More

    ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನ್ಯಾಕ್ ಕಡ್ಡಾಯ

    – ಭರತ್ ಶೆಟ್ಟಿಗಾರ್, ಮಂಗಳೂರು
    ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಒಂದು ವರ್ಷದೊಳಗೆ ಕಡ್ಡಾಯವಾಗಿ ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಮಾನ್ಯತೆ ಪಡೆಯಬೇಕಾಗಿದೆ. ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

    ಮಂಗಳೂರು ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ನ್ಯಾಕ್‌ಗೆ ಸಿದ್ಧಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 37 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 5 ಕಾಲೇಜುಗಳು ಈಗಾಗಲೇ ಮೊದಲ ಹಂತದ ಸಿದ್ಧತೆ ನಡೆಸುತ್ತಿದೆ. ದ.ಕ ಜಿಲ್ಲೆಯ ಉಪ್ಪಿನಂಗಡಿ, ಬೆಳ್ತಂಗಡಿ, ವಿಟ್ಲ ಮತ್ತು ಬೆಳ್ಳಾರೆ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯಲು ಸಿದ್ಧಗೊಳ್ಳುತ್ತಿವೆ. ಈ ಕಾಲೇಜುಗಳು 5 ವರ್ಷಗಳ ಹಿಂದೆಯೇ ಮಾನ್ಯತೆ ಪಡೆದಿದ್ದು, ಮತ್ತೆ ಮಾನ್ಯತೆ ಪಡೆಯಲು ಮುಂದಾಗಿದೆ. ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ನ್ಯಾಕ್ ವಿಶೇಷಾಧಿಕಾರಿಗಳಾಗಿ ಡಾ.ಜಯಕರ ಭಂಡಾರಿ ಮತ್ತು ದೇವಿ ಪ್ರಸಾದ್ ಅವರನ್ನು ಇಲಾಖಾ ನಿರ್ದೇಶಕರು ನೇಮಕ ಮಾಡಿದ್ದಾರೆ.

    ನ್ಯಾಕ್ ಮಾನ್ಯತೆ ಯಾಕೆ?: ಯುಜಿಸಿ ಸೇರಿದಂತೆ ಸರ್ಕಾರದ ವಿವಿಧ ಅನುದಾನಗಳು, ಸೌಲಭ್ಯಗಳು ದೊರೆಯಬೇಕಿದ್ದರೆ ನ್ಯಾಕ್ ಮಾನ್ಯತೆ ಕಡ್ಡಾಯ. ಪ್ರತಿ ಐದು ವರ್ಷಕೊಮ್ಮೆ ನ್ಯಾಕ್‌ಗೆ ಒಳಪಡಬೇಕಾಗಿದ್ದು, ಕೋವಿಡ್ ಕಾರಣದಿಂದ ಮೌಲ್ಯಮಾಪನಕ್ಕೆ ಒಳಗಾಗಲು ಸಾಧ್ಯವಾಗದೆ ಮಂಗಳೂರು ವ್ಯಾಪ್ತಿಯ 7 ಕಾಲೇಜುಗಳು ತಮ್ಮ ಮಾನ್ಯತೆ ಕಳೆದುಕೊಂಡಿವೆ.

    ‘ಎ’ ಗ್ರೇಡ್ ಕಾಲೇಜುಗಳಿಲ್ಲ: ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರು ವ್ಯಾಪ್ತಿಯಲ್ಲಿ ನ್ಯಾಕ್ ಎ, ಎ+ ಗ್ರೇಡ್ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಲ್ಲ. ಈ ಮಾನ್ಯತೆ ಪಡೆದಿರುವ 16 ಕಾಲೇಜುಗಳ ಪೈಕಿ ಎರಡು ಕಾಲೇಜು ಬಿ++, ಮೂರು ಕಾಲೇಜು ಬಿ+, 11 ಬಿ ಗ್ರೇಡ್ ಪಡೆದ ಕಾಲೇಜುಗಳಿವೆ. 14 ಕಾಲೇಜುಗಳು ಇಲ್ಲಿಯವರೆಗೆ ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿಲ್ಲ ಎಂದು ನ್ಯಾಕ್ ವಿಶೇಷಾಧಿಕಾರಿ ಡಾ.ಜಯಕರ ಭಂಡಾರಿ ತಿಳಿಸಿದ್ದಾರೆ.

    ಪ್ರಕ್ರಿಯೆ ಹೇಗೆ?: ನ್ಯಾಕ್ ಮಾನ್ಯತೆ ಪಡೆಯಲು ಕಾಲೇಜು ಮೊದಲು ಗುಣಮಟ್ಟ ಮೌಲ್ಯೀಕರಣಕ್ಕಾಗಿ ಸಾಂಸ್ಥಿಕ ಮಾಹಿತಿಯನ್ನು (ಐಐಕ್ಯುಎ)ಆನ್‌ಲೈನ್ ಮೂಲಕ ಸಲ್ಲಿಸಬೇಕು. ಬಳಿಕ 1000 ಅಂಕಗಳನ್ನು ಹೊಂದಿರುವ ಸ್ವಯಂ ಅಧ್ಯಯನ ವರದಿ (ಎಸ್‌ಎಸ್‌ಆರ್) ಅಪ್‌ಲೋಡ್ ಮಾಡಬೇಕು. ಶೇ.70ರಷ್ಟು ಅಂಕಗಳು ಇದನ್ನು ಆಧರಿಸಿ ದೊರೆಯಲಿದೆ. ನ್ಯಾಕ್ ಪೀರ್ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ಉಳಿದ ಶೇ.30 ಅಂಕ ನೀಡುತ್ತದೆ. ಈ ಹಿಂದೆ ಪೀರ್ ಕಮಿಟಿಯೇ ಶೇ.100 ಅಂಕ ನೀಡುತ್ತಿತ್ತು. ಆದರೆ ಇದರಲ್ಲಿ ಅವ್ಯವಹಾರ ಸಾಧ್ಯತೆ ಹೆಚ್ಚಿರುವುದರಿಂದ ಮೌಲ್ಯಮಾಪನ ವಿಧಾನ ಬದಲಿಸಲಾಗಿದೆ. ಒಂದು ಬಾರಿ ನ್ಯಾಕ್ ಮೌಲ್ಯಾಂಕನಕ್ಕೆ ಒಳಗಾಗಲು 5 ಲಕ್ಷ ರೂ.ವರೆಗೆ ವೆಚ್ಚವಾಗುತ್ತಿದ್ದು, ವಿವಿಧ ಕಾಲೇಜುಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ.

    ಇಲಾಖೆ ಆಯುಕ್ತರ ಸೂಚನೆಯಂತೆ ಮುಂದಿನ ಒಂದು ವರ್ಷದೊಳಗೆ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನ್ಯಾಕ್ ಪ್ರಕ್ರಿಯೆಗೆ ಕಡ್ಡಾಯವಾಗಿ ಒಳಗಾಗಬೇಕು. ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಪ್ರಸ್ತುತ 5 ಕಾಲೇಜುಗಳು ನ್ಯಾಕ್ ಮೌಲ್ಯಾಂಕನಕ್ಕೆ ಸಿದ್ಧವಾಗುತ್ತಿವೆ.
    – ಡಾ.ಎಸ್.ಬಿ.ಅಪ್ಪಾಜಿ ಗೌಡ, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts