More

    ನಮಗೆ ನಾವೇ ವೈದ್ಯರಾಗೋಣ

    ನಾಗಮಂಗಲ: ಲಾಕ್‌ಡೌನ್ ಸಂದರ್ಭದಲ್ಲಿ ಜಾಗೃತರಾಗಿದ್ದಕ್ಕಿಂತ ಹೆಚ್ಚು ಲಾಕ್‌ಡೌನ್ ಸಡಿಲಗೊಳಿಸಿರುವಾಗ ಜಾಗೃತರಾಗುವುದು ಅತಿ ಮುಖ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.


    ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್-19 ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.


    ಲಾಕ್‌ಡೌನ್ ಮುಕ್ತಾಯವಾಗಿದೆಯೇ ಹೊರತು ಕರೊನಾ ಮುಕ್ತವಾಗಿಲ್ಲ, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕರೊನಾ ನಿಯಂತ್ರಣಕ್ಕಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತದ ಜತೆಗೆ ಸಹಕರಿಸಬೇಕು. ಜಿಲ್ಲಾಡಳಿತವೂ ಜಾಗೃತವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದಿರುವವರಿಗೆ ಮಾತ್ರ ಸೋಂಕು ದೃಢಪಟ್ಟಿದ್ದು, ಸ್ಥಳೀಯರು ಯಾವುದೇ ಆತಂಕಕ್ಕೊಳಗಾಗಬಾರದು. ಕರೊನಾ ನಿಯಂತ್ರಣಕ್ಕೆ ವ್ಯಾಕ್ಸಿನ್ ಬರುವವರೆಗೂ ನಮಗೆ ನಾವುಗಳೇ ವೈದ್ಯರಾಗಿರಬೇಕು, ಆಗಮಾತ್ರ ಸೋಂಕು ತಡೆಗಟ್ಟಲು ಸಾಧ್ಯ. ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರದ ಜತೆಗೆ ಆದಿಚುಂಚನಗಿರಿ ಮಠ ಕೈಜೋಡಿಸಿದ್ದು ಸಕಲ ಸೌಲಭ್ಯಗಳನ್ನು ನೀಡಲಾಗಿದೆ, ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದೆ ಎಂದರು.


    ರಾಜಕೀಯ ಬೇಡ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕೋವಿಡ್-19 ನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಯಾವುದೇ ರಾಜಕೀಯ ಬೇಡ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದಾಗಿ ಕೋವಿಡ್ ವಿರುದ್ಧ ಹೋರಾಡುವ ಮೂಲಕ ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸೋಣ. 1500ಕ್ಕೂ ಹೆಚ್ಚು ಜನ ಜಿಲ್ಲೆಗೆ ಹೊರ ರಾಜ್ಯದಿಂದ ಆಗಮಿಸಿದ್ದಾರೆ, ಎಲ್ಲರಿಗೂ ಸಕಲ ಸೌಲಭ್ಯಗಳನ್ನು ಜಿಲ್ಲಾಡಳಿತದ ವತಿಯಿಂದ ಒದಗಿಸಲಾಗಿದೆ. ನನ್ನ ತಂಗಿ ಮಗನನ್ನೇ ಕ್ವಾರಂಟೈನ್‌ನಲ್ಲಿರಿಸಿದ್ದೇನೆ. ಇದರಲ್ಲಿ ನಾನು ಯಾವುದೇ ರಾಜಕೀಯ ಮಾಡುತ್ತಿಲ್ಲ. ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಒಟ್ಟಾಗಿ ಸಲಹೆ ನೀಡುವ ಮೂಲಕ ಹೋರಾಡೋಣ ಎಂದರು.


    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಯ ಲ್ಯಾಬ್ ತೆರೆಯುವಂತೆ ಶ್ರೀಗಳು ಸೂಚನೆ ನೀಡಿದ್ದು ಅದರಂತೆ ವಾರದೊಳಗೆ ಲ್ಯಾಬ್ ತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಯಶಸ್ಸಿಗೆ ಜನಸಾಮಾನ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.

    ಸಭೆಯಲ್ಲಿ ಆದಿಚುಂಚನಗಿರಿ ಮಠದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಪ್ರಸನ್ನನಾಥ ಸ್ವಾಮೀಜಿ, ಶಾಸಕರಾದ ಸಿ.ಎಸ್.ಪುಟ್ಟರಾಜು, ಸುರೇಶ್‌ಗೌಡ, ಶ್ರೀನಿವಾಸ್, ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಸಿಇಒ ಯಾಲಕ್ಕೀಗೌಡ, ಎಸ್ಪಿ ಕೆ.ಪರಶುರಾಮ್, ಎಸಿ ಶೈಲಜಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts