More

    ಎಥೆನಾಲ್ ಘಟಕ ಸ್ಥಾಪನೆಗೆ ಅನುದಾನಕ್ಕೆ ಮನವಿ: ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾಹಿತಿ

    ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪಿಸಲು 50 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
    ಮಂಡ್ಯ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ವೇಳೆ ಅಮಿತ್ ಷಾ ಅವರೊಂದಿಗೆ ಮಾತುಕತೆ ನಡೆಸಿರುವ ಡಾ. ಸಿದ್ದರಾಮಯ್ಯ, ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿ ಮೈಷುಗರ್ ಉಳಿದುಕೊಂಡಿದೆ. ನಷ್ಟದೊಳಗೆ ಸಿಲುಕಿರುವ ಮೈಷುಗರ್ ಕಾರ್ಖಾನೆಯನ್ನು ಬಲವರ್ಧನೆಗೊಳಿಸಲು 150 ಕೆಎಲ್‌ಪಿಡಿ ಸಾಮರ್ಥ್ಯದ ಎಥೆನಾಲ್ ಪ್ಲಾಂಟ್ ಅಗತ್ಯವಿದೆ. ಇದಕ್ಕೆ 120 ಕೋಟಿ ರೂ. ಅಗತ್ಯವಿದೆ. ಆದ್ದರಿಂದ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ 50 ಕೋಟಿ ರೂ. ಬಿಡುಗಡೆ ಮಾಡಿದರೆ ಉಳಿದ ಹಣವನ್ನು ಕಂಪನಿಯ ಹಣಕಾಸು ಮೂಲಗಳಿಗೆ ಕ್ರೋಡೀಕರಿಸಲಾಗುವುದು ಎಂದು ಮನವಿ ಮಾಡಿಕೊಂಡಿದ್ದಾರೆ.
    ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರುಚಾಲನೆ ನೀಡಿದ್ದಾರೆ. 2022-23ನೇ ಸಾಲಿನ ಬಜೆಟ್‌ನಲ್ಲಿ 50 ಕೋಟಿ ರೂ. ಘೋಷಿಸಿ ಅದರಲ್ಲಿ ಇದುವರೆಗೆ 32.58 ಕೋಟಿ ರೂ.ಗಳನ್ನು ಯಂತ್ರೋಪಕರಣಗಳ ದುರಸ್ತಿ ಕಾರ್ಯಕ್ಕೆ ನೀಡಿದೆ. 15 ಕೋಟಿ ರೂ. ದುಡಿಯುವ ಬಂಡವಾಳವನ್ನು ನೀಡಬೇಕಿದೆ. ಮೈಷುಗರ್ ಕಾರ್ಖಾನೆ ಮೈಸೂರು ಮಹಾರಾಜರ ಕೊಡುಗೆ. ಜಿಲ್ಲೆಯ ರೈತರ ಪಾಲಿನ ಆರ್ಥಿಕ ಜೀವನಾಡಿಯಾಗಿದೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಕಬ್ಬನ್ನು ಸರಾಗವಾಗಿ ಅರೆಯುವುದಕ್ಕೆ ವ್ಯವಸ್ಥೆ ಮಾಡಬೇಕಿದೆ ಎಂದಿದ್ದಾರೆ.
    ಸಕ್ಕರೆ ಉತ್ಪಾದನೆಯಿಂದಷ್ಟೇ ಕಾರ್ಖಾನೆಯನ್ನು ಪ್ರಗತಿಯತ್ತ ಮುನ್ನಡೆಸಲಾಗುವುದಿಲ್ಲ. ಎಥನಾಲ್ ಘಟಕವನ್ನು ಸ್ಥಾಪಿಸುವುದರೊಂದಿಗೆ ಕಾರ್ಖಾನೆಗೆ ನವಚೈತನ್ಯವನ್ನು ತುಂಬಬೇಕು. ಕಬ್ಬು ಬೆಳೆಗಾರರಲ್ಲಿ ಕಂಪನಿಯ ಬಗ್ಗೆ ಹೊಸ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದಕ್ಕಾಗಿ ಮೈಷುಗರ್ ಕಾರ್ಖಾನೆಗೆ ಅಗತ್ಯವಾಗಿ 50 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೋರಿದ್ದಾರೆ.
    ಮಾತ್ರವಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಮುಂದಿನ ವರ್ಷ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೈಜೋಡಿಸಿದರೆ ಕಾರ್ಖಾನೆಗೆ ಕಳೆದು ಹೋಗಿರುವ ಗತವೈಭವವನ್ನು ಮರಳಿಸಬಹುದು ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts