ನಾಯಕನಹಟ್ಟಿ: ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಪಟ್ಟಣದ ಅನೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಪಟ್ಟಣದ ತಳುಕು ರಸ್ತೆಯಲ್ಲಿನ ಸಿದ್ದೇಶ್ವರ ಅವರ ಮನೆ ಚಪ್ಪರ ಕುಸಿದಿದೆ. ಇದೇ ರಸ್ತೆಯಲ್ಲಿನ ಬೆಸ್ಕಾಂ ಕಚೇರಿ ಆವರಣದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿದ ಪರಿಣಾಮ ಕಂಬ ಮುರಿದು ಬಿದ್ದಿದೆ. ಅಲ್ಲದೇ ಕೆಇಬಿ ಬಡಾವಣೆಯಲ್ಲಿ ಮತ್ತೊಂದು ಕಡೆ ಬೇವಿನ ಮರ ಬಿದ್ದಿದೆ.
ಎಸ್‌ಟಿಎಸ್‌ಆರ್ ಶಾಲಾ ರಸ್ತೆ, ತಿಪ್ಪೇರುದ್ರಸ್ವಾಮಿ ಹೊರಮಠದ ಆವರಣದಲ್ಲಿ ಬೇವಿನ ಮರಗಳು ಬಿದ್ದಿವೆ. ಹೋಬಳಿಯ ಕುದಾಪುರ, ನಲಗೇತನಹಟ್ಟಿ, ದೊಡ್ಡಘಟ್ಟದಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸಂಜೆ ಸುರಿದಿದ್ದು ಮಳೆ ಅಲ್ಪವಾದರೂ ಗಾಳಿ ಬಹಳ ಜೋರಾಗಿತ್ತು.