More

    ವಿಚಾರಣೆ ಇನ್ನೂ ಇದೆ, ಜುಲೈ 25ಕ್ಕೆ ಮತ್ತೆ ಹಾಜರಾಗಿ: ಸೋನಿಯಾ ಗಾಂಧಿಗೆ ಹೊಸ ನೋಟಿಸ್​ ನೀಡಿದ ಇಡಿ

    ನವದೆಹಲಿ: ನ್ಯಾಷನಲ್​ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ್ದ ಇಡಿ ಮತ್ತೆ ಹಾಜರಾಗಲು ಸೋನಿಯಾ ಗಾಂಧಿ ಅವರಿಗೆ ನೋಟಿಸ್​​ ಜಾರಿ ಮಾಡಿದೆ.

    ಇನ್ನೂ ವಿಚಾರಣೆ ಬಾಕಿ ಇದ್ದು, ಎರಡನೇ ಸುತ್ತಿನ ವಿಚಾರಣೆ ನಡೆಸಬೇಕಾಗಿದೆ ಎಂದಿರುವ ಜಾರಿ ನಿರ್ದೇಶನಾಲಯ ಜುಲೈ 25ರಂದು ಕಚೇರಿಗೆ ಮತ್ತೆ ಹಾಜರಾಗಿ ಎಂದು ಹೇಳಿದೆ.

    ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯಲಯದ (ಇ.ಡಿ) ಮುಂದೆ ಈ ಬಾರಿ ಹಾಜರಾಗಿದ್ದರು. ಸತತ ಎರಡು ಗಂಟೆಗಳ ವಿಚಾರಣೆ ಬಳಿಕ ಇಂದಿಗೆ ಸಾಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಅರ್ಧಕ್ಕೆ ವಿಚಾರಣೆ ನಿಂತಿತ್ತು. ಹೀಗಾಗಿ ಜುಲೈ 25ರಂದು ಮತ್ತೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಹೊಸ ನೋಟಿಸ್​​ ಜಾರಿ ಮಾಡಲಾಗಿದೆ.

    ಏನಿದು ನ್ಯಾಷನಲ್​ ಹೆರಾಲ್ಡ್​ ಕೇಸ್​?
    ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.

    2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

    ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್​ ಮತ್ತು ಸೋನಿಯಾ ಅವರಿಗೆ ನೋಟಿಸ್​ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ. (ಏಜೆನ್ಸೀಸ್​)

    ಎರಡು ಗಂಟೆ ವಿಚಾರಣೆ ಬಳಿಕ ‘ಇಂದಿಗೆ ಸಾಕು’ ಎಂದ ಸೋನಿಯಾ: ಇ.ಡಿಯಿಂದ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts