More

    ಆಟೋ ಪ್ರಯಾಣಕ್ಕೆ ಹೊಸ ದರ ನಿಗದಿ

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಮೊದಲ 1.5 ಕಿ.ಮೀ. ಗೆ 30 ರೂ., ನಂತರದ ಪ್ರತಿ ಕಿ.ಮೀ.ಗೆ 15 ರೂ. ನಿಗದಿ ಪಡಿಸಲಾಗಿದ್ದು, ಮಾರ್ಚ್ 1ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾ ಪ್ರಭು ಹೇಳಿದರು.

    ಆಟೋ ಪ್ರಯಾಣದರ ಪರಿಷ್ಕರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಆಟೋ ಚಾಲಕರ ವಿವಿಧ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೊಸ ದರಕ್ಕೆ ಪದಾಧಿಕಾರಿಗಳು ಸಹಮತ ಹೊಂದಿರುವುದು ಸಂತಸ ತಂದಿದೆ ಎಂದರು.

    2012ರಿಂದ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿರಲಿಲ್ಲ. ಅಗತ್ಯ ವಸ್ತುಗಳ ದರದಲ್ಲಿ ಏರಿಕೆ ಹಿನ್ನೆಲೆಯಲ್ಲಿ ಹೊಸ ದರ ನಿಗದಿ ಪಡಿಸಲಾಗಿದೆ. ಇದರಿಂದ ಚಾಲಕರು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ರಾತ್ರಿ 10ರಿಂದ ಮುಂಜಾನೆ 5 ಗಂಟೆ ವರೆಗೆ ನಿಗದಿತ ದರ ಒಂದೂವರೆ ಪಟ್ಟಿಗಿಂತ ಹೆಚ್ಚು ವಸೂಲು ಮಾಡುವಂತಿಲ್ಲ ಎಂದು ಸೂಚಿಸಿದರು.

    ಕಾಯುವಿಕೆಗೆ ಮೊದಲ 15 ನಿಮಿಷಕ್ಕೆ ಯಾವುದೇ ದರವಿಲ್ಲ. ನಂತರದ ಪ್ರತಿ 15 ನಿಮಿಷಕ್ಕೆ 5 ರೂ. ನೀಡಬೇಕು. 20 ಕೆ.ಜಿ. ತೂಕದ ವರೆಗೂ ಲಗೇಜ್ ಶುಲ್ಕವಿಲ್ಲ. ನಂತರದ ಪ್ರತಿ ಕೆ.ಜಿ.ಗೆ 5 ರೂ. ನಿಗದಿಡಿಸಲಾಗಿದೆ. ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ವಿಶ್ವಾಸ ಗಳಿಸಬೇಕು ಎಂದು ತಿಳಿಸಿದರು.

    ತೂಕ,ಕಾನೂನು ಮಾಪನ ಇಲಾಖೆ ನಿರೀಕ್ಷಕ ರಾಗ್ಯಾ ನಾಯಕ್ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿ 3600 ಆಟೋಗಳಿವೆ. ಮೊದಲ ಹಂತದಲ್ಲಿ ಜ.30ರಿಂದ ಫೆಬ್ರವರಿ 28ರ ಒಳಗೆ ಮೀಟರ್‌ಗಖಳ ದರ ಪರಿಷ್ಕರಿಸಲಾಗುವುದು.ಚಿತ್ರದುರ್ಗದ ಬಳಿಕ ಉಳಿದ ತಾಲೂಕುಗಳಲ್ಲೂ ಈ ಕಾರ್ಯ ನಡೆಯಲಿದೆ ಎಂದರು.
    ಜಿಲ್ಲಾ ಸಹಾಯಕ ನಿಯಂತ್ರಕ ಗುರುಪ್ರಸಾದ್ ಮಾತನಾಡಿ, ಹೊಸ ಮೀಟರ್ ಖರೀದಿಗೆ ಹೆಚ್ಚಿನ ದರ ವಸೂಲು ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಅಪ್‌ಡೇಟ್‌ಗೆ ನಿಗದಿತ ಶುಲ್ಕ ಪಡೆಯಬೇಕು. ಸಂಚಾರ ಪೊಲೀಸ್‌ಠಾಣೆ, ಆಟೋ ಚಾಲಕರ ಸಂಘಗಳೊಂದಿಗೆ ವಿಶೇಷ ಶಿಬಿರ ಆಯೋಜಿಸಬೇಕು. ದೂರು ಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು.

    ಆರ್‌ಟಿಒ ಪ್ರಮುಥೇಶ್ ಮಾತನಾಡಿ, ಚಿತ್ರದುರ್ಗ-3600, ಚಳ್ಳಕೆರೆ-851, ಹೊಳಲ್ಕೆರೆ-320, ಹೊಸದುರ್ಗ-380, ಮೊಳಕಾಲ್ಮೂರು-480, ಹಿರಿಯೂರು ತಾಲೂಕಲ್ಲಿ 950 ಆಟೋಗಳಿವೆ ಎಂದರು. ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಹೇಮಂತ್,ಸಂಚಾರ ಪೊಲೀಸ್ ಠಾಣೆ ಪಿಐ ಟಿ.ರಾಜು ಮತ್ತಿತರರು ಇದ್ದರು.

    *ಬಾಕ್ಸ್*ದರಪಟ್ಟಿ ವಿವರ
    ಮೊದಲ 1.5 ಕಿ.ಮೀ. ಗೆ 30 ರೂ.
    ನಂತರದ ಪ್ರತಿ 1 ಕಿ.ಮೀ.ಗೆ 15 ರೂ.
    ರಾತ್ರಿ 10ರಿಂದ ಬೆಳಗ್ಗೆ 5 ರವರೆಗೆ ಒಂದೂವರೆ ಪಟ್ಟು ಹೆಚ್ಚು.
    ಕಾಯುವಿಕೆಗೆ ಮೊದಲ 15 ನಿಮಿಷ ಉಚಿತ.
    ನಂತರದ ಪ್ರತಿ 15 ನಿಮಿಷಕ್ಕೆ 5 ರೂ.
    20 ಕೆ.ಜಿ. ವರೆಗೆ ಲಗೇಜ್ ಶುಲ್ಕವಿಲ್ಲ.
    ನಂತರದ ಪ್ರತಿ ಕೆ.ಜಿ.ಗೆ 5 ರೂ.

    *ಸೌಲಭ್ಯ ಕಲ್ಪಿಸಲು ಮನವಿ
    ಆಟೋಗಳಿಗೆ ಪಾರ್ಕಿಂಗ್‌ಗೆ ಸ್ಥಳ ನಿಗದಿಪಡಿಸಬೇಕು. ನಿವೇಶನ ಗುರುತಿಸಿ ಅರ್ಹರಿಗೆ ಮನೆ ನಿರ್ಮಿಸಿಕೊಡುವಂತೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಪರಿಶೀಲಿಸುವುದಾಗಿ ತಿಳಿಸಿದರು.

    *ಕೋಟ್
    ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಸಂಚರಿಸುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಆಟೋಗಳಲ್ಲಿ 6ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರಬಾರದು. ಪೊಲೀಸ್ ಇಲಾಖೆ ಎಚ್ಚರಿಕೆ ಮಧ್ಯೆಯೂ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ.
    ಕೆ.ಪರಶುರಾಮ್
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts