More

    ಜಿಲ್ಲಾದ್ಯಂತ ನಾಗರ ಪಂಚಮಿ ಸಂಭ್ರಮ

    ವಿಜಯಪುರ: ಜಿಲ್ಲಾದ್ಯಂತ ಸಂಭ್ರಮ, ಸಡಗರ, ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ವರುಣನ ಸಿಂಚನ ಮಧ್ಯೆಯೂ ಗುಮ್ಮಟ ನಗರಿಯ ಭಕ್ತಾದಿಗಳು ವಿವಿಧ ದೇವಾಲಯಗಳಿಗೆ ತೆರಳಿ ನಾಗದೇವತೆಗೆ ಹಾಲೆರೆದು, ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಭಾವದಿಂದ ಪ್ರಾರ್ಥಿಸಿದರು.

    ಶಿವಯೋಗ ಸೇರಿದಂತೆ ಹಲವಾರು ಶುಭಯೋಗಗಳು ರೂಪುಗೊಂಡಿರುವುದರಿಂದ ನಾಗರಪಂಚಮಿ ಆರಾಧನೆಗೆ ಹೆಚ್ಚಿನ ಮಹತ್ವ ಪಡೆದಿದೆ. ಅನೇಕರು ನಾಗರಪಂಚಮಿ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ಸರ್ಪದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೊAದಿಗೆ ಅನೇಕರು ಶ್ರದ್ಧೆಯಿಂದ ಉಪವಾಸ ಆಚರಿಸಿದರು.

    ಬೆಳಗ್ಗೆಯಿಂದಲೇ ಭಕ್ತರು ವಿವಿಧ ದೇವಾಲಯಗಳಿಗೆ ತೆರಳಿದರು. ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ, ವಿವಿಧ ಬಗೆಯ ಫಲಪುಷ್ಪಗಳಿಂದ ನಾಗದೇವತೆಯನ್ನು ನಮಿಸಿದರು.

    ಪಂಚಮಿ ಪ್ರಯುಕ್ತ ಮನೆಗಳಲ್ಲಿ ವಿವಿಧ ಬಗೆಯ ಉಂಡಿ, ಕರ್ಚಿಕಾಯಿ, ಕಡುಬು ಸೇರಿದಂತೆ ಅನೇಕ ಸಿಹಿತಿನಿಸಿಗಳನ್ನು ಸಿದ್ಧಪಡಿಸಲಾಗಿತ್ತು.
    ನಾಗರಪಂಚಮಿ ಎಂದರೆ ಜೋಕಾಲಿ ಜೀಕುವುದು ವಾಡಿಕೆ, ಆದರೆ ಆಧುನಿಕ ಸಮಪ್ರದಾಯದ ಭರಾಟೆಯಲ್ಲಿ ಜೋಕಾಲಿ ಅಷ್ಟಾಗಿ ನಗರ ಪ್ರದೇಶದಲ್ಲಿ ಕಾಣಸಿಗದಿದ್ದರೂ ಗ್ರಾಮೀಣ ಭಾಗದಲ್ಲಿ ಮಾತ್ರ ಅನೇಕ ಗಿಡ-ಮರಗಳಿಗೆ ಜೋಕಾಲಿ ಕಟ್ಟಿರುವುದು ಕಂಡು ಬಂದಿತು.

    ಹಾಲೆರೆದು ಸಂಭ್ರಮ
    ವಿಜಯಪುರ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಜ್ರಹನುಮಾನ ದೇವಸ್ಥಾನದಲ್ಲಿ ನಾಗದೇವತೆಗೆ ಹಾಲೆರೆದು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ ಮಾತನಾಡಿ,ನಾಗ ದೇವತೆಗಳನ್ನು ಆರಾಽಸುವ ನಾಗರ ಪಂಚಮಿ ಹಬ್ಬದಂದು ನಾಗರ ಹಾವಿಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಸಕಲ ಚರಾಚರ ಜೀವಿಗಳಲ್ಲಿಯೂ ಭಗವಂತನಿದ್ದಾನೆ ಎಂದು ನಂಬಲಾಗಿದೆ. ಅಲ್ಲದೆ ಪಶುಪಕ್ಷಿ ಪ್ರಾಣಿಗಳನ್ನು ದೇವರೆಂದು ಪೂಜಿಸುವ ಪರಿವಾರ ನಮ್ಮ ಸಂಸ್ಕೃತಿಯಲ್ಲಿದೆ ಎಂದರು.

    ಮಕ್ಕಳಿಗೆ ಹಾಲು ಕುಡಿಸಿ ಆಚರಣೆ
    ನಾಗರ ಪಂಚಮಿಯನ್ನು ಮಕ್ಕಳಿಗೆ ಹಾಲು ಕುಡಿಸಿ ವಿಶೇಷವಾಗಿ ವಿಜಯಪುರದ ಮದ್ದಿಣ ಖಣಿ ಹತ್ತಿರ ಆಚರಿಸಲಾಯಿತು.
    ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ಅಧ್ಯಕ್ಷ ಕೆ.ಆರ್.ಕಡೆಚೂರ ಮಾತನಾಡಿ, ಮೌಢ್ಯದಿಂದ ಹೊರ ಬರಬೇಕಿದೆ. ಕಲ್ಲಿನ ನಾಗರ ಮೂರ್ತಿಗೆ ಹಾಲೆರೆಯುವುದನ್ನು ಬಿಟ್ಟು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಪಣತೊಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts