ವಿದ್ಯಾರ್ಥಿಗಳು ವೇದಶಿಕ್ಷಣ ಕಲಿಯುತ್ತಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನೂತನ ಸಂಸತ್ತಿನ ಶಿಲಾನ್ಯಾಸ ಧಾರ್ಮಿಕ ಕಾರ್ಯಕ್ರಮ ಅವಿಸ್ಮರಣೀಯ ಕ್ಷಣವಾಗಿತ್ತು. ಶಿಲಾನ್ಯಾಸ ಕಾರ್ಯಕ್ರಮದ ಪ್ರತಿ ಪೂಜೆಯ ಬಗ್ಗೆ ಪ್ರಧಾನಿ ಅವರಿಗೆ ನಾನೇ ವಿವರವಾಗಿ ತಿಳಿಸಿದೆ. ಶೃಂಗೇರಿ ಮಠದಿಂದ ಜಗದ್ಗುರುಗಳು ಕಳುಹಿಸಿಕೊಟ್ಟಿದ್ದ ಶ್ರೀ ಶಾರದಾಂಬೆ ಪ್ರಸಾದ, ಮಂತ್ರಾಕ್ಷತೆ, ಶಾಲು ಒಂದು ಪುಸ್ತಕವನ್ನು ಪ್ರಧಾನಿ ಅವರಿಗೆ ನೀಡಿದ್ದೇವೆ.
    – ರಾಘವೇಂದ್ರ ಭಟ್ಟ, ಗುರುಗ್ರಾಮ ಶೃಂಗೇರಿ ಶಾಖಾ ಮಠದ ಅಧ್ಯಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts