More

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಎಂ.ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಟಿಕೆಟ್?

    ಮಂಜುನಾಥ ತಿಮ್ಮಯ್ಯ ಮೈಸೂರು


    ಪ್ರತಿಷ್ಠಿತ ಕಣ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಇನ್ನೂ ಕೊನೆಯಾಗಿಲ್ಲ.

    ಸದ್ಯಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಹೆಚ್ಚಿದೆ. ಪಕ್ಷದ ವಲಯದಲ್ಲೂ ಅವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಅವರನ್ನು ಹೊರತುಪಡಿಸಿ ಅಚ್ಚರಿ ಅಭ್ಯರ್ಥಿ ಅಥವಾ ಹೊಸ ಮುಖಕ್ಕೂ ಮಣೆಯನ್ನೂ ಹಾಕಬಹುದು.


    ಸ್ಥಳೀಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಸಿಎಂ ತವರಿನಲ್ಲೇ ಜಯ ದಾಖಲಿಸಲು ಬಿಜೆಪಿಯ ತವಕ. ಹೀಗಾಗಿಯೇ, ಚುನಾವಣೆ ರಂಗೇರುವುದು ನಿಶ್ಚಿತ.


    ಕೈ ಅಭ್ಯರ್ಥಿ ಯಾರು?


    ಈಗಾಗಲೇ ಬಿಜೆಪಿ ಟಿಕೆಟ್ ಘೋಷಿಸಿದ್ದು, ಈ ಕ್ಷೇತ್ರದ ಕಮಲದ ಅಭ್ಯರ್ಥಿಯಾಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯಿಂದ ರಸ್ತೆಗಿಳಿದು ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು, ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರು ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರುತ್ತಿದ್ದಾರೆ. ಮಠಗಳ ಸ್ವಾಮೀಜಿಗಳು, ಧಾರ್ಮಿಕ ಮುಖಂಡರ ಆಶೀರ್ವಾದವನ್ನೂ ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಪ್ರಚಾರ ಬಿರುಸುಗೊಳಿಸಿರುವ ಅವರು ಎಲೆಕ್ಷನ್ ಅಖಾಡಕ್ಕೆ ಧುಮುಕಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.


    ಸೂಕ್ತ ಹುರಿಯಾಳು ತಯಾರು ಮಾಡಲಿಲ್ಲ:


    ಯದುವೀರ ವಿರುದ್ಧ ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ಗೆ ಸಿಗುತ್ತಿಲ್ಲ. ಇದುವೇ ಸಮಸ್ಯೆ ಆಗಿದೆ. ಕಳೆದ ಹತ್ತು ವರ್ಷದಲ್ಲಿ ಒಬ್ಬ ಸೂಕ್ತ ಹುರಿಯಾಳು ತಯಾರು ಮಾಡಲು ಕೈ ಪಡೆಗೆ ಸಾಧ್ಯವಾಗಲಿಲ್ಲ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ಸಂಸದರಾಗಿದ್ದರೂ ಸೋತರು. ಇವರ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸುಲಭವಾಗಿ ಜಯ ಸಾಧಿಸಿದರು.


    ಈ ಸೋಲಿನಿಂದ ಪಾಠ ಕಲಿಯದ ಕಾಂಗ್ರೆಸ್ ಬಳಿಕವೂ ಪ್ರಬಲ ಆಕಾಂಕ್ಷಿಯನ್ನು ಬೆಳೆಸಲಿಲ್ಲ. ಸೂಕ್ತ ಅಭ್ಯರ್ಥಿಯನ್ನೂ ಹುಟ್ಟು ಹಾಕಿಲ್ಲ. ಹೀಗಾಗಿ, 2019ರ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಸಿ.ಎಚ್.ವಿಜಯಶಂಕರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ಕೊಡಲಾಯಿತು. ಎಷ್ಟೇ ಪ್ರಯತ್ನ ಹಾಕಿದ್ದರೂ ಅವರು ಜಯದ ದಡ ಮುಟ್ಟಿಲ್ಲ. ಆಗಲೂ ಮುಖಭಂಗ ಎದುರಿಸಿದ ಕೈ ಪಡೆ ಪಾಠ ಕಲಿಯಲಿಲ್ಲ. ತದನಂತರ 5 ವರ್ಷದಲ್ಲೂ ತಯಾರಿ ಮಾಡಿಕೊಳ್ಳದ ಅದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತು.


    ಆದರೆ, ಬಿಜೆಪಿಗೆ ತಿರುಗೇಟು ಕೊಡುವಂತಹ ಅಭ್ಯರ್ಥಿ ದೊರೆಯಲಿಲ್ಲ. ಗೆಲ್ಲುವ ಕುದುರೆಗಾಗಿ ಅನ್ಯ ಪಕ್ಷದವರಿಗೂ ಗಾಳ ಹಾಕಿದರೂ ಅದು ಸಹ ಗುರಿ ಮುಟ್ಟಿಲ್ಲ. ಇದರಿಂದಾಗಿ ನಿರಾಶೆಗೆ ಒಳಗಾಗಿರುವ ಕಾಂಗ್ರೆಸ್ ಈಗಿರುವ ಆಕಾಂಕ್ಷಿಗಳಲ್ಲೇ ಒಬ್ಬರನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ ಎಂದು ಆ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

    ಲೆಕ್ಕಾಚಾರವನ್ನು ತಿರುವು-ಮುರುವು:


    ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಬೇಕಾದ ಭೂಮಿಕೆಯನ್ನು ಹದಮಾಡಿಕೊಂಡು ಎಲೆಕ್ಷನ್‌ಗೆ ತಯಾರಾಗಿದ್ದರು.


    ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ ಕಾಂಗ್ರೆಸ್ ಗೆಲುವಿಗೆ ಬೇಕಾದ ರೀತಿಯಲ್ಲಿ ಕಾರ್ಯತಂತ್ರ ಹೂಡುವ ಜತೆಗೆ ಎದುರಾಳಿಯನ್ನು ಮಣಿಸಿ ಮತ ಪಡೆಯುವುದರ ಬಗ್ಗೆಯೂ ಹಲವಾರು ಸಲಹೆ ಕೊಟ್ಟಿದ್ದರು. ಆದ್ದರಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪಡೆ ಹೊಸ ಉತ್ಸಾಹದಿಂದ ಸಿದ್ಧವಾಗಿತ್ತು.


    ಈ ನಡುವೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ 14 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಅಂತಿಮವಾಗಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿತ್ತು. ಹೀಗಾಗಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲೂ ಈ ಇಬ್ಬರ ಹೆಸರಿನೊಂದಿಗೆ ಕೊಡಗು ಜಿಲ್ಲೆಯಿಂದ ಕೆಪಿಸಿಸಿ ವಕ್ತಾರ ಚಂದ್ರಮೌಳಿ ಹೆಸರು ಸೇರಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿತ್ತು.


    ಈ ಮಧ್ಯೆ, ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಣೆ ಹಾಕಲಾಯಿತು. ಇದು ಕಾಂಗ್ರೆಸ್ ಲೆಕ್ಕಾಚಾರವನ್ನು ತಿರುವು ಮುರುವು ಮಾಡಿತು. ಬಿಜೆಪಿಗೆ ತಿರುಗೇಟು ಕೊಡಲು ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಿದೆ.

    ಈ ಸಲ ರಣತಂತ್ರ:

    ಯದುವೀರ ವಿರುದ್ಧ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಖಾಡಕ್ಕಿಳಿಸಲು ಹೈಕಮಾಂಡ್ ಸಲಹೆ ನೀಡಿತ್ತು. ಆದರೆ, ಇದಕ್ಕೆ ಸಿದ್ದರಾಮಯ್ಯ ಸಮ್ಮತಿಸಿಲ್ಲ. 2004ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಿಕ 2009, 2014, 2019ರಿಂದಲೂ ಕುರುಬ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ‘ಸ್ವಜಾತಿಗೆ ಮಣೆ ಹಾಕಲಾಗಿದೆ’ ಎಂದು ಸಿದ್ದರಾಮಯ್ಯ ಅಣಿಯಲು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಕೆ ಮಾಡಿಕೊಂಡಿವೆ. ಇದು ಜಾತಿಗಳ ಸಮೀಕರಣಕ್ಕೆ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತ್ತು.

    ಹೀಗಾಗಿ, ಈ ಸಲ ಸಿದ್ದರಾಮಯ್ಯ ತಂತ್ರ ಬದಲು ಮಾಡಿದ್ದಾರೆ. ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ಕೊಡಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ಒಕ್ಕಲಿಗ ಮತಗಳೊಂದಿಗೆ ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತಗಳ ಕ್ರೋಡೀಕರಣಕ್ಕೆ ಲೆಕ್ಕಾಚಾರ ಹಾಕಲಾಗಿದೆ. ಸ್ಥಳೀಯ ನಾಯಕರ ಸಲಹೆ-ಸೂಚನೆ ಪಡೆದುಕೊಂಡು ರಣತಂತ್ರ ಎಣೆದಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದರ ಕುರಿತು ಎಲ್ಲಿಯೂ ಬಾಯಿಬಿಟ್ಟಿಲ್ಲ. ಮುನ್ಸೂಚನೆಯನ್ನೂ ನೀಡಿಲ್ಲ. ಹೀಗಾಗಿ, ಯಾರು ಅಭ್ಯರ್ಥಿ ಆಗುತ್ತಾರೆ ಎಂಬ ಕುತೂಹಲ ನಮ್ಮ ಪಕ್ಷದವರಿಗೂ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.


    ಸಿಇಸಿ ಸಭೆಯತ್ತ ಚಿತ್ತ:

    ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಸಭೆಯತ್ತ ಚಿತ್ತ ನೆಟ್ಟಿದೆ. ರಾಜ್ಯದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಮಾರ್ಚ್ 8ರಂದು ಕಾಂಗ್ರೆಸ್ ಪ್ರಕಟಿಸಿದೆ.

    ಮೈಸೂರು- ಕೊಡಗು ಕ್ಷೇತ್ರ ಸೇರಿದಂತೆ ಉಳಿದ 21 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿಯಿದೆ. ಈ ಪೈಕಿ, ಬಹುತೇಕ ಕ್ಷೇತ್ರಗಳಿಗೆ ಪಕ್ಷದ ಸ್ಕ್ರೀನಿಂಗ್ ಕಮಿಟಿ ಕೆಲ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ಶಿಫಾರಸು ಮಾಡಿದೆ. ದೆಹಲಿಯಲ್ಲಿ ಸಿಇಸಿ ಸಭೆ ನಡೆಯಲಿದ್ದು, ಇಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts