More

    ಕೋಟೆ ನಂಜುಂಡೇಶ್ವರ ಮಹಿಮೆ ಅಪಾರ

    ಆಲೂರು: ವಿಜಯನಗರ ಸಾಮ್ರಾಜ್ಯದ ಪಾಳೆಗಾರರು ತಾವು ಆಳ್ವಿಕೆ ನಡೆಸಿದ ವ್ಯಾಪ್ತಿಯಲ್ಲಿ ಸುಂದರ ದೇವಾಲಯಗಳನ್ನು ನಿರ್ಮಿಸಿದ್ದು, ಅದು ಕೇವಲ ಪ್ರವಾಸಿತಾಣ ಮಾತ್ರವಲ್ಲದೆ ಶ್ರದ್ಧಾಭಕ್ತಿಯ ಕೇಂದ್ರವಾಗಿಯೂ ಗುರುತಿಸಿಕೊಂಡಿವೆ. ಅವುಗಳ ಸಾಲಿನಲ್ಲಿ ಸೇರುವುದೇ ತಾಲೂಕಿನ ಕೋಟೆ ನಂಜುಂಡೇಶ್ವರ ದೇವಾಲಯ.

    ತಾಲೂಕಿನ ಕೆಂಚಮ್ಮನ ಹೊಸಕೋಟೆಯ ಹೊರ ವಲಯದಲ್ಲಿರುವ ಮಲ್ಲಾಪುರ ಗ್ರಾಮದ ಐತಿಹಾಸಿಕ ಕೋಟೆ ನಂಜುಂಡೇಶ್ವರ ದೇಗುಲ ತನ್ನದೇ ಆದ ಇತಿಹಾಸ ಹೊಂದಿದೆ. ವಿಜಯನಗರ ಕಾಲದಲ್ಲಿ ಕಲ್ಲಿನಿಂದ ನಿರ್ಮಿಸಲ್ಪಟ್ಟ ಭವ್ಯ ದೇಗುಲ ಇದಾಗಿದೆ. ಕೋಟೆ ನಂಜುಂಡೇಶ್ವರ ದೇಗುಲವು ಕ್ರಿ.ಶ. 13ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಮೈಸೂರು, ವಿಜಯನಗರ ಸಾಮ್ರಾಜ್ಯದ ಪಾಳೆಗಾರರು ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲೂಕುಗಳಲ್ಲಿ ತಮ್ಮ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಇಲ್ಲಿ ಅನೇಕ ಪುರಾವೆಗಳು ಇವೆ.

    ಆಲೂರು ತಾಲೂಕಿನ ಪಾಳ್ಯ ಗ್ರಾಮವು ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಆ ಗ್ರಾಮಕ್ಕೆ ಪಾಳ್ಯ ಎಂದು ಹೆಸರು ಬಂದಿದೆ. ಅಲ್ಲದೆ ಆ ಒಂದು ಗ್ರಾಮದಲ್ಲಿ ಕಲ್ಲಿನಿಂದಲೇ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ದೇಗುಲವಿದೆ. ಸಕಲೇಶಪುರ ತಾಲೂಕಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಐಗೂರು ಪಾಳೆಗಾರರು ಹೊಸಕೋಟೆ ಗ್ರಾಮದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಒಂದು ಕೋಟೆಯನ್ನು ನಿರ್ಮಿಸಿಕೊಂಡು ಜನರಿಂದ ಕಪ್ಪ ಕಾಣಿಕೆ ಸ್ವೀಕರಿಸುತ್ತಾ ಆಳ್ವಿಕೆ ನಡೆಸುತ್ತಿದ್ದರು. ಆಗಿನ ಕಾಲದಲ್ಲಿ ಬರ ಸಂಭವಿಸಿದರೆ ನಂಜುಂಡೇಶ್ವರ ದೇವರನ್ನು ಪ್ರಾರ್ಥಿಸಿದರೆ ಮಳೆ, ಬೆಳೆ ಸುಗಮವಾಗಿ ಆಗುತ್ತಿದ್ದವು. ಆದ್ದರಿಂದ ಕೋಟೆಯೊಳಗೆ ಶ್ರೀ ನಂಜುಂಡೇಶ್ವರ ದೇಗುಲವನ್ನು ಕಟ್ಟಿಸಿ ಪಕ್ಕದಲ್ಲಿ ಕೊಳ ನಿರ್ಮಿಸಿದ್ದರು. ಸಕಲರು ಭಕ್ತಿ-ಭಾವದಿಂದ ನಂಜುಂಡೇಶ್ವರನಿಗೆ ಬೇಡಿಕೊಂಡರೆ ಇಷ್ಟಾರ್ಥ ನೆರವೇರುತ್ತೆ ಎಂಬ ನಂಬಿಕೆ ಇದೆ.

    ಕೋಟೆ ನಂಜುಂಡೇಶ್ವರ ದೇಗುಲ ಸಮೀಪದಲ್ಲೇ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಇದೆ. ಹರಿಹಳ್ಳಿ, ಹಾಡ್ಯ, ಬಿಡತೂರು ಗ್ರಾಮಗಳ ಜನರು ನಿತ್ಯ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಮಲ್ಲಾಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಾಗೂ ಕಡೆ ಕಾರ್ತಿಕ ಹಬ್ಬದಂದು ಸಂಭ್ರಮದಿಂದ ಜಾತ್ರೆ ಆಚರಿಸುತ್ತಾರೆ.

    ಐತಿಹಾಸಿಕ ದೇವಾಲಯಕ್ಕೆ ನಿತ್ಯ ಸಾಕಷ್ಟು ಜನ ಭೇಟಿ ನೀಡುತ್ತಾರೆ. ಆದರೆ ಪ್ರಾಚೀನ ಕಟ್ಟಡಗಳ ಸಂರಕ್ಷಣೆ ಕಂಡುಬರುತ್ತಿಲ್ಲ. ಆಲೂರು ತಾಲೂಕಿನಲ್ಲಿರುವ ಹಲವು ಐತಿಹಾಸಿಕ ದೇಗುಲಗಳು ಇರುವೆಡೆ ನಿಧಿಗಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ಅಂತೆಯೇ, ಈ ದೇಗುಲದ ಬಳಿಯೂ ನಿಧಿಗಳ್ಳರು ಗುಂಡಿಗಳನ್ನು ತೋಡಿರುವ ಕುರುಹುಗಳಿವೆ. ಇಲ್ಲೊಂದು ಏಳು ಹೆಡೆಯ ಸರ್ಪ ಇರುವುದಾಗಿಯೂ ಅದು ನಿಧಿಯನ್ನು ಕಾಯುತ್ತಿರುವುದಾಗಿಯೂ ವದಂತಿಗಳಿವೆ.
    ನಿಧಿಗಳ್ಳರು ದೇವಾಲಯದ ಒಳಗಡೆ ಪಾರ್ವತಮ್ಮ, ಶಿವಲಿಂಗ, ಸಾಸಿವೆಕಾಳು ಗಣಪತಿ, ಜೀರಿಗೆ ಕಾಳು ಗಣಪತಿ, ಕಡ್ಲೆಕಾಳು ಗಣಪತಿ ಎಂಬ ವಿಗ್ರಹಗಳನ್ನು ದಶಕದ ಹಿಂದೆ ಕದ್ದಿದ್ದರು. ನಂತರ ಪೊಲೀಸರ ಕಾರ್ಯಾಚರಣೆಯಿಂದ ಅವುಗಳನ್ನು ಪತ್ತೆಹಚ್ಚಿ ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪಾರ್ವತಮ್ಮ ವಿಗ್ರಹ ಮಾತ್ರ ಪತ್ತೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts