More

    ಸಂಭ್ರಮದಿಂದ ಜರುಗಿದ ತಿಪ್ಪೇರುದ್ರಸ್ವಾಮಿ ಗುಗ್ಗರಿ ಹಬ್ಬ

    ನಾಯಕನಹಟ್ಟಿ: ಪಟ್ಟಣದ ಒಳ ಹಾಗೂ ಹೊರಮಠದ ಆವರಣದಲ್ಲಿ ಸೋಮವಾರ ಬೆಳಗ್ಗೆ ಗುರು ತಿಪ್ಪೇರುದ್ರಸ್ವಾಮಿ ಗುಗ್ಗರಿ ಹಬ್ಬ ಸಂಭ್ರಮದಿಂದ ಜರುಗಿತು. ಇದರೊಂದಿಗೆ ಜಾತ್ರಾ ಚಟುವಟಿಕೆಗಳಿಗೆ ವಿಧ್ಯುಕ್ತ ಚಾಲನೆ ದೊರೆಯಿತು.

    ಮಠದ ಆವರಣದಲ್ಲಿ ದೇವಸ್ಥಾನದಿಂದ 3 ಕ್ವಿಂಟಾಲ್ ಹಾಗೂ ಭಕ್ತರು ನೀಡಿದ 1 ಕ್ವಿಂಟಾಲ್ ಹುರುಳಿಕಾಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ಬೇಯಿಸಲು ಆರಂಭಿಸಲಾಯಿತು. ಸಂಜೆ ವಾಡಿಕೆಯಂತೆ ವಾರೋತ್ಸವದಲ್ಲಿ ಶ್ರೀಸ್ವಾಮಿಯನ್ನು ಹೊರಮಠದ ಬಳಿ ಸಕಲ ವಾದ್ಯಗಳೊಂದಿಗೆ ತಂದ ಬಳಿಕ ಮಹಾ ಪೂಜೆ ಸಲ್ಲಿಸಲಾಯಿತು. ನಂತರ ಜಾತ್ರೆಯ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಬೇಯಿಸಿದ ಗುಗ್ಗರಿಯನ್ನು ಹನ್ನೆರಡು ಆಯಗಾರರಿಗೆ ಮೊದಲು ಪ್ರಸಾದವಾಗಿ ಹಂಚಲಾಯಿತು. ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ ವಿತರಿಸಲಾಯಿತು. ಹುರುಳಿ ಜೊತೆ ಬೆಲ್ಲವನ್ನು ಸೇರಿಸಿ ಪ್ರಸಾದ ಸವಿದರು.

    ಗುಗ್ಗರಿ ಹಬ್ಬದ ವಿಶೇಷ: ತಿಪ್ಪೇರುದ್ರಸ್ವಾಮಿ ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕನಾಗಿ, ನೂರಾರು ಗ್ರಾಮಗಳ ಬುಡಕಟ್ಟು ದೈವವಾಗಿ ಪ್ರಸಿದ್ಧಿ ಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರಮಠದಲ್ಲಿ ನಡೆಯುವ ಎಲ್ಲ ಕಾರ್ಯಗಳು ಜನಪದ ಹಾಗೂ ಬುಡಕಟ್ಟು ಸಂಸ್ಕೃತಿಯ ನೆಲೆಯಲ್ಲಿ ಕೂಡಿರುತ್ತವೆ. ಈ ಆಚರಣೆಗಳಲ್ಲಿ ಗುಗ್ಗರಿ ಹಬ್ಬ ಪ್ರಮುಖವಾಗಿದೆ. ಮಹಾಪೂಜೆ ಬಳಿಕ ಹಸನು ಮಾಡಿದ ಹುರುಳಿಯನ್ನು ಒಳ ಹಾಗೂ ಹೊರಮಠದ ಬಳಿ ಬೆರಣಿಯಿಂದ ಬೇಯಿಸುವುದು ವಿಶೇಷ. ಇದರಿಂದ ಬಂದಂತಹ ಭಸ್ಮವನ್ನು ದೇವಸ್ಥಾನದಲ್ಲಿ ಭಕ್ತರಿಗೆ ಧರಿಸಲು ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts