More

    ಕರ್ಫ್ಯೂ ಬೇಡವೇ ಬೇಡ ಸರ್ಕಾರಕ್ಕೆಜನಪ್ರತಿನಿಧಿಗಳ ಮನವಿ

    ಮಂಗಳೂರು/ಉಡುಪಿ: ರಾತ್ರಿ ಕರ್ಫ್ಯೂ ಕಾರವಳಿಯ ಧಾರ್ಮಿಕ ಆಚರಣೆ, ದೈವಕೋಲ, ಯಕ್ಷಗಾನಕ್ಕೆ ತೊಂದರೆಯಾಗಲಿದೆ. ಹೀಗಾಗಿ ವಿನಾಯಿತಿ ಕೋರಿ ಕೆಲ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಾತ್ರಿಯ ಹೊತ್ತು ದೈವ ಕೋಲ, ನಾಗಾರಾಧನೆ ಹಾಗೂ ಯಕ್ಷಗಾನ ಚಟುವಟಿಕೆ ಹೆಚ್ಚಾಗಿ ನಡೆಯುತ್ತದೆ. ರಾತ್ರಿ ಕರ್ಫ್ಯೂ ಜಾರಿಯಾದರೆ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ. ಹೀಗಾಗಿ ಉಡುಪಿ ಹಾಗೂ ಮಣಿಪಾಲ ನಗರಗಳಲ್ಲಿ ಕರ್ಫ್ಯೂ ರದ್ದುಪಡಿಸಬೇಕು ಎಂದು ಶಾಸಕ ರಘುಪತಿ ಭಟ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಕಳೆದ ವರ್ಷ ಲಾಕ್‌ಡೌನ್ ಕಾರಣದಿಂದ ಧಾರ್ಮಿಕ ಆಚರಣೆ ನಡೆಯಲಿಲ್ಲ. ದೈವದ ಕೋಲಗಳಿಗೆ ಹಲವು ಕಡೆ ಸಿದ್ಧತೆ ನಡೆದಿದೆ. ಉಡುಪಿ, ಮಣಿಪಾಲದಲ್ಲಿ ಕರೊನಾ ಆಂತಕವಿಲ್ಲ. ಕಂಟೈನ್ಮೆಂಟ್ ವಲಯವಾಗಿದ್ದ ಎಂಐಟಿಯಲ್ಲಿ ಸೋಂಕಿನ ಪ್ರಮಾಣ ಇಳಿದಿದೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 401 ಮಾತ್ರ ಇದೆ. ಪ್ರತಿದಿನ ಸರಾಸರಿ 2,500 ಕೋವಿಡ್ ಪರೀಕ್ಷೆ ನಡೆಯುತ್ತಿದ್ದು ಶೇ.2.5ರಷ್ಟೇ ಪಾಸಿಟಿವಿಟಿ ದರ ಇದೆ. ಆರ್ಥಿಕ ಸಂಕಷ್ಟದಿಂದ ಜನರು ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾತ್ರಿ ಕರ್ಫ್ಯೂ ಬೇಡ ಎಂದು ಅವರು ವಿನಂತಿಸಿದ್ದಾರೆ.

    ಸಿಎಂಗೆ ವೇದವ್ಯಾಸ ಮನವಿ: ರಾತ್ರಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ನಡೆಸಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

    ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡುವ ಬದಲು ಕನಿಷ್ಠ ಜನರೊಂದಿಗೆ ನಡೆಸಲು ಅವಕಾಶ ನೀಡಬಹುದು. ಅದಕ್ಕೆ ಬೇಕಾದರೆ ಅಧಿಕಾರಿಗಳೂ ನಿಗಾ ಇರಿಸಲಿ, ಈ ಕುರಿತು ಸಿಎಂಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಕಳೆದ ವರ್ಷವೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗಿಲ್ಲ. ಮತ್ತೆ ಈ ವರ್ಷವೂ ಕೂಡ ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋದರೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

    ವಿನಾಯಿತಿ ಕೋರಿದ ವಿಹಿಂಪ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೊನಾ ಕರ್ಫ್ಯೂವಿನಿಂದ ವಿನಾಯಿತಿ ನೀಡುವಂತೆ ವಿಶ್ವ ಹಿಂದು ಪರಿಷತ್ ಮನವಿ ಮಾಡಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts