More

    ಎನ್‌ಡಿಎ ಅವಧಿಯಲ್ಲಿ ಸುಸ್ಥಿತಿಗೆ ಮರಳಿದ ದೇಶದ ಅರ್ಥಿಕತೆ: ಡಾ.ಅಶ್ವತ್ಥನಾರಾಯಣ

    ಬೆಂಗಳೂರು:
    ಯುಪಿಎ ಆಡಳಿತದಲ್ಲಿ ದಿವಾಳಿ ಸ್ಥಿತಿಯಲ್ಲಿದ್ದ ದೇಶದ ಆರ್ಥಿಕ ಸ್ಥಿತಿ, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸುಸ್ಥಿತಿಗೆ ಮರಳಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಜಪೇಯಿ ಆಡಳಿತದಲ್ಲಿ ಶೇ.3.9 ರಷ್ಟಿದ್ದ ಹಣದುಬ್ಬರ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಶೇ.8.2ಕ್ಕೆ ಏರಿಕೆ ಆಗಿತ್ತು. ಈಗ ಶೇ.5 ರಷ್ಟಿದೆ ಎಂದು ವಿವರ ನೀಡಿದರು.
    ಕೇಂದ್ರ ಸರ್ಕಾರದ ಸಾಧನೆಯನ್ನು ಅಂಕಿ ಅಂಶಗಳ ಶ್ವೇತಪತ್ರದ ಮೂಲಕ ತಿಳಿಸಿದೆ. ಯುಪಿಎ ಅವಧಿಯ ಆಡಳಿತ ರಾಜಕೀಯ ಪ್ರೇರಿತವಾದ, ರೋಡ್ ಟು ನೋವೇರ್ ಆಗಿತ್ತು. ಯುಪಿಎ ಅವಧಿಯ ಆರ್ಥಿಕ ಗೊಂದಲ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಪರಿವರ್ತನೆ ಮಾಡುವಲ್ಲಿ ಮೋದಿ ಅವರು ಪ್ರಮುಖರಾಗಿದ್ದಾರೆ ಎಂದು ಸಮರ್ಥಿಸಿಕೊಂಡರು.
    ವಾಜಪೇಯಿ ಕಾಲದಲ್ಲಿ ಶೇ.8ರಷ್ಟು ಜಿಡಿಪಿ ಮೂಲಕ ಅಭಿವೃದ್ಧಿ ಇತ್ತು. ಯುಪಿಎ ಕಾಲದಲ್ಲಿ ಬೆಲೆ ಏರಿಕೆ ಇದ್ದರೂ ಜಿಡಿಪಿ ಬೆಳವಣಿಗೆ ಶೇ.5 ಕಡಿಮೆ ಇತ್ತು. ಮೋದಿ ಅವಧಿಯಲ್ಲಿ ಶೇ.8 ರಿಂದ 9ರಷ್ಟು ಬೆಳವಣಿಗೆ ಇದೆ ಎಂದರು.
    ವಾಜಪೇಯಿ ಅವಧಿಯಲ್ಲಿ ಲೋನ್ ಎಕ್ಸ್‌ಪೋಜರ್ 6.60 ಲಕ್ಷ ಕೋಟಿ ಇದ್ದರೆ ಯುಪಿಎ ಕಾಲದಲ್ಲಿ ಅದು 39 ಲಕ್ಷ ಕೋಟಿಗೆ ಏರಿತ್ತು. ಆಗ ದೇಶದ ಸಾಲ ಮರುಪಾವತಿಗೂ ಸಮಸ್ಯೆ ಇತ್ತು. ಬ್ಯಾಂಕ್‌ಗಳು ಮುಚ್ಚುವ ಸ್ಥಿತಿಯಲ್ಲಿದ್ದವು. ಆದರೂ ಯುಪಿಎ ಸರ್ಕಾರ ನಿರಾಳವಾಗಿ ನಿದ್ರಾಲೋಕದಲ್ಲಿತ್ತು ಎಂದು ಟೀಕಿಸಿದರು.
    ಯುಪಿಎ ಅವಧಿಯಲ್ಲಿ ಡಾಲರ್ ಬೆಲೆ ಏರಿಕೆಯೂ ಗರಿಷ್ಠ ಪ್ರಮಾಣದಲ್ಲಿತ್ತು. ಕೇವಲ 4 ತಿಂಗಳಿಗೆ ಆಮದಿಗೆ ಸಾಕಾಗುವಷ್ಟು ಮಾತ್ರ ಫಾರಿನ್ ರಿಸರ್ವ (290 ಬಿಲಿಯನ್ ಡಾಲರ್) ದೇಶದಲ್ಲಿತ್ತು. ಈಗ 596 ಬಿಲಿಯನ್ ಡಾಲರ್ ಇದೆ. ಈಗ ಅಭಿವೃದ್ಧಿಯು ಭರವಸೆದಾಯಕವಾಗಿದೆ ಎಂದರು.
    ಯುಪಿಎ ಕಾಲದಲ್ಲಿ ಆರ್ಥಿಕ ಸುಸ್ಥಿರತೆ ಇಲ್ಲದೆ ಎಲ್ಲವೂ ಭರವಸೆದಾಯಕವಾಗಿರಲಿಲ್ಲ. ಇವತ್ತು ಎಲ್ಲವೂ ಸುಸ್ಥಿರತೆಯಿಂದ ಸಾಗಿದೆ. ಮೂಲಭೂತ ಸೌಕರ್ಯ, ಆಸ್ತಿ ನಿರ್ಮಿಸುವ ನಿಟ್ಟಿನಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಮೊತ್ತವು ವಾಜಪೇಯಿ ಕಾಲದಲ್ಲಿ ಶೇ.31ರಷ್ಟಿತ್ತು. ಕಾಂಗ್ರೆಸ್ ಕಾಲದಲ್ಲಿ ಅದು ಕೇವಲ ಶೇ.16ಕ್ಕೆ ಇಳಿದಿತ್ತು. ಮೋದಿ ಕಾಲದಲ್ಲಿ ಮತ್ತೆ ಶೇ.28ಕ್ಕೆ ಏರಿಕೆ ಕಂಡಿದೆ. ಇದೆಲ್ಲವೂ ವಾಸ್ತವವಾಗಿದೆ ಎಂದರು.
    ಸಾಮಾಜಿಕ ಕ್ಷೇತ್ರದಲ್ಲಿ 96 ಸಾವಿರ ಕೋಟಿ ಮೊತ್ತ ಖರ್ಚಾಗದೆ ಉಳಿದಿತ್ತು. ಇದು ಅಸಮರ್ಥ ಆಡಳಿತಕ್ಕೆ ಕೈಗನ್ನಡಿ ಎಂದು ದೂರಿದರು.
    ದೇಶದಲ್ಲಿ 60-65 ವರ್ಷಗಳ ಕಾಂಗ್ರೆಸ್ ಆಡಳಿತ ನಡೆಸಿದರೂ ಬಡತನ ನಿರ್ಮೂಲನೆ ಆಗಲಿಲ್ಲ. ಅಭಿವೃದ್ಧಿಯೂ ಆಗಲಿಲ್ಲ. ಯುಪಿಎ ಅವಧಿಯಲ್ಲಿ 14.5 ಕೋಟಿ ಎಲ್ಪಿಜಿ ಸಿಲಿಂಡರ್ ಸಂಪರ್ಕ ಇದ್ದುದು ಈಗ 31 ಕೋಟಿಗೂ ಹೆಚ್ಚಾಗಿದೆ. ಶೇ.85 ಇದ್ದ ವಿದ್ಯುದೀಕರಣ ಈಗ ಶೇ.100ಕ್ಕೆ ತರಲಾಗಿದೆ ಎಂದು ಅಂಕಿ ಅಂಶವನ್ನು ತೆರೆದಿಟ್ಟರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಲವಿಕಾ ಅವಿನಾಶ್, ಮಾಧ್ಯಮ ವಕ್ತಾರ ವೆಂಕಟೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts