More

    ಮಲೆನಾಡಲ್ಲಿ ಚೂಡಿ ಪೂಜೆ ಇಂದು

    ಮಲೆನಾಡಲ್ಲಿ ಚೂಡಿ ಪೂಜೆ ಇಂದು

    ಶೃಂಗೇರಿ: ಮಲೆನಾಡಿನಲ್ಲಿ ಶ್ರಾವಣ ಮಾಸವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ವಿವಿಧ ಸಂಪ್ರದಾಯಗಳ ಪೈಕಿ ಚೂಡಿ ಪೂಜೆ ವಿಶಿಷ್ಟವಾದುದು.

    ಶ್ರಾವಣ ಮಾಸದಲ್ಲಿ ಕೃಷಿ ಚಟುವಟಿಕೆಗಳ ನಡುವೆ ಮನೆ ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಅಂಗಳವನ್ನು ಸಾರಿಸಿ, ರಂಗೋಲಿ ಬಿಡಿಸಿ ಹೂಗಳನ್ನು ಇಟ್ಟು ಮನೆಗೆ ಗೋಮೂತ್ರ ಸಿಂಪಡಿಸಿ ಶ್ರಾವಣ ಶನಿವಾರ ಆಚರಿಸಲಾಗುತ್ತದೆ. ಏಕೆಂದರೆ ಈ ಮಾಸದಲ್ಲಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆಂಬ ನಂಬಿಕೆ ಇದೆ.

    ಶ್ರಾವಣ ಮಾಸದಲ್ಲಿ ಸೂರ್ಯ ತನ್ನ ಸ್ವಕ್ಷೇತ್ರದಿಂದ ಸಿಂಹ ರಾಶಿಗೆ ಆಗಮಿಸುತ್ತಾನೆ. ಈ ಸಂದರ್ಭ ಸೂರ್ಯದೇವನ ಬಿಂಬವನ್ನು ಬರೆದು ಗರಿಕೆ, ಬಣ್ಣಬಣ್ಣದ ಹೂಗಳನ್ನು ಅರ್ಪಿಸುವ ಪದ್ಧತಿ ಇಂದಿಗೂ ಇದೆ. ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಮುತೆôದೆಯರು ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ತುಳಸಿ ಸನ್ನಿಧಿಯಲ್ಲಿ ಚೂಡಿ ಪೂಜೆಯನ್ನು ಕುಟುಂಬದ ಹಾಗೂ ನೆರೆಹೊರೆಯವರ ಜತೆ ಒಗ್ಗೂಡಿ ಆಚರಿಸುತ್ತಾರೆ.

    ಚೂಡಿ ಎಂದರೇನು?: ‘ಚೂಡಿ’ಗೆ ಸೂಡಿ ಎಂತಲೂ ಕರೆಯುತ್ತಾರೆ. ಸೂಡಿ ಎಂದರೆ ಗಂಟು ಅಥವಾ ಗುಂಪು ಎಂದರ್ಥ. ಗರಿಕೆ, ರಥಪುಷ್ಪ, ಕರವೀರ, ರತ್ನಗಂಧ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಕಾಗೆಕಣ್ಣು, ಸಾಸಿವೆ ಹೂವು ಮತ್ತಿತರೆ ವಸ್ತುಗಳನ್ನು ಒಗ್ಗೂಡಿಸಿ ಬಾಳೆ ನಾರಿನಿಂದ ಕಟ್ಟಿಡುವುದೇ ಚೂಡಿ.

    ಪೂಜೆಯ ವಿಧಿ ವಿಧಾನಗಳು: ಪ್ರಾತಃಕಾಲ ಚೂಡಿ ಪೂಜೆಗೆ ಪ್ರಶಸ್ತ. ಒಂದುವೇಳೆ ಬೆಳಗ್ಗೆ ಆಗದಿದ್ದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಪೂಜೆ ಮುಗಿಸಬೇಕು.

    ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ಶೈಲಿಯ ಎಂಟು ಮೊಳದ ಸೀರೆಯನ್ನು ಉಟ್ಟ ಮುತೆôದೆಯರು ಬಾವಿದಂಡೆಗೆ ಅರಿಶಿಣ-ಕುಂಕುಮ ಹಚ್ಚಿ ಬಾವಿ ನೀರನ್ನು ತೆಗೆದು ತುಳಸಿಕಟ್ಟೆ ಎದುರು ರಂಗೋಲಿ ಹಾಕುತ್ತಾರೆ. ಮನೆ ಮುಖ್ಯ ದ್ವಾರದ ಹೊಸಿಲನ್ನು ಶೇಡಿಯಿಂದ ಅಲಂಕರಿಸಿ ಚೂಡಿ ಪೂಜೆ ಆರಂಭಿಸುತ್ತಾರೆ.

    ತುಳಸಿಗೆ ನೀರೆರೆದು ಅರಿಶಿಣ, ಕುಂಕುಮ, ಗಂಧ ಲೇಪಿಸಿ ವೀಳ್ಯ ಚೂಡಿ ಅರ್ಪಿಸಿ, ಹಣ್ಣು ಕಾಯಿ, ಪಂಚಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಿಸಲಾಗುತ್ತದೆ. ಬಳಿಕ ತುಳಸಿಗೆ ಐದು ಸಲ ಪ್ರದಕ್ಷಿಣೆ ಮಾಡುವಾಗ ಪ್ರತಿ ಸುತ್ತು ಮುಗಿದ ನಂತರ ಸೂರ್ಯ ದೇವನಿಗೆ ಹಾಗೂ ತುಳಸಿಗೆ ಅಕ್ಷತೆ ಹಾಕುತ್ತಾರೆ. ತೆಂಗಿನಮರಕ್ಕೆ ಒಂದು ಚೂಡಿ ಅರ್ಪಿಸುತ್ತಾರೆ.

    ಮರಣ ಹೊಂದಿದ ಹಿರಿಯ ಮುತೆôದೆಯರ ನೆನಪಿಗೆ ಮನೆ ಛಾವಣಿ ಮೇಲೆ ಚೂಡಿ ಇಡಲಾಗುತ್ತದೆ. ತುಳಸಿ ಸನ್ನಿಧಿಯಲ್ಲಿ ಕುಲದೇವರು ಹಾಗೂ ಗ್ರಾಮ ದೇವರನ್ನು ಸ್ಮರಿಸಿ ದೇವರಕೋಣೆಯಲ್ಲಿ ಚೂಡಿ ಸಮರ್ಪಿಸಲಾಗುತ್ತದೆ. ಗಂಡನಿಗೆ ವೀಳ್ಯ ನೀಡಿ ಆಶೀರ್ವಾದ ಪಡೆಯುತ್ತಾರೆ.

    ಶ್ರಾವಣ ಮಾಸದಲ್ಲಿ ಚೂಡಿ ಪೂಜೆ ಅತ್ಯಂತ ಮಹತ್ವ ಪಡೆದಿದೆ. ಇದು ಆಧ್ಯಾತ್ಮಿಕ ಮೌಲ್ಯಗಳ ಸಂಕೇತ. ಸಂಬಂಧಗಳನ್ನು ಬೆಸೆಯುವ ಶ್ರಾವಣ ಮಾಸದ ಈ ಪೂಜೆ ಕೌಟುಂಬಿಕ ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎನ್ನುತ್ತಾರೆ ಶೃಂಗೇರಿಯ ನಿವಾಸಿ ಜ್ಯೋತಿ ಕಾಮತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts