More

    ಆರ್ಥಿಕ ಕುಸಿತದ ನಡುವೆ ಉಳಿತಾಯ ಬಜೆಟ್

    7.36 ಕೋಟಿ ರೂ. ಉಳಿತಾಯ, 878.79 ಕೋಟಿ ರೂ. ಆದಾಯ ನಿರೀಕ್ಷೆ

    ಮೈಸೂರು : ಕರೊನಾ ಲಾಕ್‌ಡೌನ್ ನಡುವೆಯೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸೋಮವಾರ 2020-21ನೇ ಸಾಲಿನ ಆಯ-ವ್ಯಯ ಮಂಡಿಸಲಾಗಿದ್ದು, 7.36 ಕೋಟಿ ರೂ. ಉಳಿತಾಯ ನಿರೀಕ್ಷಿಸಲಾಗಿದೆ.
    ನಗರಪಾಲಿಕೆ ಸಭಾಂಗಣದಲ್ಲಿ ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಅವರು ಆಯ-ವ್ಯಯ ಮಂಡಿಸಿದರು.
    ಪ್ರಸ್ತಕ ಸಾಲಿಗೆ ಹಿಂದಿನ ವರ್ಷದ ಆರಂಭಿಕ ಶುಲ್ಕ 260 ಕೋಟಿ ರೂ. ಸೇರಿ 878.79 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ 871.43 ಕೋಟಿ ರೂ. ವ್ಯಯ ಮಾಡಲು ನಿರ್ಧರಿಸಲಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಆರ್ಥಿಕ ವರ್ಷದಲ್ಲಿ ಹೆಚ್ಚು ವ್ಯಯ ಮಾಡಲು ಪಾಲಿಕೆ ಮುಂದಾಗಿದೆ.
    ವಿಶ್ವವನ್ನೇ ಕಾಡಿದ ಕರೊನಾ ವೈರಸ್ ತಡೆಗಟ್ಟಲು ಪ್ರತಿ ವಾರ್ಡ್‌ಗೆ ಕರೊನಾ ವಿರುದ್ಧ ಹೋರಾಡಿದ ಸೇನಾನಿಗಳಿಗೆ ಪೌರ ಸನ್ಮಾನ ಮಾಡಲು ಇದೇ ಪ್ರಥಮ ಬಾರಿಗೆ ಒಟ್ಟು 6.5 ಕೋಟಿ ರೂ. ಕಾಯ್ದಿರಿಸಲಾಗಿದೆ.
    ಸಾರ್ವಜನಿಕ ಸ್ಥಳದಲ್ಲಿ ಉಚಿತ ವೈ-ಫೈ, ಆನ್‌ಲೈನ್ ತೆರಿಗೆ, ನೀರಿನ ಮೀಟರ್‌ನ ಪೋಟೋ ತೆಗೆದು ನಿಖರ ಬಿಲ್ ನೀಡುವುದು, ದೇವರಾಜ ಅರಸು ರಸ್ತೆ ಅಭಿವೃದ್ಧಿ, ಸೂಯೇಜ್ ಫಾರ್ಮ್ ಅನ್ನು ಉದ್ಯಾನವನ್ನಾಗಿ ಅಭಿವೃದ್ಧಿ ಪಡಿಸುವುದು, ವಾಣಿ ವಿಲಾಸದಲ್ಲಿ ವಾಟರ್ ಪಾರ್ಕ್ ನಿರ್ಮಾಣದಂತಹ ನೂತನ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಉಳಿದಂತೆ ಬಹಳ ವರ್ಷದಿಂದ ಚಾಲ್ತಿಗೆ ಬರುತ್ತಿದ್ದ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಬಾರಿಯೂ ಪ್ರಸ್ತಾಪಿಸಲಾಗಿದೆ.
    ಸಂಪನ್ಮೂಲ ನಿರೀಕ್ಷೆ: ಈ ವರ್ಷ ಆಸ್ತಿ ತೆರಿಗೆ ಏರಿಕೆ ಹಾಗೂ ನೂತನವಾಗಿ ಜಾರಿಗೆ ತಂದಿರುವ ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಯಿಂದ 157 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ನೀರು ಸರಬರಾಜು, ಒಳಚರಂಡಿ ನಿರ್ವಹಣಾ ಶುಲ್ಕದಿಂದ 86 ಕೋಟಿ ರೂ., ಕಟ್ಟಡ ಪರವಾನಗಿ, ನೆಲಬಾಡಿಗೆ, ರಸ್ತೆ, ಅಗೆತ ಶುಲ್ಕ, ಪರಿಶೀಲನಾ ಶುಲ್ಕ, ನೀರಿನ ಸಂಪರ್ಕ, ಕಟ್ಟಡ ಪೂರ್ಣಗೊಂಡ ವರದಿ, ಒಳಚರಂಡಿ ಶುಲ್ಕ ಸೇರಿದಂತೆ ನಗರ ಯೋಜನೆ ವಿಭಾಗದಿಂದ 9.92 ಕೋಟಿ. ರೂ., ಉದ್ದಿಮೆ ಪರವಾನಗಿಯಿಂದ 8 ಕೋಟಿ ರೂ., ಪಾಲಿಕೆ ವಾಣಿಜ್ಯ ಸಂಕೀರ್ಣ, ಮಾರುಕಟ್ಟೆ, ಗರುಡ ಮಾಲ್ ಬಾಡಿಗೆಯಿಂದ 2.93 ಕೋಟಿ ರೂ. ನಿರೀಕ್ಷಿಸಲಾಗಿದೆ.
    ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿಯಿಂದ 19.39 ಕೋಟಿ ರೂ., ನೀರು, ವಿದ್ಯುತ್ ಬಿಲ್‌ಗಾಗಿ ರಾಜ್ಯ ಸರ್ಕಾರ ನೀಡುವ 75.23 ಕೋಟಿ ರೂ., ವೇತನಕ್ಕಾಗಿ ಸರ್ಕಾರದಿಂದ 68.52 ಕೋಟಿ ರೂ. ನಿರೀಕ್ಷೆಯಲ್ಲಿದೆ. 15ನೇ ಹಣಕಾಸು ಆಯೋಗದಿಂದ 69.39 ಕೋಟಿ ರೂ., ನಗರದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಿಂದ 4.50 ಕೋಟಿ ರೂ., ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 16 ಕೋಟಿ ರೂ., ಮೂಲಸೌಲಭ್ಯ ಅಭಿವೃದ್ಧಿ ವಿಶೇಷ ಅನುದಾನದಡಿ 7.50 ಕೋಟಿ ರೂ., ಪಾರಂಪರಿಕ ಕಟ್ಟಡ, ರಸ್ತೆಗಳ ಅನುದಾನದಡಿ 5 ಕೋಟಿ ರೂ. ನಿರೀಕ್ಷಿಸಲಾಗಿದೆ.
    ಮುಖ್ಯಮಂತ್ರಿಗಳ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 25 ಕೋಟಿ ರೂ., ಚಾಮರಾಜ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ಎಸ್‌ಎಫ್‌ಸಿ ವಿಶೇಷ ಅನುದಾನದಡಿ 15 ಕೋಟಿ ರೂ., ನೀರು ನಿರ್ವಹಣೆಗಾಗಿ 1 ಕೋಟಿ, ದಸರಾ ವಿಶೇಷ ಅನುದಾನ 5 ಕೋಟಿ ರೂ., ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯ 2 ಕೋಟಿ ರೂ., ನಲ್ಮ್ ಯೋಜನೆಯಡಿ 50 ಲಕ್ಷ ರೂ. ನಿರೀಕ್ಷೆಯಲ್ಲಿ ಪಾಲಿಕೆ ಇರುವುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts