More

    ಡಿ.14ರಂದು ಪಂಚಲಿಂಗ ದರ್ಶನ ಮಹೋತ್ಸವ

    ತಲಕಾಡು: ತಲಕಾಡಿನಲ್ಲಿ ಡಿ.14ರಂದು ಜರುಗುವ ಪಂಚಲಿಂಗ ದರ್ಶನ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಇಲ್ಲಿನ ಶಿವಪಾರ್ವತಿ ಮಂಗಳ ಮಂದಿರದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೊಮಶೇಖರ್ ಸಮ್ಮುಖದಲ್ಲಿ ನಡೆಯಿತು.
    ನನೆಗುದಿಗೆ ಬಿದ್ದಿರುವ ಹಳೇತಲಕಾಡು ಮುಖ್ಯರಸ್ತೆ ದುರಸ್ತಿ, ಹೊಸಸೈಟ್ ಆಶ್ರಯ ಬಡಾವಣೆಗೆ ಸರ್ಕಾರಿ ರಸ್ತೆ ಕಲ್ಪಿಸಿಕೊಡಲು, ಬಸವನಗುಡ್ಡದ ಬಳಿ ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸಿಕೊಡಲು ಸಚಿವರಿಗೆ ಹಾಗೂ ಶಾಸಕರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
    ಕ್ಷೇತ್ರದ ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಕೋವಿಡ್ ಇರುವುದರಿಂದ ಈ ವರ್ಷ ಪಂಚಲಿಂಗದರ್ಶನ ಮಹೋತ್ಸವ ಜರುಗುವುದೋ ಅಥವಾ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಇದೆ. ಆದರೆ, ಸರ್ಕಾರ ಪಂಚಲಿಂಗದರ್ಶನ ಮಹೋತ್ಸವ ನಡೆಸುತ್ತದೆ ಎಂಬ ವಿಶ್ವಾಸ ಇದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತೊಮ್ಮೆ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
    ಸರ್ಕಲ್ ಇನ್ಸ್‌ಪೆಕ್ಟೆರ್ ಎಂ.ಆರ್.ಲವ ಮಾತನಾಡಿ, 2013ರಲ್ಲಿ ನಡೆದ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ 2000 ಪೊಲೀಸರನ್ನುಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. 5 ಕಡೆ ವಾಚ್‌ಟವರ್, 6 ಕಡೆ ಔಟ್ ಪೋಸ್ಟ್ ಪೊಲೀಸ್ ಠಾಣೆ ತೆರೆಯಲಾಗಿತ್ತು. ಭಕ್ತರು ಪುಣ್ಯ ಸ್ನಾನ ಮಾಡುವ ಕಾವೇರಿ ನದಿಯಲ್ಲಿ ಮೆಸ್ ಮಾದರಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. 5000 ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಲು ದೇಗುಲಗಳ ಬಳಿ ಬ್ಯಾರಿಕೇಡ್ ವ್ಯವಸ್ಥೆ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
    ಡಿ.10ರಿಂದ 19ರವರೆಗೆ _10 ದಿನ ಜರುಗುವ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ನೆರವೇರುವ ವಿವಿಧ ಧಾರ್ಮಿಕ ಉತ್ಸವಗಳ ಕುರಿತು ಪಂಚಲಿಂಗಗಳ ಪ್ರಧಾನ ದೇಗುಲದ ಆಗಮಿಕ ಅರ್ಚಕ ಆನಂದ್ ದೀಕ್ಷಿತ್ ಸಭೆಯಲ್ಲಿ ಓದಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಹೋತ್ಸವದ ಪೂರ್ವ ಸಿದ್ಧತೆಗಳ ಕುರಿತು ಮಾತನಾಡಿದರು.
    ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್‌ಪಿ ರಿಷ್ಯಂತ್, ಉಪವಿಭಾಗಾಧಿಕಾರಿ ಡಾ.ಎಂ.ಸಿ.ವೆಂಕಟರಾಜು, ಜಿ.ಪಂ.ಸದಸ್ಯ ಟಿ.ಎಚ್.ಮಂಜುನಾಥ್ , ಲೋಕೋಪಯೋಗಿ ಇಇ ವಿನಯ್ ಕುಮಾರ್, ಎಇಇ, ಶಿವರಾಜು, ತಹಸೀಲ್ದಾರ್ ಡಿ.ನಾಗೇಶ್, ಇಒ, ಜೆರಾಲ್ಡ್ ರಾಜೇಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ವಿ.ಮುರಳೀಧರ್, ತಾ.ಪಂ.ಸದಸ್ಯೆ ಶಿವಮ್ಮ, ರತ್ನರಾಜು, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಸಿ.ಲೋಕೇಶ್, ತಲಕಾಡು ಗ್ರಾ.ಪಂ.ಅಧ್ಯಕ್ಷೆ ಕವಿತಾ ವಿಜಯಕುಮಾರ್, ಟಿ.ದೊಡ್ಡಪುರ ಗ್ರಾ.ಪಂ.ಅಧ್ಯಕ್ಷ ಮರಿಸ್ವಾಮಿ ಮತ್ತಿತರರು ಹಾಜರಿದ್ದರು.
    ಉದ್ಯೋಗ ನೀಡುವ ಭರವಸೆ: ನರೇಗಾ ಕೂಲಿಕಾರ್ಮಿಕರಾಗಿ ಮಣ್ಣು ಹೊರುವ ಕೆಲಸ ಮಾಡುತ್ತಿರುವ ಟಿ.ದೊಡ್ಡಪುರ ವಾಸಿ ಎಂ.ಕಾಂ.ಪದವೀಧರೆ ಗೀತಾ, ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಡುಕುತೊರೆ ಬೆಟ್ಡದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಭೇಟಿ ಮಾಡಿ ಉದ್ಯೋಗ ನೀಡುವಂತೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು, ಉದ್ಯೋಗ ಒದಗಿಸಿಕೊಡುವ ಭರವಸೆ ನೀಡಿದರು.
    ಸಮಗ್ರ ಅಭಿವೃದ್ಧಿ ನೀಲಿನಕ್ಷೆ ಪರಿಶೀಲನೆ: ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ತಲಕಾಡಿನ ಪಂಚಲಿಂಗ ಪ್ರಧಾನ ಶ್ರೀ ವೈದ್ಯನಾಥೇಶ್ವರ ದೇವಾಲಯ ಹಾಗೂ ಮುಡುಕುತೊರೆ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಮುಡುಕುತೊರೆ ದೇಗುಲದ ಜೀರ್ಣೋದ್ಧಾರ ಹಾಗೂ ಬೆಟ್ಟದ 110 ಎಕರೆ ಅರಣ್ಯ ಪ್ರದೇಶವನ್ನು ಹಸಿರು ಪಾರ್ಕ್ ಮಾದರಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ತಯಾರಿಸಿರುವ ನೀಲಿನಕ್ಷೆಯನ್ನು ಸಚಿವರು ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts