More

    ನಮ್ಮನ್ನು ಮತ್ತೆ ಆಳುತ್ತಿದೆ ಮನುವಾದ

    ಮೈಸೂರು: ಹೊರ ದೇಶಕ್ಕೆ ಹೋದಾಗ ಬುದ್ಧನ ನಾಡಿನಿಂದ ಬಂದವರು ಎಂದು ಹೇಳಿಕೊಳ್ಳುತ್ತೇವೆ. ಆದರೆ ಮರಳಿ ದೇಶಕ್ಕೆ ಬಂದಾಗ ನಾವು ಮನುವಾದಕ್ಕೆ ಒಳಗಾಗುತ್ತಿದ್ದೇವೆ ಎಂದು ನಿವೃತ್ತ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಾಕುಮಾರ್ ಅಭಿಪ್ರಾಯಪಟ್ಟರು.

    ಅಶೋಕಪುರಂನ ಜೈ ಭೀಮ್ ಕೊರೆಗಾಂವ್ ವಿಜಯೋತ್ಸವ ಸಮಿತಿಯಿಂದ ಬುಧವಾರ ಅಶೋಕಪುರಂನಲ್ಲಿ ಆಯೋಜಿಸಿದ್ದ ಭೀಮಾ ಕೊರೆಗಾಂವ್ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

    ಇಂದಿನ ಆಡಳಿತವನ್ನು ನೋಡಿದರೆ ಮನುವಾದ ಮತ್ತೆ ನಮ್ಮನ್ನು ಆಳುತ್ತಿದೆ ಎಂದೆನಿಸುತ್ತದೆ. ತಪ್ಪು ಹಾದಿಯಲ್ಲಿ ಸಾಗುತ್ತಿರುವ ಆಡಳಿತವು ಇಂತಹ ಸಂದರ್ಭದಲ್ಲಿ ಭೀಮಾ ಕೊರೆಂಗಾವ್ ನೆನಪು ಹಾಗೂ ಅಂಬೇಡ್ಕರ್ ಅವರ ಸಂದೇಶವನ್ನು ಅರಿತು ಅದರಂತೆ ನಡೆಯಬೇಕಿದೆ ಎಂದು ಆಶಿಸಿದರು.

    ಹಿಟ್ಲರ್ ಹಾಕಿಕೊಟ್ಟ ಸ್ಕ್ರಿಪ್ಟ್, ನಡೆ, ನುಡಿ, ಕಾಯ್ದೆಗಳು ಜಾರಿಯಾಗುತ್ತಿವೆ. ದೇಶದಲ್ಲಿ ಧರ್ಮದ ಆಧಾರದ ಮೇಲೆ ಮುಸ್ಲಿಮರನ್ನು ಹೊರಗಿಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸಿಎಎ, ಎನ್‌ಆರ್‌ಸಿ ಈ ಎಲ್ಲ್ಲ ಕಾಯ್ದೆಗಳು ಅಮಾನವೀಯ ಗುಣಗಳನ್ನು ಹೊಂದಿವೆ. ಇದರ ವಿರುದ್ಧ ಅಮೆರಿಕ ಸೇರಿದಂತೆ ಯುರೋಪ್ ಸಂಯುಕ್ತ ಸರ್ಕಾರವು ಭಾರತಕ್ಕೆ ಛೀಮಾರಿ ಹಾಕಿವೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಬ್ರಿಟಿಷ್ ಸೈನ್ಯದ ಮಹಾರ್ ಸಮುದಾಯದ 500 ಸೈನಿಕರು ಹಾಗೂ 2ನೇ ಬಾಜಿರಾವ್ ಪೇಶ್ವೆಯ 25 ಸಾವಿರ ಸಂಖ್ಯೆಯಲ್ಲಿದ್ದ ಬೃಹತ್ ಸೈನ್ಯದ ವಿರುದ್ಧ 1818ರ ಜ.1ರಂದು ಕೊರೆಗಾಂವ್ ಪ್ರದೇಶದಲ್ಲಿ ಯುದ್ಧ ಸಾರಿದರು. ಕೊನೆಗೆ ಬ್ರಿಟಿಷ್ ಸೈನ್ಯದ ಮಹಾರ್ ಸಮುದಾಯ ಸೈನಿಕರು ಜಯಗಳಿಸಿದರು. ಇತಿಹಾಸದಲ್ಲಿ ಹುದುಗಿಹೋಗಿದ್ದ ಕೊರೆಗಾಂವ್ ಯುದ್ಧವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಧಿಸಿ ಇಡೀ ದೇಶಕ್ಕೆ ಮಹಾರ್ ಸೈನಿಕರು ಸಾಧನೆಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿಯೇ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಅಂಬೇಡ್ಕರ್ ಹೇಳಿದ್ದರು ಎಂದು ಸ್ಮರಿಸಿದರು.

    ನಳಂದ ಬೌದ್ಧ ವಿವಿಯ ಭೋದಿ ದತ್ತ ಬಂತೇಜಿ, ಮಾಜಿ ಮೇಯರ್ ಪುರುಷೋತ್ತಮ್, ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ದೀಪಕ್, ಲೇಖಕ ನಾಗಸಿದ್ಧಾರ್ಥ ಹೊಲೆಯರ್, ಎಪಿಎಂಸಿ ಉಪಾಧ್ಯಕ್ಷ ಚಿಕ್ಕಜವರಪ್ಪ ಇತರರು ಇದ್ದರು. ಕೊರೆಗಾಂವ್ ವಿಜಯೋತ್ಸವದ ಸಂಭ್ರಮಾಚರಣೆ ಅಂಗವಾಗಿ ಪುರಭವನದಿಂದ ಅಶೋಕಪುರಂನ ಜಯನಗರ ಗೇಟ್‌ವರೆಗೆ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts