More

    ಹದಿಮೂರು ವರ್ಷದ ಬಳಿಕ ಜಾತ್ರೆ

    ನಾಯಕನಹಟ್ಟಿ: ಪಟ್ಟಣದ ದೊಡ್ಲಮಾರಿಕಾಂಬ ಜಾತ್ರೆ ಮಂಗಳವಾರದಿಂದ ಗುರುವಾರದ ವರೆಗೆ ಜರುಗಲಿದ್ದು, ನಾಯಕನಹಟ್ಟಿಯು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

    ಎನ್.ದೇವರಹಳ್ಳಿಯಲ್ಲಿರುವ ದೊಡ್ಲಮಾರಿಕಾಂಬ ದೇವಿಯ ಮೂಲ ಸ್ಥಾನ ಇದಾಗಿದ್ದು, ಜೋಗಿಯವರ ಜೋಳಿಗೆಯಲ್ಲಿ ಹೋಗಿ ಅಲ್ಲಿ ನೆಲೆಗೊಂಡಿದ್ದಾಳೆ. ಗ್ರಾಮದ ಎಲ್ಲ ಸಮುದಾಯದವರು ಕೂಡಿ ಅಲ್ಲಿರುವ ದೇವತೆಯನ್ನು ಪೂಜಾ ವಿಧಿವಿಧಾನಗಳೊಂದಿಗೆ ಅಲ್ಲಿಂದ ಕರೆಸಿ ಜಾತ್ರೆ ಆಚರಿಸಿ ಬಳಿಕ ಎನ್.ದೇವರಹಳ್ಳಿಗೆ ಕಳುಹಿಸಿಕೊಡಬೇಕು ಎನ್ನುತ್ತಾರೆ ದೇವಿಯ ಅರ್ಚಕ ತಿಪ್ಪೇಸ್ವಾಮಿ.

    ಮಂಗಳವಾರ ಮಧ್ಯಾಹ್ನ ಪಟ್ಟಣದ ಕೋಟೆ ಬ್ಲಾಕ್‌ನಲ್ಲಿರುವ ದೊಡ್ಲಮಾರಿಕಾಂಬ ದೇವಿಯ ಉತ್ಸವ ಮೂರ್ತಿಯನ್ನು ದೊಡ್ಡಹಳ್ಳಕ್ಕೆ ಕರೆದೊಯ್ದು ಗಂಗಾಪೂಜೆ ನೆರವೇರಿಸಲಾಗುತ್ತದೆ. ದೇವಸ್ಥಾನದಲ್ಲಿರುವ ನಗಾರಿಯೊಂದಿಗೆ ಗ್ರಾಮದ ದೈವದವರು ಸಕಲ ವಾದ್ಯಗಳೊಂದಿಗೆ ಎನ್.ದೇವರಹಳ್ಳಿಗೆ ಹೋಗಿ ದೊಡ್ಲಮಾರಿಕಾಂಬ ದೇವಿಯನ್ನು ಸಕಲ ಬಿರುದಾವಳಿಗಳೊಂದಿಗೆ ಕರೆತರುತ್ತಾರೆ.

    ಬುಧವಾರ ದೈವದವರು, ಗ್ರಾಮಸ್ಥರು ದೇವಿಗೆ ಕಾಸು ಮೀಸಲು ಅರ್ಪಿಸುವುದು, ಹರಕೆ ಸಲ್ಲಿಸುವ ಕಾರ್ಯಕ್ರಮಗಳು ಜರುಗಲಿವೆ. ಗುರುವಾರ ಗ್ರಾಮದ ಗೌಡರು, ಗೊಂಚಿಗಾರರ ಮನೆಯ ಮುಂದೆ ದೇವಿಗೆ ಉಡಿತುಂಬಿಸಿ ಪುನಃ ದೇವರಹಳ್ಳಿಗೆ ಕಳುಹಿಸಲಾಗುವುದು.

    ವಡ್ನಹಳ್ಳಿ ಮಾರಿಕಾಂಬೆ, ದೇವರಹಳ್ಳಿ ದೊಡ್ಲಮಾರಿಕಾಂಬೆ ಅಕ್ಕ-ತಂಗಿಯರು, ವಡ್ನಹಳ್ಳಿ ಮಾರಿಕಾಂಬೆಯನ್ನು ಗ್ರಾಮಕ್ಕೆ ಕರೆತರವುದು ಕಷ್ಟ. ಆದ್ದರಿಂದ ಪಕ್ಕದ ದೇವರಹಳ್ಳಿ ಮಾರಿಕಾಂಬ ದೇವಿಯನ್ನು ಕರೆಸಲಾಗುತ್ತದೆ ಎಂಬುದು ಹಿರಿಯರಾದ ತಿಪ್ಪೇಸ್ವಾಮಿ ಅನಿಸಿಕೆ.

    13 ವರ್ಷಗಳ ಬಳಿಕ ಜರುಗಲಿರುವ ದೊಡ್ಲಮಾರಿಕಾಂಬ ಜಾತ್ರೆಗೆ ಪಟ್ಟಣ ಸಕಲ ರೀತಿಯಿಂದಲೂ ಸಜ್ಜುಗೊಂಡಿದೆ. ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣ, ಬಾಳೆಕಂಬ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts