More

    ದಾಖಲೆ ಬೆಲೆ ಮುಟ್ಟಿದ ಎನ್​ಬಿಸಿಸಿ, ಹುಡ್ಕೊಗೆ ಮತ್ತೆ ಡಿಮ್ಯಾಂಡು: ಬಜೆಟ್​ ನಂತರ ಸರ್ಕಾರಿ ಕಂಪನಿಗಳ ಷೇರಿಗೆ ಇಷ್ಟೊಂದು ಬೇಡಿಕೆ ಏಕೆ?

    ಮುಂಬೈ: ಬಜೆಟ್ ನಂತರ ಈ 2 ಸರ್ಕಾರಿ ಕಂಪನಿಗಳ ಷೇರುಗಳು ನಾಗಾಲೋಟದಲ್ಲಿ ಓಡುತ್ತಿವೆ. ಹೂಡಿಕೆದಾರರು ಈ ಷೇರುಗಳನ್ನು ಮಗಿಬಿದ್ದು ಖರೀದಿಸುತ್ತಿದ್ದಾರೆ.

    ಬಜೆಟ್ ಮಂಡನೆ ಬಳಿಕ ಸರ್ಕಾರಿ ಕಂಪನಿಯಾದ ಹೌಸಿಂಗ್ ಅಂಡ್ ಅರ್ಬನ್ ಕಾರ್ಪೊರೇಷನ್ ಲಿಮಿಟೆಡ್ (ಹುಡ್ಕೊ- HUDCO) ಷೇರುಗಳು ಶುಕ್ರವಾರ ಮತ್ತೆ ಏರಿಕೆ ಕಂಡಿವೆ. ಗುರುವಾರ ಕಂಪನಿಯ ಷೇರುಗಳಲ್ಲಿ ಶೇ. 20ರಷ್ಟು ಹೆಚ್ಚಳವಾಗಿ ಅಪ್ಪರ ಸರ್ಕ್ಯೂಟ್​ ಮಿತಿ ಕೂಡ ಮುಟ್ಟಿತ್ತು. ಶುಕ್ರವಾರ ಹುಡ್ಕೊ ಷೇರು ಬೆಲೆ ಅಂದಾಜು ಶೇ. 10ರಷ್ಟು ಏರಿಕೆ ಕಂಡಿದೆ. ಈ ಷೇರುಗಳಲ್ಲಿ ಹೂಡಿಕೆ ಮಾಡಿದವರು ಈ ಮೂಲಕ ಕೇವಲ 2 ದಿನಗಳಲ್ಲಿ ಅಂದಾಜು ಶೇ. 30ರಷ್ಟು ಲಾಭ ಗಳಿಸಿದ್ದಾರೆ.

    ಶುಕ್ರವಾರ ಇಂಟ್ರಾ ಡೇ ವಹಿವಾಟಿನಲ್ಲಿ ಹುಡ್ಕೊ ಷೇರುಗಳು ಬಿಎಸ್​ಇಯಲ್ಲಿ ಶೇ. 9.7ರಷ್ಟು ಏರಿಕೆ ಕಂಡು 219.05 ರೂಪಾಯಿ ತಲುಪಿದ್ದವು. ಇದಕ್ಕೂ ಮುನ್ನ ಗುರುವಾರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಈ ಷೇರುಗಳ ಬೆಲೆ ಅಂದಾಜು ಶೇ. 20ರಷ್ಟು ಹೆಚ್ಚಳವಾಗಿ 206.35 ರೂಪಾಯಿ ಮುಟ್ಟಿತ್ತು.

    ವಸತಿ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವ ಸರ್ಕಾರಿ-ಚಾಲಿತ ಕಂಪನಿಯಾಗಿದೆ ಹುಡ್ಕೊ. ಕೇವಲ ಒಂದೇ ತಿಂಗಳಲ್ಲಿ ಹುಡ್ಕೊ ಷೇರುಗಳ ಬೆಲೆ ಶೇ. 68ರಷ್ಟು ಏರಿಕೆಯಾಗಿದೆ. ಕಳೆದೊಂದು ವರ್ಷದಲ್ಲಿ ಹುಡ್ಕೊ ಷೇರುಗಳ ಬೆಲೆ ಶೇಕಡಾ 360ರಷ್ಟು ಹೆಚ್ಚಳ ಕಂಡು ಮಲ್ಟಿಬ್ಯಾಗರ್​ ಸ್ಟಾಕ್​ ಅಗಿ ಹೊರಹೊಮ್ಮಿದೆ.

    ಇನ್ನೊಂದು ಸರ್ಕಾರಿ ಕಂಪನಿಯಾದ ಎನ್​ಬಿಸಿಸಿ (NBCC- National Buildings Construction Corporation Limited) ಷೇರುಗಳು ಕೂಡ ಶುಕ್ರವಾರ ಶೇಕಡಾ 16ರಷ್ಟು ಲಾಭ ಗಳಿಸಿ, 167.80 ರೂಪಾಯಿ ತಲುಪಿವೆ.

    ವಸತಿ, ವಾಣಿಜ್ಯ ಮತ್ತು ಸಾಂಸ್ಥಿಕ ಕಟ್ಟಡಗಳಿಗೆ ನಿರ್ಮಾಣ ಮತ್ತು ಇಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಎನ್​ಬಿಸಿಸಿಯ ಷೇರುಗಳು ಶುಕ್ರವಾರ ಫೆಬ್ರವರಿ 2 ರಂದು 16 ಪ್ರತಿಶತದಷ್ಟು ಏರಿಕೆಯಾಗಿ ಎನ್​ಎಸ್ಇಯಲ್ಲಿ 167.80 ರೂ. ತಲುಪಿದವು. ಇದು ಗರಿಷ್ಠ ದಾಖಲೆ ಬೆಲೆಯಾಗಿದೆ. ಸರ್ಕಾರವು ಪ್ರಸ್ತುತ NBCC ಯಲ್ಲಿ ಶೇಕಡಾ 61.8 ಪಾಲನ್ನು ಹೊಂದಿದೆ.

    ಕಳೆದ ಒಂದು ವರ್ಷದಲ್ಲಿ, NBCC ಸ್ಟಾಕ್ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದ್ದು, ಇದು 370 ಪ್ರತಿಶತದಷ್ಟು ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತನ್ನು ದ್ವಿಗುಣಗೊಳಿಸಿದೆ.

    ಈ ಕಂಪನಿಯು ವಾಣಿಜ್ಯ, ಸಾಂಸ್ಥಿಕ ಕಟ್ಟಡಗಳು ಮತ್ತು ವಸತಿ ಕಟ್ಟಡಗಳನ್ನು ನಿರ್ಮಿಸಲು ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುತ್ತದೆ.

    ಹಣಕಾಸು ಸಚಿವರು ಏನು ಘೋಷಿಸಿದ್ದಾರೆ?::

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಮುಂಬರುವ ವರ್ಷಗಳಲ್ಲಿ 2 ಕೋಟಿ ಗ್ರಾಮೀಣ ಜನರಿಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಮಧ್ಯಮ ವರ್ಗದವರಿಗೆ ಯೋಜನೆಯೊಂದನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಇದರಿಂದ ಅವರ ಮನೆ ಕಟ್ಟುವ ಕನಸು ನನಸಾಗಲಿದೆ. ಈ ಯೋಜನೆಯ ಮೂಲಕ ಸರಕಾರದಿಂದ ಸಹಾಯಧನದ ಮೇಲೆ ಸಾಲ ನೀಡಬಹುದು ಎಂದು ಹಣಕಾಸು ಸಚಿವರು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts