More

    ನಬಾರ್ಡ್‌ನಿಂದ 4.29 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಡಿಸಿಸಿ ಬ್ಯಾಂಕ್‌ನಿಂದ 2019ರ ಜನವರಿ 1ರ ನಂತರ ಕೋಳಿಫಾರಂ ಮತ್ತು ಹೈನುಗಾರಿಕೆಗೆ ಸಾಲ ಪಡೆದಿರುವ ಫಲಾನುಭವಿಗಳಿಗೆ ನಬಾರ್ಡ್‌ನಿಂದ 4.29 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹರ್ಷ ವ್ಯಕ್ತಪಡಿಸಿದರು.
    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬುಧವಾರ ಸುಗಟೂರು ಎಸ್‌ಎಫ್‌ಸಿಎಸ್ ವ್ಯಾಪ್ತಿಯ 96 ಫಲಾನುಭವಿಗಳಿಗೆ 1.31 ಕೋಟಿ ರೂ. ಮರು ಸಾಲ ವಿತರಿಸಿ ಮಾತನಾಡಿದರು.
    ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 200ರಿಂದ 300 ಫಲಾನುಭವಿಗಳು ಕೋಳಿ ಮತ್ತು ಹಸು ಸಾಕಲು 10ರಿಂದ 40 ಲಕ್ಷ ರೂ.ವರೆಗೆ ಸಾಲ ಪಡೆದಿದ್ದಾರೆ. ನಬಾರ್ಡ್ ನಿಯಮಾನುಸಾರ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸದಿದ್ದರೆ ಪ್ರೋತ್ಸಾಹಧನ ಹಿಂದಕ್ಕೆ ಹೋಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
    ಬ್ಯಾಂಕಿನಿಂದ 10 ಲಕ್ಷ ರೂ.ವರೆಗೆ ಸಾಲ ಪಡೆದ ಸಾಮಾನ್ಯ ವರ್ಗಕ್ಕೆ 2.50 ಲಕ್ಷ ರೂ, ಪ.ಜಾತಿ ಮತ್ತು ಪ.ಪಂಗಡಕ್ಕೆ 3.20 ಲಕ್ಷ ರೂ., 40 ಲಕ್ಷ ರೂ. ಸಾಲಕ್ಕೆ ಸಾಮಾನ್ಯ ವರ್ಗಕ್ಕೆ 10 ಲಕ್ಷ ರೂ. ಹಾಗೂ ಪ.ಜಾ ಹಾಗೂ ಪ.ಪಂಗಡಕ್ಕೆ 13.20 ಲಕ್ಷ ರೂ. ಪ್ರೋತ್ಸಾಹಧನ ಸಿಕ್ಕಿರುವುದರಿಂದ ಸಾಲದ ಹೊರೆಯಿಂದ ಪಾರಾಗುವಂತಾಗಿದೆ ಎಂದು ಅಭಿಪ್ರಾಯಿಸಿದರು.
    ಎರಡೂ ಜಿಲ್ಲೆಯ ರೈತರ ಕಷ್ಟ ಅರಿತು ನೀಡುತ್ತಿರುವ ಪ್ರೋತ್ಸಾಹಧನವನ್ನು ಕುರಿ, ಮೇಕೆ, ಹಂದಿ, ರೇಷ್ಮೆಗೆ ಪಡೆಯುವ ಸಾಲಕ್ಕೂ ವಿಸ್ತರಣೆ ಮಾಡುವಂತೆ ಶೀಘ್ರ ನಬಾರ್ಡ್ ಅಧಿಕಾರಿಗಳ ಬಳಿಗೆ ನಿಯೋಗ ಕೊಂಡೊಯ್ದು ಮನವಿ ಮಾಡುವುದಾಗಿ ಹೇಳಿದರು.
    ರೈತರಲ್ಲಿ ಬದ್ಧತೆ ಇದ್ದರೆ ವೈಯಕ್ತಿಕ ಪ್ರಗತಿ ಜತೆಗೆ ಡಿಸಿಸಿ ಬ್ಯಾಂಕಿಗೂ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಸಾಲಕ್ಕೆ ಡಿಸಿಸಿ ಬ್ಯಾಂಕ್, ಠೇವಣಿಗೆ ವಾಣಿಜ್ಯ ಬ್ಯಾಂಕ್ ಎಂಬ ಧೋರಣೆ ಬಿಡಬೇಕು, ನಮ್ಮ ಹಸು ನಮ್ಮ ಹೊಲದಲ್ಲಿ ಸಗಣಿ ಹಾಕಿದರೆ ಸಮೃದ್ಧಿ ಕಾಣಬಹುದೆಂದು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡದ ಗ್ರಾಹಕರಿಗೆ ಸೂಚ್ಯವಾಗಿ ತಿವಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಎಂಡಿ ರವಿ, ವ್ಯವಸ್ಥಾಪಕ ಅಂಬರೀಷ್, ಸುಗಟೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಸಿಇಒ ಪುಟ್ಟರಾಜು, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಎ.ಸಿ.ಭಾಸ್ಕರ್, ಗೋಪಾಲಪ್ಪ, ಹನುಮೇಗೌಡ, ವೆಂಕಟರಾಮಪ್ಪ, ವೆಂಕಟಮ್ಮ, ನಾಗೇಂದ್ರಪ್ರಸಾದ್, ಸಂಪತ್ ಕುಮಾರ್ ಮತ್ತಿತರರಿದ್ದರು.

    ಡಿಸಿಸಿ ಬ್ಯಾಂಕಿನಿಂದ 1.31 ಕೋಟಿ ರೂ. ಸಾಲ ಪಡೆದು ಸಕಾಲಕ್ಕೆ ಸಾಲ ಮರು ಪಾವತಿಸಿ ಮತ್ತೆ ಅಷ್ಟೇ ಮೊತ್ತದ ಬೆಳೆ ಸಾಲವನ್ನು ಪಡೆಯುತ್ತಿರುವ ತಾಲೂಕಿನ ಸುಗಟೂರು ಎಸ್‌ಎಫ್‌ಸಿಎಸ್ ವ್ಯಾಪ್ತಿಯ ರೈತರು ಎರಡೂ ಜಿಲ್ಲೆಗೆ ಮಾದರಿಯಾಗಿದ್ದಾರೆ.
    ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts