More

    ಸಹಕಾರ ಕ್ಷೇತ್ರದ ಆಲದಮರ ಕೆಎನ್ನಾರ್

    ತುಮಕೂರು: ಸಹಕಾರ ಕ್ಷೇತ್ರದ ಆಲದಮರ ಕೆ.ಎನ್.ರಾಜಣ್ಣಗೆ ಸಹಕಾರಿ ಖಾತೆಯೇ ಒಲಿದುಬಂದಿದೆ. ಸಹಕಾರ ರತ್ನ, ನೇರ ನುಡಿಯ ಛಲದಂಕ ಮಲ್ಲನಿಗೆ ‘ಶಿವರಾಮಯ್ಯ’ ಸರ್ಕಾರದಲ್ಲಿ ತನ್ನಿಚ್ಛೆಯ ಖಾತೆಯೇ ಸಿಕ್ಕಿರುವುದು ವಿಶೇಷ.

    ಕ್ಯಾತಸಂದ್ರದ ದಿವಂಗತ ನಂಜಪ್ಪ-ಲಕ್ಷ್ಮೀ ದೇವಮ್ಮ ದಂಪತಿ ಪುತ್ರರಾಗಿ 1951 ಏಪ್ರಿಲ್ 13 ರಂದು ಜನಿಸಿದ ಕೆಎನ್ನಾರ್ ಬಿ.ಎಸ್ಸಿ,, ಎಲ್.ಎಲ್.ಬಿ., ಪದವೀಧರರರಾಗಿದ್ದು ವಿದ್ಯಾರ್ಥಿ ದಿಸೆಯಲ್ಲಿ ರಾಜಕೀಯಗೀಳು ಅಂಟಿಸಿಕೊಂಡಿದ್ದವರು. 1972ರಿಂದ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ, ಕಳೆದ ಐದು ಅವಧಿಯಿಂದ ಡಿಸಿಸಿ ಬ್ಯಾಂಕ್ ಸಾರಥ್ಯವಹಿಸಿದ್ದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ.

    ಮೂರು ಅವಧಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕರಾಗಿ, 10 ವರ್ಷಗಳ ಕಾಲ ತುಮಕೂರಿನ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸೊಸೈಟಿ (ಟಿಎಪಿಎಂಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವು ಸಹಕಾರಿ ಚಾಂಪಿಯನ್‌ಗೆ ‘ಸಹಕಾರ ರತ್ನ’ ಅತ್ಯುನ್ನತ ಪ್ರಶಸ್ತಿ ಸಂದಿದೆ.

    1969 ರಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹಿಡಿದು ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 1976 ರಲ್ಲಿ ಕ್ಯಾತಸಂದ್ರದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ 1994ರಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಸ್.ಷಫೀ ಅಹ್ಮದ್ ವಿರುದ್ಧ ಬಂಡೆದ್ದು ತುಮಕೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪಧಿಸಿ, ಕೈ ಸೋಲಿಗೆ ಕಾರಣರಾಗಿದ್ದರು. ಆನಂತರ ಪಕ್ಷದೊಳಗಿನ ಆಂತರಿಕ ಅಸಮಾಧಾನ ಎದುರಿಸಿಯು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ 1998ರಲ್ಲಿ ಆಯ್ಕೆಯಾದರು.

    ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಬೆಳ್ಳಾವಿ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ 2004ರಲ್ಲಿ ಮೊದಲ ಬಾರಿ ಪ್ರವೇಶಿಸಿದ ರಾಜಣ್ಣ 2008ರಲ್ಲಿ ಮತ್ತೆ ಮಾತೃ ಪಕ್ಷಕ್ಕೆ ಮರಳಿ ಮಧುಗಿರಿಯಿಂದ ಸ್ಪರ್ಧಿಸಿದರಾದರೂ ಸೋಲಿಗೆ ಶರಣಾದರು. 2013ರಲ್ಲಿ ಮಧುಗಿರಿ ಜನರ ಆಶೀರ್ವಾದ ಪಡೆದು 2ನೇ ಬಾರಿ ಶಕ್ತಿಸೌಧ ಪ್ರವೇಶಿಸಿದ ಕೆಎನ್ನಾರ್ ಆ ಅವಧಿಯಲ್ಲಿ ಮಧುಗಿರಿ ಜಿಲ್ಲೆಯ ಕನಸು ಬಿತ್ತಿದರು. 2018ರಲ್ಲಿ ಮತ್ತೇ ಸೋತು ಈಗ ಅಭೂತಪೂರ್ವ ಗೆಲುವಿನೊಂದಿಗೆ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ರಾಜಣ್ಣಗೆ ತಮ್ಮಿಷ್ಟದ ಖಾತೆಯೇ ಒಲಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts