More

    ಹಕ್ಕಿ ಗೂಡು ರಕ್ಷಿಸಲು 25 ದಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ

    ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್‌ನ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಹಕ್ಕಿಗಳ ಗೂಡು ಸಂರಕ್ಷಿಸುವ ಕಾರಣಕ್ಕಾಗಿ ಚೆರ್ಕಳ ಪೇಟೆಯ ಒಂದು ಭಾಗದಲ್ಲಿ 25 ದಿನ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಗುತ್ತಿಗೆದಾರರ ಸೊಸೈಟಿ ನಿರ್ಧರಿಸಿದೆ.

    ಚೆರ್ಕಳ ಜಂಕ್ಷನ್‌ನಲ್ಲಿ ರಾಜ್ಯ-ರಾಷ್ಟ್ರೀಯ ಹೆದ್ದಾರಿ ಅಂಚಿಗಿರುವ ಬೃಹತ್ ಮರದಲ್ಲಿ ನೂರಕ್ಕೂ ಅಧಿಕ ಕೊಕ್ಕರೆಗಳು, ನೀರು ಕಾಗೆಗಳು ಗೂಡು ಕಟ್ಟಿವೆ. ಇವುಗಳ ಸಂರಕ್ಷಣೆಗೆ ಗುತ್ತಿಗೆದಾರರ ಸೊಸೈಟಿ, ಅರಣ್ಯ ಇಲಾಖೆ ಹಾಗೂ ಪಕ್ಷಿ ತಜ್ಞರು ಸಮಾಲೋಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ. ವಿದ್ಯುತ್ ತಂತಿ ಬದಲಾವಣೆಗಾಗಿ 12 ಮೀಟರ್ ಎತ್ತರದ ಮರದ ರೆಂಬೆ ಕಡಿಯಲು ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಪಕ್ಷಿಗಳ ಗೂಡು ಕಂಡುಬಂದಿತ್ತು. ಸಂಸ್ಥೆಯ ಜಿಎಂ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಅರಣ್ಯ ಇಲಾಖೆ ಡೆಪ್ಯುಟಿ ಕನ್ಸರ್ವೇಟರ್ ಪಿ.ಧನೇಶ್ ಕುಮಾರ್, ಪಕ್ಷಿ ನಿರೀಕ್ಷಕ ರಾಜು ಕಿದೂರ್ ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದರು.

    ಕಡಲು ಕಾಗೆ, ಕೊಕ್ಕರೆಗಳು ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ. ಈ ಅವಧಿಯಲ್ಲಿ ಗೂಡು ತೆರವು ಮಾಡಿದರೆ ಮರಿಗಳು ಸಾಯುವ ಅಪಾಯವಿದೆ. ಹೀಗಾಗಿ 25 ದಿನ ಕಾದು, ಹಕ್ಕಿಗಳು ತಾನಾಗಿ ಗೂಡಿನಿಂದ ಹಾರಿಹೋದ ನಂತರ ಕಾಮಗಾರಿ ಆರಂಭಿಸಲು ನಿರ್ಧರಿಸಲಾಗಿದೆ. ಇದೇ ರಸ್ತೆ ಕಾಮಗಾರಿ ಸಂದರ್ಭ ಈ ಹಿಂದೆ ಹಾವಿನ ಮೊಟ್ಟೆಗೆ ಕಾವು ನೀಡುವ ಕಾರಣಕ್ಕಾಗಿ ಮಂಜೇಶ್ವರ ಆಸುಪಾಸಿನಲ್ಲಿ ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts