More

    ಹಳ್ಳಿಹೊಳೆಯಲ್ಲಿ ಉಲ್ಬಣಗೊಂಡ ಹಳೇ ಸಮಸ್ಯೆ!

    ಶ್ರೀಪತಿ ಹೆಗಡೆ ಹಕ್ಲಾಡಿ ಚಕ್ರಾಮೈದಾನ
    ಗಗನಚುಂಬಿ ಎತ್ತರಕ್ಕೆ ನೆಟ್‌ವರ್ಕ್ ಟವರ್.. ಎಲ್ಲರ ಬಳಿ ಮೊಬೈಲ್.. ಆದರೆ ವಿದ್ಯುತ್ ಇಲ್ಲದಿದ್ದರೆ ಇವೆಲ್ಲ ಜೀವ ಕಳೆದುಕೊಳ್ಳುತ್ತದೆ.. ಇಂಟರ್‌ನೆಟ್ ಸೌಲಭ್ಯ, ಪಡಿತರ ಥಂಬ್, ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ತನಕ ಸ್ತಬ್ಧ!
    ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಬಂದ್ ಆಗಿದ್ದರಿಂದ ಮನೆಯಲ್ಲೇ ಆನ್‌ಲೈನ್ ಶಿಕ್ಷಣ ಆರಂಭಿಸಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಹಳ್ಳಿಹೊಳೆ ಗ್ರಾಮ ಇಂಜಿನಿಯರಿಂಗ್, ವೈದ್ಯಕೀಯ, ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಕ್ಕಿದೆ. ಈ ಸಮಸ್ಯೆ ಹಳ್ಳಿಹೊಳೆಗೆ ಸೀಮಿತವಾಗಿರದೆ ಗ್ರಾಮೀಣ ಭಾಗದ ಎಲ್ಲರ ಸಮಸ್ಯೆಯೂ ಹೌದು.

    ಹಳ್ಳಿಹೊಳೆ ಗ್ರಾಮದಲ್ಲಿ ಮೂವರು ವೈದ್ಯಕೀಯ ಶಿಕ್ಷಣ 18 ಜನ ಇಂಜಿನಿಯರಿಂಗ್ ಹಾಗೂ 50ಕ್ಕೂ ಮಿಕ್ಕಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದು, ಮಂಗಳವಾರ ವಿದ್ಯುತ್ ಇಲ್ಲದಿದ್ದರಿಂದ ರಜೆ! ಆಗಾಗ ಕೈಕೊಡುವ ವಿದ್ಯುತ್‌ನಿಂದ ನೆಟ್‌ವರ್ಕ್ ಪದೇ ಪದೆ ಕೈಕೊಡುತ್ತದೆ. ವಿದ್ಯುತ್ ಕೈಕೊಟ್ಟಾಗ ಜನರೇಟರ್ ಮೂಲಕ ದೂರವಾಣಿ ಸಂಪರ್ಕ ನೀಡುವ ವ್ಯವಸ್ಥೆ ಇದ್ದರೂ ಡಿಸೇಲ್ ಪೂರೈಕೆ ಇಲ್ಲದಿರುವುದು ಸಮಸ್ಯೆಯ ಮೂಲ. ಜನರೇಟರ್‌ಗೆ ಡೀಸೆಲ್ ಪೂರೈಸಬೇಕು, ನಿರ್ವಹಣೆಗೆ ಸಿಬ್ಬಂದಿ ನೇಮಿಸಿ, ದೂರವಾಣಿ ಸಂಪರ್ಕ ವ್ಯವಸ್ಥಿತ ರೀತಿಯಲ್ಲಿ ಇಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

    ವಿಜಯವಾಣಿ ವರದಿ ಪರಿಣಾಮ ಕಂಡಿತ್ತು: ಹಳ್ಳಿಹೊಳೆ ಗ್ರಾಮ ನಕ್ಸಲೈಟ್ ಪ್ರಭಾವಿತ ಪ್ರದೇಶವಾಗಿದ್ದು, ನಕ್ಸಲೈಟ್ ಎನ್‌ಕೌಂಟರಿಗೆ ಇಬ್ಬರು, ನಕ್ಸಲ್ ಪ್ರತೀಕಾರಕ್ಕೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಅತೀ ಹೆಚ್ಚು ಅಡಕೆ ಬೆಳೆಯುವ ಪ್ರದೇಶವಾಗಿದ್ದು, ಕೃಷಿಕರೇ ಜಾಸ್ತಿ. ಖಾಸಗಿ ಹಾಗೂ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಟವರ್ ಇದ್ದರೂ ಮಳೆಗಾಳಿ, ವಿದ್ಯುತ್ ಹೋದರೆ ಟವರ್ ನಿಷ್ಕ್ರಿಯವಾಗುತ್ತದೆ. ಹಳ್ಳಿಹೊಳೆ ನೆಟ್‌ವರ್ಕ್ ಸಮಸ್ಯೆ ಬಗ್ಗೆ ವಿಜಯವಾಣಿ 2018ರ ಜೂನ್‌ನಲ್ಲಿ ಪ್ರಕಟಗೊಂಡ ವರದಿ ನಂತರ ಸಮಸ್ಯೆ ಪರಿಹಾರ ಕಂಡಿದ್ದು, ಪ್ರಸಕ್ತ ಮತ್ತದೇ ಸಮಸ್ಯೆ ತಲೆಯೆತ್ತಿದೆ.

    ನಮ್ಮ ಮನೆಯಲ್ಲಿ ಇಂಜಿನಿಯರಿಂಗ್ ಓದುವ ವಿದ್ಯಾದ್ಯಾರ್ಥಿಯಿದ್ದು, ಕರೆಂಟ್ ಹೋದ ನಂತರ ಇಂಟರ್‌ನೆಟ್ ಇಲ್ಲ. ಮತ್ತೆ ವಿದ್ಯುತ್ ಬರುವ ತನಕ ಕಾಯಬೇಕಾಗುತ್ತದೆ. ಹಳ್ಳಿಹೊಳೆಯಲ್ಲಿ ಬಿಎಸ್‌ಎನ್‌ಎಲ್ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತು ಇಂಟರ್‌ನೆಟ್ ವ್ಯವಸ್ಥೆ ಸರಿಪಡಿಸದಿದ್ದರೆ ವಿದ್ಯಾರ್ಥಿಗಳ ಜೀವನವೇ ಕತ್ತಲಾಗಲಿದೆ.
    ದಿನೇಶ್ ಯಡಿಯಾಳ ಸದಸ್ಯ ಗ್ರಾಪಂ ಹಳ್ಳಿಹೊಳೆ

    ಟೆಕ್ನಿಕಲ್ ಸಮಸ್ಯೆ ಹಿನ್ನೆಲೆಯಲ್ಲಿ ಹಳ್ಳಿಹೊಳೆಯಲ್ಲಿ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು, ಆ ಭಾಗದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಭಾರತೀಯ ಸಂಚಾರಿ ನಿಗಮದ ಡಿಜಿಎಂ ಗಮನಕ್ಕೆ ತಂದಿದ್ದೇನೆ. ಬೇರೆ ಬೇರೆ ಕಡೆಯಿಂದ ಮನೆಯಲ್ಲಿದ್ದು, ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿರುವವರಿಗೆ ನೆಟ್‌ವರ್ಕ್ ರೆಗ್ಯುಲರ್ ಇರಬೇಕಾಗುತ್ತದೆ. ಸಮಸ್ಯೆ ಪರಿಹಾರ ಮಾಡದಿದ್ದರೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬ ಸಂಗತಿ ಕೂಡಾ ಅವರ ಗಮನಕ್ಕೆ ತಂದಿದ್ದು, ಇನ್ನೆರಡು ದಿನದಲ್ಲಿ ತಾಂತ್ರಿಕ ಸಮಸ್ಯೆ ಪರಿಹಾರ ಮಾಡಿ ನೆಟ್‌ವರ್ಕ್ ಸಮಸ್ಯೆ ಪರಿಹಾರ ಮಾಡುವ ಭರವಸೆ ಡಿಜಿಎಂ ನೀಡಿದ್ದಾರೆ.
    ಬಿ.ವೈ.ರಾಘವೇಂದ್ರ ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts