More

    ಮೊಳಕಾಲ್ಮೂರು ಕ್ಷೇತ್ರದ 53 ಕೆರೆಗಳಿಗೆ ಭದ್ರಾ ನೀರು

    ನಾಯಕನಹಟ್ಟಿ: ಬಯಲು ಸೀಮೆಯ ಈ ಭೂಮಿಗೆ ಎರಡು ವರ್ಷಗಳಲ್ಲಿ ಭದ್ರೆ ಹರಿಯಲಿದ್ದಾಳೆ ಎಂದು ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಶ್ರೀರಾಮುಲು ಹೇಳಿದರು.

    ಮೊಳಕಾಲ್ಮೂರು ಕ್ಷೇತ್ರದ 53 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸೋಮವಾರ ಚಿಕ್ಕಕೆರೆ ಬಳಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ರೈತರ ಶ್ರೇಯೋಭಿವೃದ್ಧಿಯೇ ನನ್ನ ಗುರಿ. ಇಲ್ಲಿನ ಕೆರೆಗಳಲ್ಲಿ ನೀರಿಲ್ಲದೇ ಸಂಕಷ್ಟದಲ್ಲಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2008ರಲ್ಲೇ ಭದ್ರಾ ಮೇಲ್ದಂಡೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅನುದಾನ ಮಂಜೂರು ಮಾಡಿದ್ದರು ಎಂದರು.

    ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ 538 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗೆ ಫೆಬ್ರವರಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಕರೊನಾ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿತ್ತು ಎಂದು ತಿಳಿಸಿದರು.

    2 ವರ್ಷದಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವ ಶಾಶ್ವತ ಯೋಜನೆಯನ್ನು ಜಾರಿಗೆ ತಂದು ಬರದ ನಾಡು ಮೊಳಕಾಲ್ಮೂರು ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಲಿದೆ ಎಂದು ಹೇಳಿದರು.

    ನಾಯಕನಹಟ್ಟಿ ಪಟ್ಟಣವು 46 ಹಳ್ಳಿಗಳ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಬಹುದಿನಗಳ ಬೇಡಿಕೆಯಂತೆ ಶೀಘ್ರದಲ್ಲೇ ಪಾಲಿಟೆಕ್ನಿಕ್, ಪದವಿ ಪೂರ್ವ, ಪದವಿ ಕಾಲೇಜು, ಹಾಸ್ಟೆಲ್, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

    ಕಾರ್ಯಕ್ರಮಕ್ಕೂ ಮುಂಚೆ ನೆಲಗೇತನಹಟ್ಟಿ ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀೀನಿಂಗ್‌ಗೆ ಒಳಪಡಿಸಿದರು. ಸ್ಯಾನಿಟೈಸರ್ ಹಾಗೂ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು.

    ಜಿಪಂ ಸದಸ್ಯೆ ಎಚ್.ಪಿ.ಶಶಿರೇಖಾ, ಮುಖಂಡರಾದ ಜಯಪಾಲಯ್ಯ, ಎಂ.ವೈ.ಟಿ.ಸ್ವಾಮಿ, ಎನ್.ಮಹಾಂತಣ್ಣ, ಸಿ.ಬಿ.ಮೋಹನ್, ಎಎಸ್‌ಪಿ ನಂದಗಾವಿ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಡಿ.ಭೂತಪ್ಪ, ಡಾ.ಸಣ್ಣೋಬಣ್ಣ, ಪಿಎಸ್‌ಐ. ಎಸ್.ರಘುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts