More

    ದಾಸ್ಯಮುಕ್ತಿಗೆ ಹೋರಾಡಿದ ಧೀಮಂತ ನಾಯಕ

    ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡುತ್ತಲೇ ಭಾರತೀಯರಲ್ಲಿ ರಾಷ್ಟ್ರಭಕ್ತಿಯ ಪ್ರಬಲ ಕಿಡಿಯನ್ನು ಹೊತ್ತಿಸಿದ ಹೋರಾಟಗಾರ ನೇತಾಜಿ ಸುಭಾಷ್​ಚಂದ್ರ ಬೋಸ್ ಈ ದೇಶ ಕಂಡ ಅಪ್ರತಿಮ ನಾಯಕ ಹಾಗೂ ಮುತ್ಸದ್ಧಿ. ಅವರ ಜೀವನ ಮತ್ತು ಸಂದೇಶಗಳು ಎಂದೆಂದಿಗೂ ಪ್ರೇರಣಾದಾಯಿ.

    ‘ನನಗೆ ರಕ್ತ ಕೊಡಿ ನಿಮಗೆ ನಾನು ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಘಂಟಾಘೊಷವಾಗಿ ಉದ್ಘೋಷಿಸಿದ, ಭಾರತದ ಸ್ವಾತಂತ್ರ್ಯ್ಕಾಗಿ ಹಲವಾರು ದೇಶಗಳ ನಾಯಕರ, ಮುತ್ಸದ್ಧಿಗಳ ಬೆಂಬಲ ಗಳಿಸಿದ ಅಪ್ರತಿಮ, ಪ್ರಖರ ಹೋರಾಟಗಾರ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರು ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ, ಸ್ವಾಮಿ ಅರಬಿಂದೋ ಅವರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರು. ಬಾಲ್ಯದಿಂದಲೇ ಅಸಾಮಾನ್ಯ ಪ್ರತಿಭಾವಂತರಾಗಿದ್ದ ಅವರು ಕೆಲಕಾಲ ಅಧ್ಯಾತ್ಮ ಸಾಧನೆಗಾಗಿ ಹಿಮಾಲಯಕ್ಕೂ ಹೋಗಿದ್ದುಂಟು. ಹೆತ್ತವರ ಆಸೆಯಂತೆ ಐಸಿಎಸ್ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ತೆರಳಿ 8 ತಿಂಗಳ ಕಠಿಣ ಪರಿಶ್ರಮದಿಂದ 4ನೇ ರ್ಯಾಂಕಿನಲ್ಲಿ ಉತ್ತೀರ್ಣರಾದ ಮೇಧಾವಿ. ಆದರೂ, ಹೆಚ್ಚಿನ ಸಂಬಳ, ಸ್ಥಾನಮಾನದ ಸರ್ಕಾರಿ ನೌಕರಿಯನ್ನು ನಿರಾಕರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

    ಐಎನ್​ಎ ಸ್ಥಾಪನೆ: ಸ್ವಾತಂತ್ರ್ಯ ಪ್ರಾಪ್ತಿಗಾಗಿ ಬ್ರಿಟಿಷ್ ವಿರೋಧಿ ಒಕ್ಕೂಟ ರಚಿಸಿ ಯುದ್ಧ ಮಾಡಲು ಕಾರ್ಯಪ್ರವೃತ್ತರಾದರು. ಇದರಿಂದ ಆತಂಕಗೊಂಡ ಬ್ರಿಟಿಷ್ ಸರ್ಕಾರ ಬೋಸ್​ರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು. ಆದರೆ, ಪ್ರಬಲ ಜನಾಗ್ರಹದ ಪರಿಣಾಮ ಅವರನ್ನು ಸೆರೆವಾಸದಿಂದ ಗೃಹ ಬಂಧನಕ್ಕೆ ಸ್ಥಳಾಂತರಿಸಲಾಯಿತು. 1941ರ ಜನವರಿ 16ರಂದು ಗೃಹಬಂಧನದಿಂದ ತಪ್ಪಿಸಿಕೊಂಡು ಪೇಶಾವರ, ಕಾಬೂಲಿನ ಮಾರ್ಗವಾಗಿ ಜರ್ಮನಿ ತಲುಪಿ ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದರು. ಮಾತ್ರವಲ್ಲ, ಜರ್ಮನ್ನಿನ ಮುಖ್ಯಸ್ಥ ಹಿಟ್ಲರ್​ನನ್ನು ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಅವನ ಬೆಂಬಲ ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು. 3 ಸಾವಿರ ಸೈನಿಕರ ಬಲದ ಸೈನ್ಯವನ್ನು ಅಲ್ಲಿ ಪ್ರಾರಂಭಿಸಿದ ಸುಭಾಷರು ಇಟಲಿಯ ಬೆಂಬಲವನ್ನೂ ಪಡೆದರು. ಮುಂದೆ ಜಪಾನಿನ ಪ್ರಧಾನಿ ಮತ್ತು ಮಹಾರಾಜನನ್ನು ಭೇಟಿಯಾಗಿ ಜಪಾನಿನ ಪೂರ್ಣಬೆಂಬಲದ ಆಶ್ವಾಸನೆ ಪಡೆದುಕೊಂಡರು.

    ಭಾರತ ರಾಷ್ಟ್ರೀಯ ಸೈನ್ಯ (ಐಎನ್​ಎ)ದ ನೆಲೆಯನ್ನು ಜಪಾನಿನಿಂದ ಸಿಂಗಾಪುರಕ್ಕೆ ವರ್ಗಾಯಿಸಿ ಸೈನ್ಯವನ್ನು ಯುದ್ಧಕ್ಕಾಗಿ ಸಿದ್ಧಗೊಳಿಸಿದರು. 1943ರಲ್ಲಿ ತಾತ್ಕಾಲಿಕ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದರಲ್ಲದೆ ಮಹಿಳೆಯರ ಸೈನ್ಯದ ತುಕಡಿಯನ್ನು ಪ್ರಾರಂಭಿಸಿದರು. 1944ರ ಮಾರ್ಚ್​ನಲ್ಲಿ ಐಎನ್​ಎ ಸೈನಿಕರು ಬರ್ವ ದಾಟಿ ಭಾರತದ ಗಡಿ ಪ್ರವೇಶಿಸಿದರಲ್ಲದೆ ಬ್ರಿಟಿಷ್ ಸೈನಿಕರನ್ನು ಮಣಿಸಿ ಈಶಾನ್ಯ ಭಾರತದ ಹಲವು ಭೂಭಾಗಗಳನ್ನು ಗೆದ್ದು, ಆನಂದೋತ್ಸವ ಆಚರಿಸಿದರು. ಈ ಹೋರಾಟವನ್ನು ಮುಂದುವರಿಸಲು ಸಂಕಲ್ಪಿಸಿದ್ದ ಅವರು 1945ರ ಆಗಸ್ಟ್ 17ರಂದು ನಿಗೂಢವಾಗಿ ‘ಕಣ್ಮರೆ’ಯಾದರು.

    ಮರೆಯಲಾಗದ ಮಹಾನುಭಾವ: ಬೋಸರು ಬಾಲ್ಯದಲ್ಲೇ ಧಾರ್ವಿುಕ ವಿಷಯ, ಯೋಗ, ಆತ್ಮಸಂಯಮ, ಮನೋನಿಗ್ರಹದಂತಹ ಆಧ್ಯಾತ್ಮಿಕ ಸಂಗತಿಗಳಲ್ಲಿ ಒಲವುಳ್ಳವರಾಗಿದ್ದರು. ರಾಮಾಯಣ, ಭಾರತ, ಭಾಗವತಗಳೊಂದಿಗೆ ವಿಲ್ ಡ್ಯೂರಾಂಟನ ವಿಶ್ವಚರಿತ್ರೆ, ಶೇಕ್ಸ್​ಪಿಯರ್, ಡಿಕನ್ಸ್ ಮುಂತಾದವರನ್ನೂ ಅಷ್ಟೇ ಗಂಭೀರವಾಗಿ ಓದಿಕೊಂಡಿದ್ದರು.

    ಬೋಸ್ ನಾಡಿನಲ್ಲಿ ಮೋದಿ: ‘ಪರಾಕ್ರಮ ದಿನ’ದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಕೋಲ್ಕತ್ತಕ್ಕೆ ಆಗಮಿಸುತ್ತಿದ್ದಾರೆ. ನೇತಾಜಿ ಕುರಿತಾದ ವಸ್ತು ಸಂಗ್ರಹಾಲಯವನ್ನು ಅವರು ಈ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ. ನೇತಾಜಿ 125ನೇ ಜಯಂತಿ ಪ್ರಯುಕ್ತ ವಿಶೇಷ ಅಂಚೆಚೀಟಿ ಮತ್ತು ನಾಣ್ಯವನ್ನು ಅನಾವರಣಗೊಳಿಸಲಿದ್ದಾರೆ.

    ಮೋದಿ ಟ್ವೀಟ್: ಪಶ್ಚಿಮ ಬಂಗಾಳದ ಸೋದರ/ಸೋದರಿಯರೇ.. ಪರಿಕ್ರಮ ದಿನದಂದು ನಿಮ್ಮೆಲ್ಲರ ಮಧ್ಯೆ ಇರಲು ಹೆಮ್ಮೆ ಎನಿಸುತ್ತಿದೆ. ಕೋಲ್ಕತ್ತದ ಕಾರ್ಯಕ್ರಮಗಳಲ್ಲಿ ಬೋಸರನ್ನು ಸ್ಮರಿಸಿ, ಗೌರವಿಸಲಾಗುವುದು.

    ಇಂದು ರಾಜ್ಯಾದ್ಯಂತ ಜೈಹಿಂದ್ ರನ್

    ‘ಸ್ವರಾಜ್ಯಕ್ಕೆ ಮುಕ್ಕಾಲ್ನೂರು’ ಶೀರ್ಷಿಕೆ ಅಡಿ ವರ್ಷಪೂರ್ತಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಬೋಸರ 125ನೇ ಜಯಂತಿಯನ್ನು ‘ಜೈಹಿಂದ್ ರನ್’ ಮೂಲಕ ಆಚರಿಸುತ್ತಿದೆ. ಶನಿವಾರ ರಾಜ್ಯಾದ್ಯಂತ ಓಟವನ್ನು ಆಯೋಜಿ ಸಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆ 6.30ಕ್ಕೆ ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ ಓಟಕ್ಕೆ ಚಾಲನೆ ಸಿಗಲಿದೆ.

    ಸತ್ಯ ಇನ್ನೂ ಗೊತ್ತಾಗಿಲ್ಲ

    • ನೇತಾಜಿ ವಿಮಾನಾಪಘಾತದಲ್ಲಿ ಮೃತಪಟ್ಟಿಲ್ಲ. ಅವರ ಸಾವಿನ ಹಿಂದೆ ಷಡ್ಯಂತ್ರಗಳಿವೆ ಎಂಬ ವಾದ ಏಳು ದಶಕಗಳಿಂದಲೂ ಇದೆ. ಆದರೆ, ನೇತಾಜಿ ಸಾವಿನ ಕುರಿತ ದಾಖಲೆಗಳು ರಹಸ್ಯವಾಗಿದ್ದರಿಂದ ಹೊರಜಗತ್ತಿಗೆ ಯಾವ ಮಾಹಿತಿಯೂ ತಿಳಿದಿರಲಿಲ್ಲ.
    • ಜನಾಗ್ರಹ ಹಾಗೂ ಬೋಸ್ ಕುಟುಂಬದ ಸದಸ್ಯರ ಬೇಡಿಕೆಗೆ ಮಣಿದು ಪಶ್ಚಿಮ ಬಂಗಾಳ ಸರ್ಕಾರ 2015ರ ಸೆಪ್ಟೆಂಬರ್​ನಲ್ಲಿ ಗೌಪ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತು. 1937-47ರ ಅವಧಿಯ 12,744 ಪುಟಗಳ 64 ಕಡತಗಳು ಬಿಡುಗಡೆಯಾದವು.
    • ಬೋಸ್ ವಿಮಾನಾಪಘಾತದಲ್ಲಿ ಮಡಿದಿಲ್ಲ ಎಂಬ ಸಂಗತಿಯತ್ತಲೇ ಈ ದಾಖಲೆಗಳು ಬೊಟ್ಟುಮಾಡಿದವು. ಸುಭಾಷ್​ಚಂದ್ರರ ಸಹೋದರ ಅಮಿಯ್ ಬೋಸ್​ಗೆ ಆಗಿನ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ‘ತೈವಾನ್​ನಲ್ಲಿ ವಿಮಾನಾಪಘಾತ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿತ್ತು.
    • 1945ರ ಅಪಘಾತದಲ್ಲಿ ಸುಭಾಷ್​ಚಂದ್ರರು ಮೃತಪಟ್ಟಿಲ್ಲ ಎಂದು ಅಮೆರಿಕ, ಬ್ರಿಟನ್ ಗುಪ್ತಚರ ಏಜೆನ್ಸಿಗಳೂ ದಾಖಲಿಸಿದ್ದವು.
    • 1964ರವರೆಗೆ ಬೋಸ್ ಬದುಕಿರುವ ಬಗ್ಗೆ ಹಲವು ದಾಖಲೆಗಳಿವೆ.

    ನೇತಾಜಿ ಹೆಸರಲ್ಲಿ ರಾಜಕಾರಣ!

    ನೇತಾಜಿ ಸುಭಾಷ್​ಚಂದ್ರ ಬೋಸರ 125ನೇ ಜಯಂತಿಯನ್ನು ಇಂದು (ಶನಿವಾರ) ಪರಾಕ್ರಮ ದಿನವಾಗಿಯೂ, ದೇಶ ನಾಯಕ ದಿನವಾಗಿಯೂ ಆಚರಿಸಲಾಗುತ್ತಿದೆ! ಹೌದು, ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ನೇತಾಜಿ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಜನವರಿ 23ನ್ನು ಇನ್ಮುಂದೆ ಪ್ರತಿ ವರ್ಷ ‘ಪರಾಕ್ರಮ ದಿವಸ’ವನ್ನಾಗಿ ಆಚರಿಸಲಾಗುವುದು, ವರ್ಷಪೂರ್ತಿ ಅವರ 125ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. ಇದರ ಬೆನ್ನಿಗೆ ನೇತಾಜಿ ಜನ್ಮದಿನವನ್ನು ‘ದೇಶ ನಾಯಕ ದಿನ’ವಾಗಿ ಆಚರಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರ ಈ ವರ್ಷಪೂರ್ತಿ ನೇತಾಜಿ ಜಯಂತಿ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ಯನ್ನೂ ರಚಿಸಿದೆ.

    ಬೋಸ್ ಜೀವನಪಥ

    • ಒಡಿಶಾದ ಕಟಕ್​ನಲ್ಲಿ ಜನನ (23-01-1897)
    • ತಂದೆ ಜಾನಕೀನಾಥ ಬೋಸ್(ವಕೀಲ) ತಾಯಿ ಪ್ರಭಾವತಿ ದೇವಿ, ಬೆಂಗಾಲಿ ಹಿಂದೂ ಕುಟುಂಬ
    • ಭಾರತೀಯ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣ (1919 ಮಾರ್ಚ್ 29)
    • ಕಲ್ಕತಾ ಮುನ್ಸಿಪಲ್ ಕಾರ್ಪೆರೇಷನ್​ನ ಸಿಇಒ ಆಗಿ, ಬಳಿಕ ಚುನಾಯಿತ ಮೇಯರ್ ಆಗಿ ಕರ್ತವ್ಯ (1924)
    • ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಬೋಸ್ ಬಂಧನ, ಬಿಡುಗಡೆ (1925 ಸೆ.14-1927 ಮಾ.30)
    • ಬಿಡುಗಡೆ ಬಳಿಕ ನೆಹರು ಜತೆ ಒಡನಾಟ ಮತ್ತೆ ಕಲ್ಕತಾ ಮೇಯರ್ ಆಗಿ ಆಯ್ಕೆ (1930 ಮೇ 28)
    • ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನ ಅಧ್ಯಕ್ಷ (1938)
    • ಕಾಂಗ್ರೆಸ್ ನಾಯಕರ ಜತೆಗೆ ಅಸಮಾಧಾನ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್ ಸ್ಥಾಪನೆ (1939)
    • ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಒತ್ತೆಯಾಳಾಗುವು ದನ್ನು ತಪ್ಪಿಸಿಕೊಳ್ಳಲು ಭಾರತ ಬಿಟ್ಟ ಬೋಸ್ (1941)
    • ಇಂಡಿಯನ್ ನ್ಯಾಷನಲ್ ಆರ್ವಿು (ಆಜಾದ್ ಹಿಂದ್ ಫೌಜ್)ಗೆ ಪುನಶ್ಚೇತನ (1942 ಕ್ವಿಟ್ ಇಂಡಿಯಾ ಚಳವಳಿ ಅವಧಿ)
    • ಜಪಾನ್ ಸಹಕಾರದೊಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ ಹೋರಾಟಕ್ಕೆ ಸಿದ್ಧತೆ (1943).
    • ಕಣ್ಮರೆಯಾದ ಸುಭಾಸ್ ಚಂದ್ರ ಬೋಸ್ (1945 ಆ.18)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts