More

    ಮೈಸೂರು ಪಾಲಿಕೆ ಬಜೆಟ್: ಪೇ ಆ್ಯಂಡ್ ಪಾರ್ಕಿಂಗ್ ಜಾರಿ, ಕೆರೆ-ಕಲ್ಯಾಣ-ಉದ್ಯಾನಗಳ ಅಭಿವೃದ್ಧಿ

    ಮೈಸೂರು: ಮಳೆ ನೀರು ಕೊಯ್ಲು ಥೀಮ್ ಪಾರ್ಕ್, ಕೆರೆ-ಕಲ್ಯಾಣ-ಉದ್ಯಾನಗಳ ಅಭಿವೃದ್ಧಿ, ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ, ನೀರು ಸರಬರಾಜು ಉನ್ನತೀಕರಣ, ಸಂಸ್ಕರಿತ ನೀರಿನಿಂದ ದೇವನೂರು ಕೆರೆ ಪುನರಜ್ಜೀವನ, ಸಿಎಸ್‌ಎಸ್ ಅಡಿ ವೃತ್ತಗಳ ಅಭಿವೃದ್ಧಿ..!


    -ಇವು ಮೈಸೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಆಯವ್ಯಯದ ಮುಖ್ಯಾಂಶಗಳು.


    ಮೈಸೂರು ಪ್ರಾದೇಶಿಕ ಆಯಕ್ತರೂ ಆದ ಪಾಲಿಕೆ ಆಡಳಿತಾಧಿಕಾರಿ ಡಾ.ಜಿ.ಸಿ.ಪ್ರಕಾಶ್ ಶನಿವಾರ ಮಧ್ಯಾಹ್ನ ಬಜೆಟ್ ಮಂಡಿಸಿದರು. ಕೇವಲ 10 ನಿಮಿಷದಲ್ಲೇ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿತು. ಪಾಲಿಕೆ ಸದಸ್ಯರು, ಮೇಯರ್, ಉಪಮೇಯರ್ ಇಲ್ಲದ ಕಾರಣ ಯಾವುದೇ ಚರ್ಚೆ, ಸಂವಾದವಿಲ್ಲದೆ ಇದು ಅನುಮೋದನೆಗೊಂಡಿತು.


    ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ಸೇರಿದಂತೆ ಇತರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಆಯವ್ಯಯ ಸಭೆ ನೀರಸವಾಗಿ ನಡೆಯಿತು. 20 ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಉದ್ದೇಶಿಸಿದೆ.


    ಪೇ ಆ್ಯಂಡ್ ಪಾರ್ಕಿಂಗ್ ಗುಮ್ಮ


    ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಲು ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು. ಪುರಭವನ ಬೇಸ್‌ಮೆಂಟ್ ಪಾರ್ಕಿಂಗ್ ಕಟ್ಟಡದಲ್ಲಿ, ನಂಜರಾಜ ಬಹದ್ದೂರ್ ಛತ್ರದ ಆವರಣ, ಡಿ.ದೇವರಾಜ ಅರಸು ರಸ್ತೆಯಲ್ಲಿ ಈ ಸೌಲಭ್ಯ ಅನುಷ್ಠಾನಕ್ಕೆ ಬರಲಿದೆ. ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ನಗರದ ಹೃದಯ ಭಾಗದಲ್ಲಿ ವಾಹನಗಳ ನಿಲುಗಡೆಗೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ಈ ಕ್ರಮ ವಹಿಸಲಾಗುವುದು ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ.


    ಪುರಭವನ ಅಭಿವೃದ್ಧಿ:


    ಪುರಭವನ ಕಟ್ಟಡದ ಆವರಣದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳು, ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ಅರಮನೆಗೆ ಸಮೀಪ ಇರುವ ಇಲ್ಲಿ ಸಾರ್ವಜನಿಕರು, ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ರಮ ವಹಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
    ಥೀಮ್ ಪಾರ್ಕ್: ನಗರದ ಹೃದಯ ಭಾಗದಲ್ಲಿರುವ ಒಂಟಿಕೊಪ್ಪಲಿನ ಚೆಲುವಾಂಬ ಉದ್ಯಾನವನ್ನು ‘ಮಳೆ ನೀರು ಕೊಯ್ಲು ಥೀಮ್ ಪಾರ್ಕ್’ ಆಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.


    ಕೆರೆ, ಕಲ್ಯಾಣಿ ಅಭಿವೃದ್ಧಿ:

    ಬೋಗಾದಿ ಕೆರೆ, ಅಯ್ಯಜಯ್ಯನಹುಂಡಿ, ತಿಪ್ಪಯ್ಯನಕೆರೆ, ಸರಸ್ವತಿಪುರಂನ ಕಲ್ಯಾಣಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಜತೆಗೆ, ದಟ್ಟಗಳ್ಳಿಯ ಸೈನಿಕ ಉದ್ಯಾನ, ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಉದ್ಯಾನ, ಕಲ್ಯಾಣಗಿರಿ ಉದ್ಯಾನ, ಕದಲೀವನ ಉದ್ಯಾನ, ಅಕ್ಬರ್ ಅಲಿ ಉದ್ಯಾನವನ್ನೂ ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ.

    ಮೈಸೂರು ಪಾಲಿಕೆ ಬಜೆಟ್: ಪೇ ಆ್ಯಂಡ್ ಪಾರ್ಕಿಂಗ್ ಜಾರಿ, ಕೆರೆ-ಕಲ್ಯಾಣ-ಉದ್ಯಾನಗಳ ಅಭಿವೃದ್ಧಿ


    ಒಳಚರಂಡಿ ಕೊಳವೆ ಮಾರ್ಗ ಅಭಿವೃದ್ಧಿ:


    80 ಕೋಟಿ ರೂ. ವೆಚ್ಚದಲ್ಲಿ ಅಂದಾಜು 35 ಕಿ.ಮೀ. ಮುಖ್ಯ ಒಳಚರಂಡಿ ಕೊಳವೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನುದಾನದಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದಕ್ಕಾಗಿ ಪೂರಕವಾಗಿ ಪಾಲಿಕೆಯಿಂದ 15 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಲಾಗಿದೆ.


    ಹೆಚ್ಚುವರಿ ನೀರಿನ ಬಳಕೆ ಕ್ರಮ:


    ಕಬಿನಿ ನದಿ ಮೂಲದಿಂದ 60 ಎಂಎಲ್‌ಡಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಕೆಂಬಾಳು ಜಲ ಶುದ್ಧೀಕರಣ ಘಟಕವನ್ನು 60 ರಿಂದ 120 ಎಂಎಲ್‌ಡಿ ಸಾಮರ್ಥ್ಯಕ್ಕೆ ಉನ್ನತೀಕರಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಹೆಚ್ಚುವರಿ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ.


    ದೇವನೂರು ಕೆರೆ ಜೀರ್ಣೋದ್ಧಾರ:

    ದೇವನೂರು ಕೆರೆಯ ಸುತ್ತಲಿನ ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಕೆಸರೆಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿತಗೊಳ್ಳುತ್ತಿದ್ದು, ಈ ನೀರನ್ನು ಬಳಸಿ ಕೆರೆಯನ್ನು ಪುನರುಜ್ಜೀವನಗೊಳಿಸಲಾಗುವುದು. ತ್ಯಾಜ್ಯ ನೀರಿನ ಮರುಬಳಕೆಗೂ ಪರಿಣಾಮಕಾರಿಯಾಗಿ ನಿರ್ವಹಣೆಯಾಗಲಿದೆ.

    ನಗರದೆಲ್ಲೆಡೆ ಟ್ರಿಣ್ ಟ್ರಿಣ್ ಸದ್ದು:


    ಟ್ರಿಣ್ ಟ್ರಿಣ್ ಸೈಕಲ್ ಮೊದಲ ಹಂತ ಯಶಸ್ವಿಯಾಗಿದ್ದು, 2ನೇ ಹಂತ ಚಾಲ್ತಿಯಲ್ಲಿ ಇದೆ. ಇದರಲ್ಲಿ 1 ಸಾವಿರ ಪೆಡಲ್ ಅಸಿಸ್ಟ್ ಸೈಕಲ್‌ಗಳು(ಜಿಪಿಎಸ್ ಅವಲಂಬಿತ), 100 ಡಾಕ್‌ಲೆಸ್ ಹಬ್ಸ್ ಈಗಾಗಲೇ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಡಾಕ್‌ಲೆಸ್ ಹಬ್ಸ್‌ಗಳನ್ನು ನಿರ್ಮಾಣಕ್ಕೆ ಯೋಜಿಸಲಾಗಿದೆ.

    ಪ್ಲಾಸ್ಟಿಕ್ ಮರುಬಳಕೆ ಘಟಕ ಸ್ಥಾಪನೆ


    ನಿತ್ಯ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು 50 ಟಿಪಿಡಿ ಸಾಮರ್ಥ್ಯದ ಪ್ಲಾಸ್ಟಿಕ್ ಮರುಬಳಕೆ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಸ್ತಕ ಸಾಲಿನಲ್ಲೇ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.


    ಡೆಬ್ರಿಸ್ ಸಂಸ್ಕರಣಾ ಘಟಕ


    ಸಾತಗಳ್ಳಿಯಲ್ಲಿ 9.5 ಎಕರೆ ಜಾಗದಲ್ಲಿ ಕೇಂದ್ರ ಸರ್ಕಾರದಿಂದ 1.94 ಕೋಟಿ ರೂ., ರಾಜ್ಯ ಸರ್ಕಾರದಿಂದ 1.29 ಕೋಟಿ ರೂ., ಪಾಲಿಕೆ ನಿಧಿಯಿಂದ 8.34 ಕೋಟಿ ರೂ. ಸೇರಿದಂತೆ 11.66 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಭಗ್ನಾವಶೇಷ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ.


    ಕರಗಲಿದೆ ಕಸಬೆಟ್ಟ:


    ವಿದ್ಯಾರಣ್ಯಪುರಂನ 22 ಎಕರೆ ಪ್ರದೇಶದಲ್ಲಿ ಶೇಖರಣೆಯಾಗಿರುವ 6 ಟನ್ ತ್ಯಾಜ್ಯವನ್ನು ಬಯೋಮೈನಿಂಗ್ ತಂತ್ರಜ್ಞಾನದ ಮೂಲಕ ಸಂಸ್ಕರಣೆ ಮಾಡಲು 5.90 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಗೆ ಅನುಮೋದನೆ ದೊರೆತಿದೆ. ಕಾಮಗಾರಿಯನ್ನು ವೇಗವಾಗಿ ನಿರ್ವಹಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

    ಉಳಿತಾಯ ಬಜೆಟ್:


    6.88 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ. 1067.06 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 1060.18 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.


    ಆಸ್ತಿ ತೆರಿಗೆಯಿಂದ 204.80 ಕೋಟಿ ರೂ. ನಿರೀಕ್ಷಿಸಲಾಗಿದೆ. 2023 ಡಿಸೆಂಬರ್ ಅಂತ್ಯಕ್ಕೆ 173.92 ಕೋಟಿ ರೂ. ಸಂಗ್ರಹವಾಗಿದೆ. ನೀರಿನ ತೆರಿಗೆ ಮತ್ತು ಒಳಚರಂಡಿ ನಿರ್ವಹಣಾ ಕರದಿಂದ 79.85 ಕೋಟಿ ರೂ., ಕಟ್ಟಡ ಪರವಾನಿಗೆ ಶುಲ್ಕ, ನೆಲಬಾಡಿಗೆ, ರಸ್ತೆ ಅಗೆತ ಶುಲ್ಕ ಇತರ ಮೂಲಗಳಿಂದ 13.29 ಕೋಟಿ ರೂ., ಉದ್ದಿಮೆ ಪರವಾನಿಗೆ ಶುಲ್ಕದಿಂದ 6.35 ಕೋಟಿ ರೂ., ಪಾಲಿಕೆಯ ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆಗಳ ಬಾಡಿಗೆ, ಗರುಡ ಮಾಲ್ ನೆಲಗುತ್ತಿಗೆ ಬಾಡಿಗೆಯಿಂದ 3.09 ಕೋಟಿ ರೂ., ಸರ್ಕಾರದಿಂದ 25 ಕೋಟಿ ರೂ.ನಿರೀಕ್ಷಿಸಲಾಗಿದೆ.


    2023-24ನೇ ಸಾಲಿನ ಪರಿಷ್ಕೃತ ಆಯವ್ಯಯ ಗಾತ್ರ 1066.96 ಕೋಟಿ ರೂ. ಆಗಿತ್ತು. 701.73 ಕೋಟಿ ರೂ. ಸಂಪನ್ಮೂಲ ನಿರೀಕ್ಷಿಸಲಾಗಿತ್ತು. 2023ರ ಡಿಸೆಂಬರ್ ಅಂತ್ಯಕ್ಕೆ 466.56 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ 489.41 ಕೋಟಿ ರೂ. ಖರ್ಚು ಮಾಡಲಾಗಿದೆ.

    • ಪಾಲಿಕೆಯ ವಲಯ -9 ಕಟ್ಟಡವನ್ನು ಗಾಯತ್ರಿಪುರಂ ಮುಖ್ಯ ರಸ್ತೆಯಲ್ಲಿ ನಿರ್ಮಾಣ
    • ಸಿಎಸ್‌ಎಸ್ ಅನುದಾನದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಛಾವಣಿ ಸೋಲಾರ್ ಪ್ಯಾನಲ್ ಅಳವಡಿಕೆ
    • ನಗರದಲ್ಲಿರುವ ವೃತ್ತಗಳನ್ನು ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ
    • ಪಾಲಿಕೆಯ ಎಲ್ಲ ದಾಖಲೆಗಳ ಗಣಕೀಕರಣ
    • ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಣೆ ಮಾಡಿ ಸಂಗ್ರಹಿಸಲು ಅಗತ್ಯವಿರುವ 336 ಹೆಚ್ಚುವರಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts