More

    ಹೊಸ ಪರಿಕರದಲ್ಲಿ ಮೇಳೈಸಲಿದೆ ಕಟೀಲು ಮೇಳ

    ನಿಶಾಂತ್ ಶೆಟ್ಟಿ ಕಿಲೆಂಜೂರು

    ಕಟೀಲು ಯಕ್ಷಗಾನ ಮಂಡಳಿಯ ಆರೂ ಮೇಳಗಳಲ್ಲಿ ಮುಂದಿನ ತಿರುಗಾಟಕ್ಕೆ ಹೊಸ ಪರಿಕರ ತಯಾರಾಗುತ್ತಿದೆ. 15 ಕಲಾವಿದರು ಒಂದು ತಿಂಗಳಿಂದ ಈ ಕಾರ್ಯದಲ್ಲಿ ನಿರತರಾಗಿದ್ದು, ಮುಂದಿನ ಎರಡು ತಿಂಗಳು ಈ ಕೆಲಸ ನಡೆಯಲಿದೆ.

    ಪ್ರತಿವರ್ಷ ಮೇಳದ ವೇಷದ ಬಟ್ಟೆ ಹಾಳಾಗಿದ್ದರೆ ಸರಿಪಡಿಸುವುದು, ಕಿರೀಟ ರಿಪೇರಿ ಮಾಡುವುದು ಮಾಮೂಲು ಪ್ರಕ್ರಿಯೆ. ನಾಲ್ಕೈದು ವರ್ಷಗಳಿಗೊಮ್ಮೆ ಹೊಸ ಉಡುಗೆ ತಯಾರಿಸಲಾಗುತ್ತದೆ. ಅದರಂತೆ ಈ ವರ್ಷ ಎಲ್ಲ ಜವುಳಿ, ಪರಿಕರಗಳು ಹೊಸದಾಗುತ್ತಿದ್ದು, ಅದರೊಂದಿಗೆ ಕಿರೀಟ, ಮಣಿ ಸಾಮಗ್ರಿಗಳೂ ಹೊಸದಾಗಿ ಕಂಗೊಳಿಸಲಿದೆ.
    ಕಟೀಲಿನಲ್ಲಿ ಶ್ರೀ ಕ್ಷೇತ್ರದ ಯಕ್ಷಗಾನ ಮೇಳ ಹಾಗೂ ಕಲಾವಿದರಿಗಾಗಿಯೇ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಜುಲೈ 5ರಿಂದ 15 ಕಲಾವಿದರು ಮಣಿ ಸಾಮಗ್ರಿಗಳನ್ನು ತೆಗೆದು ಹೊಸತಾಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಮೇಳಕ್ಕೆ 3ರಂತೆ 18 ಕೇಸರಿ ತಟ್ಟಿ, 42 ರಾಜಕಿರೀಟ, 50 ಪಕಡಿ, 50 ತುರಾಯಿ, 25ರಂತೆ ವೀರಗಾಸೆ, 6 ನಂದಿನಿ ಕೊಂಬು, ಧರ್ಮರಾಯ, ಹನುಮಂತನ ಕಿರೀಟ, ಭೀಮನ ಮುಡಿ, ನಾಟಕೀಯ ಕಿರೀಟ, 25ರಂತೆ ಕರ್ಣಪತ್ರೆ, 15ರಂತೆ ಪುಂಡುವೇಷ, ಕಿರೀಟ ವೇಷದ ಕೈಕಟ್‌ಗಳು, 3ರಂತೆ ದಂಬೆ, ಉಲ್ಲನ್ ಡಾಬು ಇತ್ಯಾದಿ ಉಡುಗೆ, ಕಿರೀಟಗಳನ್ನು ತಯಾರಿಸಲಾಗುತ್ತಿದೆ.

    10 ಸಾವಿರ ಮೀ. ಬಟ್ಟೆ ಬಳಕೆ: ಇದಕ್ಕಾಗಿ ಸುಮಾರು 10 ಸಾವಿರ ಮೀಟರ್‌ನಷ್ಟು ಬಟ್ಟೆ ಬಳಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಹತ್ತಿ, ನೈಲೆಕ್ಸ್ ಬಟ್ಟೆ ಬಳಸಲಾಗುತ್ತಿತ್ತು. ಈಗ ಹತ್ತಿ, ಪಾಲಿಸ್ಟರ್, ವೆಲ್ವೆಟ್, ಡಿಚೈನಾ, ಡ್ರಿಲ್, ಸೂಟಿಂಗ್ ಸಿಲ್ಕ್, ಬ್ರಾಕೆಟ್ ಬಗೆಯ ಬಟ್ಟೆಗಳನ್ನು ದಿರಿಸು ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಝರಿ, ಲೇಸ್, ಜಾಲರ್ ಲೇಸ್, ಮಣಿ ಸಾಮಗ್ರಿಗಳಿಂದ ವೇಷಭೂಷಣ ತಯಾರಿ ಮಾಡಲಾಗುತ್ತದೆ. ಕಿರೀಟ ಡ್ರೆಸ್‌ಗಳಿಗೆ ಬೇಕಾದ ಮಣಿ, ವಿವಿಧ ರೀತಿಯ ಬೇಗಡೆ ಮತ್ತಿತರ ಸಾಮಗ್ರಿಗಳನ್ನು ಮುಂಬೈನಿಂದ ತರಿಸಲಾಗುತ್ತದೆ. ಮೇಳದ ಕಲಾವಿದರಾದ ಪಡ್ರೆ ಕುಮಾರ, ರಘುನಾಥ ಬಾಯಾರು, ಮೋಹನ ಬಾಯಾರು, ಶಶಿಧರ ಪಂಜ, ರಕ್ಷಿತ್ ದೇಲಂಪಾಡಿ, ಚಂದ್ರಹಾಸ ತುಂಬೆ, ಸುನೀಲ್ ಪದ್ಮುಂಜ, ಗಣೇಶ ಅರಳ, ಗುಡ್ಡಪ್ಪ ಸುವರ್ಣ, ನಗ್ರಿ ಸುರೇಶ, ಶಿವ ಕುಲಾಲ್, ಸಂದೀಪ ಪೊರ್ಕೋಡಿ ಹಾಗೂ ಶ್ರೀಧರ ಟೈಲರ್, ಪ್ರಕಾಶ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ.

    ಮಳೆಗಾಲದಲ್ಲಿ ಜೀವನೋಪಾಯ: 55 ವರ್ಷಗಳಿಂದ ಕಟೀಲು ಮೇಳದಲ್ಲೇ ಇರುವ ಪಡ್ರೆ ಕುಮಾರ ಮಳೆಗಾಲದಲ್ಲಿ 16 ವರ್ಷಗಳಿಂದ ಈ ಉಡುಪು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಯಕ್ಷಗಾನ ರಂಗದಲ್ಲಿರುವ ಬಾಯಾರು ರಘುನಾಥ ಶೆಟ್ಟರು ಮಳೆಗಾಲದಲ್ಲಿ ಜವುಳಿ ಕೆಲಸದಲ್ಲಿ ಕರ್ನಾಟಕ ಮೇಳದ ಕಾಲದಿಂದಲೇ ತೊಡಗಿಸಿಕೊಂಡಿದ್ದು, ಕಟೀಲು ಮೇಳದ ಡ್ರೆಸ್ಸಿನ ಕೆಲಸವನ್ನೂ 20 ವರ್ಷಗಳಿಂದ ಮಾಡುತ್ತಿದ್ದಾರೆ. ಯಕ್ಷಗಾನದ ಡ್ರೆಸ್‌ಗಳ ಹೊಲಿಗೆ ಕೆಲಸದಲ್ಲೇ 32 ವರ್ಷಗಳಿಂದ ತೊಡಗಿಸಿಕೊಂಡಿರುವ ಶ್ರೀಧರ ಟೈಲರ್ ಕಟೀಲಿನಲ್ಲಿ ಇಡೀ ವರ್ಷದ ಮೇಳದ ಡ್ರೆಸ್‌ಗಳ ರಿಪೇರಿ, ತಯಾರಿ ಮಾಡುತ್ತಾರೆ. ಕಲಾವಿದರು ಮಳೆಗಾಲದಲ್ಲಿ ಈ ಕೆಲಸದಿಂದ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ.

    ಕಟೀಲು ಮೇಳದ ಕಲಾವಿದರೇ ನಮ್ಮ ಮೇಳಕ್ಕೆ ಬೇಕಾದ ಪರಿಕರಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲಿ ಈ ಕೆಲಸ ನಡೆಯುತ್ತಿದ್ದು, ಪ್ರತಿವರ್ಷ ಹಾಳಾದ ಎಲ್ಲ ಪರಿಕರಗಳನ್ನು ಸರಿಪಡಿಸಲಾಗುತ್ತದೆ. ಈ ಬಾರಿ ಎಲ್ಲವೂ ಹೊಸತಾಗಲಿದೆ.

    ಪ್ರಕಾಶ್ ಶೆಟ್ಟಿ
    ನಾಲ್ಕನೇ ಮೇಳದ ಪ್ರಬಂಧಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts