More

    ಇಂದಿನಿಂದ ಮೈಸೂರಿನಲ್ಲಿ ಬಸ್ ಸಂಚಾರ

    ಒಂದೊಂದು ಡಿಪೋದಿಂದ 15 ಬಸ್ ಬಳಕೆ, ಸಂಜೆ 7ರೊಳಗೆ ಸ್ವಸ್ಥಾನಕ್ಕೆ ವಾಪಸ್

    ಮೈಸೂರು: ರಾಜ್ಯ ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮೇ 19ರಿಂದ ಬಸ್ ಸಂಚಾರ ಆರಂಭವಾಗಲಿದೆ.
    ಲಾಕ್‌ಡೌನ್ 4.0 ದಲ್ಲಿ ಬಸ್ ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿಕೊಡಬಹುದೆಂಬ ನಿರೀಕ್ಷೆಯೊಂದಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಲ ದಿನಗಳ ಹಿಂದೆಯೇ ಅಗತ್ಯ ತಯಾರಿಯಲ್ಲಿ ನಿರತವಾಗಿತ್ತು. ನಿರೀಕ್ಷೆಯಂತೆ ಗೃಹ ಸಚಿವಾಲಯ ಬಸ್ ಸಂಚಾರಕ್ಕೆ ಅವಕಾಶ ನೀಡಿದ ಪರಿಣಾಮ ರಾಜ್ಯ ಸರ್ಕಾರ ಯಾವಾಗ ಬೇಕಾದರೂ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಬಹುದು ಎಂದು ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಗೆ ಎಲ್ಲರೂ ಸಿದ್ಧವಿರಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ವಿಭಾಗಗಳಿಗೆ ಸೂಚನೆ ನೀಡಿದ್ದರು.
    ಅದರಂತೆ, ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರದಿಂದ ರೆಡ್‌ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಸ್ ಸಂಚಾರ ಆರಂಭ ಮಾಡುವಂತೆ ಘೋಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ನಿಯಂತ್ರಣಾಧಿಕಾರಿಗಳು ಬಸ್ ಸಂಚಾರಕ್ಕೆ ಕ್ರಮವಹಿಸಿದ್ದಾರೆ.
    ಮೈಸೂರು ವಿಭಾಗ: ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ. ಕೋಟೆ ಹಾಗೂ ಮೈಸೂರು ನಗರದಲ್ಲಿರುವ ಮೂರು ಡಿಪೋ ಸೇರಿ ಮೈಸೂರು ವಿಭಾಗದಲ್ಲಿ 7 ಡಿಪೋಗಳಿದ್ದು, ಸದ್ಯಕ್ಕೆ ಒಂದೊಂದು ಡಿಪೋದಿಂದ 15 ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗುತ್ತದೆ. ಬೆಳಗ್ಗೆ 7ಕ್ಕೆ ಡಿಪೋ ಬಿಡುವ ಬಸ್‌ಗಳು ಸಂಜೆ 7ರೊಳಗೆ ಸ್ವಸ್ಥಾನಕ್ಕೆ ಸೇರಬೇಕು.

    ಚಾಮರಾಜನಗರ ವಿಭಾಗ: ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ನಂಜನಗೂಡು ಸೇರಿದಂತೆ ಚಾಮರಾಜನಗರ ವಿಭಾಗದಲ್ಲಿ 4 ಡಿಪೋಗಳಿದ್ದು ಪ್ರಯಾಣಿಕರನ್ನು ನೋಡಿಕೊಂಡು ಒಂದೊಂದು ಡಿಪೋದಿಂದ 30ರಿಂದ 40 ಬಸ್ಸುಗಳನ್ನು ರೂಟ್‌ಗೆ ಬಿಡಲಾಗುತ್ತಿದೆ. ಚಾಮರಾಜನಗರ ಹಸಿರು ವಲಯ ಆಗಿರುವುದರಿಂದ ಮೇ 4ರಿಂದಲೇ ಬಸ್ ಸಂಚಾರ ಆರಂಭಿಸಲಾಗಿದೆ. ಮೈಸೂರು ಜಿಲ್ಲೆಯ ಹೃದಯ ಭಾಗವಾಗಿರುವ ನಂಜನಗೂಡು ಡಿಪೋ ಚಾಮರಾಜನಗರ ವಿಭಾಗಕ್ಕೆ ಸೇರಿರುವುದರಿಂದ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಮೇ 19ರಿಂದ ಬಸ್ ಸಂಚಾರ ಶುರುವಾಗಲಿದೆ.
    ನಿಲ್ದಾಣಗಳಲ್ಲಿ ಕಟ್ಟೆಚ್ಚರ: ಕೋವಿಡ್ ಸೋಂಕು ತಗುಲದಂತೆ ತಾಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನಿಲ್ದಾಣಗಳಲ್ಲಿ ಪ್ರಯಾಣಿಕರು ಬೇಕಾಬಿಟ್ಟಿ ನುಗ್ಗುವುದಕ್ಕೆ, ಅಡ್ಡಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಬಸ್ ನಿಲ್ದಾಣದಲ್ಲಿ ಪ್ರವೇಶ ದ್ವಾರ ನಿರ್ಮಿಸಲಾಗಿದ್ದು, ಈ ದ್ವಾರದಿಂದಲೇ ಪ್ರಯಾಣಿಕರು ಒಳ ಪ್ರವೇಶಿಸಬೇಕು. ಪ್ರತಿಯೊಬ್ಬರು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು. ನಿಲ್ದಾಣದೊಳಗೆ ಆಟೋರಿಕ್ಷಾ, ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಂತಿಮವಾಗಿ ಡಿಪೋಗೆ ಬಂದ ಬಸ್ಸುಗಳನ್ನು ಔಷಧ ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತದೆ.
    ಸಿಬ್ಬಂದಿ ಬಳಕೆ: ಪ್ರಮುಖವಾಗಿ ಚಾಲಕ, ನಿರ್ವಾಹಕರ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಪ್ರತಿ ಸಿಬ್ಬಂದಿ ವೈದ್ಯಕೀಯ ತಪಾಸಣೆಗೆ ಒಳಪಟ್ಟು ಸಾಮರ್ಥ್ಯನೀಯ ಪ್ರಮಾಣ ಪತ್ರದೊಂದಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಚಾಲಕ ಹಾಗೂ ನಿರ್ವಾಹಕ ಸ್ಯಾನಿಟೈಸರ್ ಬಳಕೆ, ಕೈಗವಸು, ಮಾಸ್ಕ್, ಫೇಸ್ ಶೀಲ್ಡ್ ಧರಿಸುವುದು, ಪ್ರಯಾಣಿಕರಿಂದ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಕರ್ತವ್ಯಕ್ಕೆ ಹಾಜರಾಗುವ ಪ್ರತಿ ಸಿಬ್ಬಂದಿಯನ್ನು ನಿತ್ಯವೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ.
    ಜತೆಗೆ ಪ್ರಯಾಣಿಕರ ಆರೋಗ್ಯದ ಬಗ್ಗೆಯೂ ಒಂದಷ್ಟು ಗಮನ ಹರಿಸಬೇಕಾಗಿರುವುದರಿಂದ ಪ್ರಯಾಣಿಕರನ್ನೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಹಾಕುವುದರ ಜತೆಗೆ ಪರಸ್ಪರ ಅಂತರ ಕಾಪಾಡಬೇಕು. ಒಂದು ಬಸ್‌ನಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts