More

    ನಾಡದೋಣಿ ಮೀನುಗಾರಿಕೆ ಮಾತ್ರ

    ಮಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೀನುಗಾರಿಕೆ, ಕೋಳಿ ಫಾರ್ಮ್ ಸೇರಿದಂತೆ ಕೆಲವು ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ವಿನಾಯಿತಿ ನೀಡಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಅನುಮತಿ ನೀಡಿದರೆ ಕರೊನಾ ಮತ್ತಷ್ಟು ಹಬ್ಬುವ ಭೀತಿ ಇದೆ ಎಂಬ ಕಾರಣ ನೀಡಿ ಏ.30ರ ವರೆಗೂ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಗಿದೆ.

    ಸಾಗರ ಮೀನುಗಾರಿಕೆ, ಅಕ್ವಾಕಲ್ಚರ್ ಕೈಗಾರಿಕೆ, ಫೀಡಿಂಗ್, ನಿರ್ವಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಕೋಲ್ಡ್ ಚೈನ್, ಮಾರಾಟ ಮತ್ತು ಮಾರ್ಕೆಟಿಂಗ್, ಫೀಡ್ ಸ್ಥಾವರಗಳು, ವಾಣಿಜ್ಯ ಅಕ್ವೇರಿಯಂ, ಮೀನು ಹಾಗೂ ಇದಕ್ಕೆ ಸಂಬಂಧಿಸಿದ ಕಾರ್ಮಿಕರ ಸಾಗಾಟಕ್ಕೆ ಕುರಿತು ಅವಕಾಶ ನೀಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಏ.10ರಂದು ಸುತ್ತೋಲೆ ಹೊರಡಿಸಿತ್ತು.

    ಆದರೆ ಈ ಬದಲಾವಣೆಯನ್ನು ಕಾರ್ಯಗತಗೊಳಿಸುವುದು ಹೇಗೆ ಎನ್ನುವ ಬಗ್ಗೆ ಮೀನುಗಾರರಲ್ಲೇ ಸಾಕಷ್ಟು ಗೊಂದಲಗಳು ವ್ಯಕ್ತವಾದವು. ನಾಡದೋಣಿ ಮೀನುಗಾರಿಕೆ ಸಣ್ಣಪ್ರಮಾಣದಲ್ಲಿ ಈಗಾಗಲೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಸಭೆ ನಡೆಸಿದರು. ಸದ್ಯದ ಸನ್ನಿವೇಶ ಆಳಸಮುದ್ರ ಮೀನುಗಾರಿಕೆಗೆ ಪೂರಕವಾಗಿಲ್ಲ. ಹಾಗಾಗಿ ನಾಡದೋಣಿ ಮೀನುಗಾರಿಕೆಯನ್ನಷ್ಟೇ ಮುಂದುವರಿಸಲು ನಿರ್ಧರಿಸಿದ್ದು, ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲು ತೀರ್ಮಾನಿಸಲಾಯಿತು.
    ಕರೊನಾ ಲಾಕ್‌ಡೌನ್ ವೇಳೆ ಕರಾವಳಿಯಲ್ಲಿ ಬಡ ಮೀನುಗಾರರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ನಾಡದೋಣಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮೀನು ಹಿಡಿಯಲಾಗುತ್ತಿದೆ, ಆದರೆ ಅವರು ಮೀನುಗಾರಿಕಾ ಬಂದರಿಗೆ ಬರಬಾರದು, ತಾವು ಹಿಡಿದಲ್ಲೇ ಸ್ಥಳೀಯವಾಗಿ ಮಾರಾಟ ಮಾಡಬೇಕು ಎಂದು ಈ ಮೊದಲು ತಿಳಿಸಲಾಗಿತ್ತು.

    ಹಿಂದೇಟು ಹಾಕಿದ್ದೇಕೆ?: ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ಶುರು ಮಾಡಿದರೆ ಅದಕ್ಕೆ ಬೇಕಾದ ಮಾನವ ಸಂಪನ್ಮೂಲವೂ ಹೆಚ್ಚು. ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು, ಹಿಡಿದ ಮೀನನ್ನು ಮಾರಾಟ ಮಾಡಲು ಜನರು, ಅಥವಾ ಅದನ್ನು ಫಿಶ್‌ಮೀಲ್‌ಗೆ ಸಾಗಿಸುವುದು, ಅಂತಾರಾಜ್ಯ ಸಾಗಾಟ ಇವೆಲ್ಲವೂ ಜತೆ ಜತೆಗೇ ಬರುವ ಸವಾಲುಗಳು. ಇವೆಲ್ಲವನ್ನು ಲಾಕ್‌ಡೌನ್ ಇರುವಾಗ ಮಾಡುವುದು ಕಷ್ಟ.
    ಮಂಗಳೂರು ಬಂದರಿನಲ್ಲಿ ಸುಮಾರು 1200 ಆಳ ಸಮುದ್ರ ಮೀನುಗಾರಿಕೆಯ ನೌಕೆಗಳು ಲಂಗರು ಹಾಕಿವೆ. ಅದರಲ್ಲಿ ಸುಮಾರು 700 ನೌಕೆಗಳ ಕಾರ್ಮಿಕರು ಹೊರ ರಾಜ್ಯದವರಾಗಿದ್ದು ಅವರೆಲ್ಲ ತಮ್ಮೂರಿಗೆ ಹೋಗಿದ್ದಾರೆ.

    ಈಗ ಆಳ ಸಮುದ್ರ ಮೀನುಗಾರಿಕೆ ನಡೆಸುವುದು ಬೇಡ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ, ಸಾಮಾಜಿಕ ಅಂತರ ಕಾಪಾಡುವುದು ಈಗ ಕಷ್ಟವಾಗಬಹುದು, ಇದೇ ನಿರ್ಧಾರವನ್ನು ಮೀನುಗಾರಿಕಾ ಸಚಿವರು ಮುಖ್ಯಮಂತ್ರಿಯವರ ಗಮನಕ್ಕೆ ತರಲಿದ್ದಾರೆ.
    – ಹರೀಶ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.

    ಮೀನು ಬೇಕು ಅಭಿಯಾನಕ್ಕೆ ಸಿಹಿ
    ಉಡುಪಿ: ಲಾಕ್‌ಡೌನ್ ಸಮಯದಲ್ಲಿ ನಾಡದೋಣಿ ಮೀನುಗಾರಿಕೆಗೆ ಅನುಮತಿ ಲಭಿಸಿರುವುದು ಮೀನುಗಾರರಿಕೆ ಮತ್ತು ‘ಮೀನು ಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಮಾಡಿದವರಿಗೆ ಸಿಹಿಸುದ್ದಿ. ಆದರೆ ಜಿಲ್ಲೆಯಲ್ಲಿ ಮೀನಿನ ಬೇಡಿಕೆ ತೀವ್ರವಿದ್ದು, ಪೂರೈಕೆ ಕಡಿಮೆಯಾಗುವುದರಿಂದ ದರ ದುಪ್ಪಟ್ಟಾಗುವ ಸಾಧ್ಯತೆ ಇದೆ.
    ಜಿಲ್ಲೆಯಲ್ಲಿ ಅಂದಾಜು 300ರಿಂದ 400 ನಾಡದೋಣಿಗಳಿದ್ದು, 4-5 ಮಂದಿ ಜತೆ ತೆರಳಿ ಮೀನುಗಾರಿಕೆ ನಡೆಸಲಿದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತವಾಗಿದ್ದರಿಂದ ಸ್ಥಳೀಯ ಮೀನುಗಾರರಿಗೆ ಸಣ್ಣಮಟ್ಟಿನ ಉದ್ಯೋಗ ಲಭಿಸಿದಂತಾಗಿದೆ. ಬಂದರಿನಲ್ಲಿ ವಾಸ ಮಾಡುತ್ತಿರುವ ಸಾವಿರಕ್ಕೂ ಅಧಿಕ ಹೊರ ರಾಜ್ಯದ ಕಾರ್ಮಿಕರನ್ನೂ ಬೇಕಾದರೆ ಬಳಸಿಕೊಳ್ಳಲು ಅವಕಾಶವಿದೆ.
    ಹೆಚ್ಚಿದ ಬೇಡಿಕೆ: ಜಿಲ್ಲೆಯಲ್ಲಿ 18 ದಿನಗಳಿಂದ ಮೀನುಗಾರಿಕೆ ಸ್ಥಗಿತವಾಗಿದ್ದು, ಬಂದರು ಪ್ರವೇಶವನ್ನೇ ನಿಷೇಧಿಸಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೀನು ಸರಬರಾಜು ಕುಂಠಿತಗೊಂಡಿದೆ. ಸದ್ಯ ನಾಡದೋಣಿಗೆ ಅವಕಾಶ ನೀಡಿದರೂ ಬೇಡಿಕೆಗೆ ಅನುಗುಣವಾಗಿ ಮೀನು ಲಭ್ಯತೆ ಅನುಮಾನ. ಹೀಗಾಗಿ ಮೀನುದರವೂ ದುಪ್ಪಟ್ಟಾಗಲಿದೆ.
    ‘ಮೀನುಗಾರರಿಗೆ ಸ್ವಲ್ಪ ಮಟ್ಟಿನ ಪ್ರಯೋಜನವಾಗಲಿದೆ. ನಿಗದಿತ ಸಮಯದಲ್ಲಿ ಮಹಿಳಾ ಮೀನುಗಾರರಿಗೆ ಮಾರಾಟ ಮಾಡಲು ಹಾಗೂ ಮೀನು ಸಾಗಾಟ ವಾಹನಗಳು ಸಂಚರಿಸಲು ಸರ್ಕಾರ, ಜಿಲ್ಲಾಡಳಿತ ಅವಕಾಶ ನೀಡಬೇಕು’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಒತ್ತಾಯಿಸಿದ್ದಾರೆ.

    ನಾಡದೋಣಿ ಮೀನುಗಾರಿಕೆ ಬಳಿಕ ಮೀನುಗಳನ್ನು ಸಮುದ್ರ ತಟದಲ್ಲಿ ಇಳಿಸಿಕೊಳ್ಳಲು ನಿರ್ದಿಷ್ಟ ಜಾಗಗಳನ್ನು ಗುರುತು ಮಾಡಲಾಗುವುದು. ಯಾವುದೇ ಕಾರಣಕ್ಕೂ ಬಂದರಿಗೆ ಪ್ರವೇಶವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಹೇಗೆ ಮೀನು ಮಾರಾಟ ಮಾಡಬಹುದು ಎಂಬ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಲಾಗುವುದು.
    – ಕಿರಣ್, ಸಹಾಯಕ ನಿರ್ದೇಶಕ, ಮೀನುಗಾರಿಕಾ ಇಲಾಖೆ, ಉಡುಪಿ

    ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಿದೆ. ಮೀನು ಸಂಗ್ರಹಿಸಿ ಸಮುದ್ರ ತೀರದಲ್ಲಿ ನಿಗದಿಪಡಿಸಿದ ಜಾಗದಲ್ಲಿ ವ್ಯಾಪಾರಸ್ಥರಿಗೆ ನೀಡಬೇಕು. ಮಹಿಳಾ ಮೀನುಗಾರರು 7ರಿಂದ 11ರವರೆಗೆ ನಿಗದಿತ ಸಮಯದಲ್ಲಿ ಮೀನು ಮಾರಾಟ ಮಾಡಬಹುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಎಲ್ಲ ನಿಯಮಗಳನ್ನು ಪಾಲಿಸಬೇಕು.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts