More

    ಹೊಸ ಡ್ಯಾಂನಿಂದ ಕುಡಿವ ನೀರು

    ಮಂಗಳೂರು: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಬೇಡಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಅಡ್ಯಾರಿನ ಹೊಸ ಡ್ಯಾಂನಿಂದ ನೀರು ಪೂರೈಕೆ ಮಾಡಲು 10 ಎಕರೆ ಸ್ಥಳ ನಿಗದಿಪಡಿಸಲು ಪಾಲಿಕೆ ನಿರ್ಧರಿಸಿದೆ.
    ಮೇಯರ್ ದಿವಾಕರ್ ಅಧ್ಯಕ್ಷತೆಯಲ್ಲಿ ಗುರುವಾರ ಮನಪಾ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು. ತುಂಬೆಯಲ್ಲಿರುವ ಹೊಸ ಡ್ಯಾಂನ ಕೆಳಭಾಗದಲ್ಲಿ ನೂತನ ಡ್ಯಾಂ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದ ತುಂಬೆ ಹಾಗೂ ಅಡ್ಯಾರು ಡ್ಯಾಂಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಿಸಬಹುದು. ಇಲ್ಲಿಂದ ಮಂಗಳೂರು ನಗರಕ್ಕೆ ನೀರು ಪೂರೈಸಲು ಬೇಕಾದ ಮೂಲಸೌಕರ್ಯ ಸೃಷ್ಟಿಸಲು ಅಡ್ಯಾರ್‌ನಲ್ಲಿ ಲಭ್ಯವಿರುವ 10 ಎಕರೆ ಜಾಗ ಪಾಲಿಕೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಮೇಯರ್ ದಿವಾಕರ್ ಪತ್ರ ಬರೆದಿದ್ದಾರೆ ಎಂದು ಸಚೇತಕ ಪ್ರೇಮಾನಂದ ಶೆಟ್ಟಿ ತಿಳಿಸಿದರು.

    ತುಂಬೆ ಪಂಪಿಂಗ್ ಸ್ಟೇಷನ್‌ಗೆ ಮೆಸ್ಕಾಂನಿಂದ ಎಕ್ಸ್‌ಪ್ರೆಸ್ ಫೀಡರ್ ಲೈನ್ ನೀಡಲಾಗಿದ್ದರೂ ಮುನ್ಸೂಚನೆ ಇಲ್ಲದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಮಹಾನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ಕಾಂಗ್ರೆಸ್‌ನ ನವೀನ್ ಡಿಸೋಜ ಗಮನ ಸೆಳೆದರು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದ ಮೇಯರ್ ಪಾಲಿಕೆಯ ನೀರು ವಿಭಾಗದ ಅಧಿಕಾರಿಗಳಿಗೆ ಮುಂಚಿತ ಮಾಹಿತಿ ನೀಡಿಯೇ ವಿದ್ಯುತ್ ಕಡಿತಗೊಳಿಸಬೇಕು ಎಂದರು.

    ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಶರತ್ ಕುಮಾರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.

    ಐದು ಎಕರೆ ಜಾಗದಲ್ಲಿ ಗೋಶಾಲೆ
    ಬೀಡಾಡಿ ಜಾನುವಾರುಗಳಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಐದು ಎಕರೆ ಜಾಗ ನೀಡಲು ಪಣಂಬೂರಿನ ಎನ್‌ಎಂಪಿಟಿಯ ಅಧ್ಯಕ್ಷರು ಮುಂದೆ ಬಂದಿದ್ದಾರೆ. ಇಡೀ ವ್ಯವಸ್ಥೆಯನ್ನು ನಿರ್ವಹಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದು ತ್ವರಿತಗತಿಯಲ್ಲಿ ಆಗಬೇಕಾಗಿದೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು. ಪೂರಕವಾಗಿ ಮಾತನಾಡಿದ ವರುಣ್ ಚೌಟ, 1000ಕ್ಕೂ ಹೆಚ್ಚು ಜಾನುವಾರುಗಳು ಪಣಂಬೂರು ಪ್ರದೇಶದಲ್ಲಿ ಅಲೆದಾಡಿಕೊಂಡಿವೆ, ಹಾಗಾಗಿ ಇಲ್ಲಿ ಗೋಶಾಲೆ ತೆರೆಯುವುದು ಸೂಕ್ತ ಎಂದರು.

    11ರಂದು ಟ್ರಾಫಿಕ್ ಸಭೆ
    ಮಂಗಳೂರು ನಗರದಲ್ಲಿನ ಸಂಚಾರ ವ್ಯವಸ್ಥೆ, ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ, ಅಧಿಕಾರಿಗಳೊಂದಿಗೆ ಜ.11ರಂದು ಸಭೆ ನಡೆಸಲಾಗುವುದು. ಈ ಸಭೆಗೆ ಡಿಸಿಪಿ, ಎಸಿಪಿಗಳು ಕೂಡ ಆಗಮಿಸಬೇಕು ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದರು.

    ನಾರಾಯಣಗುರು ರೈಲ್ವೆ ಸ್ಟೇಷನ್
    ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ‘ಬ್ರಹ್ಮಶ್ರೀ ನಾರಾಯಣ ಗುರುದೇವ ರೈಲ್ವೆ ಸ್ಟೇಷನ್’ ಎಂದು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ರವ್ೂ ಒತ್ತಾಯಿಸಿದರು. ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಇದೇ ರೈಲು ನಿಲ್ದಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಈಗಾಗಲೇ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts