More

    ಧರ್ಮದರ್ಶನ: ವಸ್ತುಸಂಗ್ರಹಾಲಯ ಪ್ರಾಚೀನತೆ-ಭವಿಷ್ಯದ ಕೊಂಡಿ

    ಧರ್ಮದರ್ಶನ: ವಸ್ತುಸಂಗ್ರಹಾಲಯ ಪ್ರಾಚೀನತೆ-ಭವಿಷ್ಯದ ಕೊಂಡಿ

    ಶಾಲಾ ರಜೆಯ ಸಮಯದಲ್ಲಿ ಮತ್ತು ಇಂದಿನ ಕರೊನಾ ರಜೆಯಲ್ಲಿ ಪೇಟೆಯಲ್ಲಿರುವ ಮಕ್ಕಳು ಹಳ್ಳಿಗೆ ಬಂದಾಗ ಗ್ರಾಮೀಣ ಜೀವನದ ಬಗ್ಗೆ ಮತ್ತು ಗ್ರಾಮೀಣರು ಬಳಸುತ್ತಿದ್ದ ವಸ್ತುಗಳ ಬಗ್ಗೆ ಪರಿಚಯದ ಕೊರತೆ ಕಾಣುತ್ತದೆ. ನಗರದ ಮಕ್ಕಳಿಗೆ ಕಥೆ ಹೇಳುತ್ತಾ ‘ಬಾವಿಗೆ ಹುಲಿಯೊಂದು ಬಿದ್ದಿತು’ ಎಂದರೆ ಬಾವಿ ಎಂದರೇನು ಎಂದು ಕೇಳಬೇಕೆ? ಬಡಗಿ, ಕಮ್ಮಾರ, ಅಕ್ಕಸಾಲಿಗ, ಗಾಣದಿಂದ ಎಣ್ಣೆ ತೆಗೆಯುವುದು, ಭತ್ತದಿಂದ ಅಕ್ಕಿ, ಅವಲಕ್ಕಿ, ಅರಳು, ತಯಾರಿ ಎಂದರೆ ಈ ಮಕ್ಕಳು ಬೆಕ್ಕಸ ಬೆರಗಾಗುತ್ತಾರೆ.

    ಇಂದು ವಸ್ತುಗಳನ್ನು ತಯಾರಿಸಲು ಯಂತ್ರಗಳಿವೆ. ಒಂದೇ ರೀತಿಯ ಲಕ್ಷ ವಾಹನಗಳನ್ನು, ಕೋಟಿ ಕೋಟಿ ಅಲ್ಯುಮಿನಿಯಂ, ಪ್ಲಾಸ್ಟಿಕ್ ವಸ್ತುಗಳನ್ನು ನಿರ್ವಿುಸಬಹುದು. ಹಿಂದೆ ಪ್ರತಿಯೊಂದು ವಸ್ತುವನ್ನೂ ಪ್ರತ್ಯೇಕವಾಗಿ ಮಾಡಬೇಕಾದುದರಿಂದ ಎಲ್ಲಾ ತಯಾರಿಯಲ್ಲಿಯೂ ವೈವಿಧ್ಯ ವಿನ್ಯಾಸ ಮತ್ತು ಸೌಂದರ್ಯವಿತ್ತು. ಪ್ರತಿಯೊಂದು ದೇಶದಲ್ಲಿಯೂ ಅವರ ಪ್ರಾಗೈತಿಹಾಸಿಕ ಕಾಲದ ಮಾಹಿತಿ, ಸಾಧನೆ ಮತ್ತು ಘಟನೆಗಳನ್ನು ಆರೋಹಣ ಕ್ರಮವಾಗಿ ಮ್ಯೂಸಿಯಂನಲ್ಲಿ ಪ್ರದರ್ಶಿಸಿರುತ್ತಾರೆ. ನಾವು ಈಗೇನು ಪ್ರಗತಿ, ವೈಜ್ಞಾನಿಕ ಮುನ್ನಡೆ ಸಾಧಿಸಿದ್ದೇವೆಯೋ ಅದು ಸಾವಿರಾರು ವರ್ಷಗಳ ತಲೆಮಾರಿನವರು ಸಾಧಿಸಿದ ಅನೇಕ ಪ್ರಗತಿಯ ಮುಂದುವರಿಕೆಯಾಗಿದೆ.

    ನಾನು ಮತ್ತು ಕುಟುಂಬಿಕರು ವಿಶ್ವದ ಯಾವ ದೇಶಕ್ಕೆ ಹೋದರೂ ಕುತೂಹಲ ಇರುವಂತಹದ್ದು ಅಲ್ಲಿಯ ಮ್ಯೂಸಿಯಂಗಳು ಮತ್ತು ಆ ದೇಶದ ಪ್ರಗತಿಯನ್ನು ಅವಲೋಕಿಸುವುದು. ಎರಡು ವಿಶ್ವ ಮಹಾಯುದ್ಧಗಳು ವೇಗವಾದ ಮತ್ತು ವೈಜ್ಞಾನಿಕವಾದ ಬೆಳವಣಿಗೆಗೆ ದೊಡ್ಡ ಕಾಣಿಕೆ ನೀಡಿವೆೆ. ಉದಾಹರಣೆಗೆ ಹೇಳುವುದಾದರೆ, ಯುದ್ಧದ ಪರಿಣಾಮವಾಗಿ ಅತಿ ಗಟ್ಟಿಯಾದ ಮತ್ತು ಅತಿ ಹಗುರವಾದ ಲೋಹವನ್ನು ಸಂಶೋಧಿಸಿದರು. ಯಾಕೆಂದರೆ ಈ ಲೋಹದಿಂದಲೇ ವಿಮಾನ, ರಾಕೆಟ್ ಮೊದಲಾದವು ಗಳನ್ನು ತಯಾರುಮಾಡಿದರು. ನಾಸಾದ ಮುಖಾಂತರ ಚಂದ್ರಯಾನ ಮೊದಲಾದವನ್ನು ಕೈಗೊಂಡ ಅಮೆರಿಕನ್ನರು ಇಂಥವನ್ನು ತಮ್ಮ ಮ್ಯೂಸಿಯಂಗಳಲ್ಲಿ ಪ್ರದರ್ಶಿಸಿದ್ದಾರೆ.

    ಅದ್ಭುತವಾದ ಮ್ಯೂಸಿಯಂ ನೋಡಿದ್ದು ಯುರೋಪಿನ ದೇಶಗಳಲ್ಲಿ. ಆ ದೇಶಗಳಿಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಯುರೋಪಿಯನ್ನರೂ ಒಂದು ಬಾರಿ ಇಡೀ ವಿಶ್ವವನ್ನೇ ಆಕ್ರಮಿಸಿ, ಆಡಳಿತ ಮಾಡಿರುವುದರಿಂದ ಬೇರೆ ಬೇರೆ ದೇಶದ ವಸ್ತುಗಳನ್ನು ತಂದು ತಮ್ಮ ವಸ್ತುಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಟಿಪ್ಪು ಸುಲ್ತಾನನ ಖಡ್ಗ, ಬೇರೆ ಬೇರೆ ರಾಜ್ಯಗಳಿಂದ ಸಂಗ್ರಹಿಸಿದ ವಸ್ತುಗಳು ಅಲ್ಲಿ ಕಾಣಿಸುತ್ತವೆ. ಯಾರ್ಯಾರು ಭಾರತ ದೇಶದ ಮೇಲೆ ಆಕ್ರಮಣ ಮಾಡಿದ್ದರೋ ಅವರೆಲ್ಲರೂ ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಭಾರತದ ಕೊಹಿನೂರು ವಜ್ರ ಇಂಗ್ಲೆಂಡಿನ ರಾಣಿಯ ಕಿರೀಟದಲ್ಲಿ ಜೋಡಿಸಲ್ಪಟ್ಟಿದೆ. ಬ್ರಿಟಿಷ್ ಮ್ಯೂಸಿಯಂಗಳಲ್ಲಿ ಬ್ರಿಟಿಷ್ ಜನರ ವಸ್ತುಗಳ ಜೊತೆಗೆ ಇಡೀ ವಿಶ್ವದಿಂದ ಸಂಗ್ರಹಿಸಿದ ವಸ್ತುಗಳನ್ನು ಕೂಡ ಪ್ರದರ್ಶಿಸಿದ್ದಾರೆ. ನಮ್ಮ ಜನತೆಗೆ ಅಥವಾ ಭಾರತೀಯ ರಾಜರಿಗೆ ಅಥವಾ ಶ್ರೀಮಂತರಿಗೆ ನಮ್ಮ ಪ್ರಾಚೀನತೆ ಬಗ್ಗೆ ಗೌರವ ಇದ್ದರೂ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಪ್ರಜ್ಞೆ ಕಡಿಮೆಯಿತ್ತು. ನಮ್ಮ ದೇಶದವರು ಆಭರಣ ಮುಂತಾದವುಗಳನ್ನು ವ್ಯಕ್ತಿಗತವಾದ ಸಂಗ್ರಹಕ್ಕಾಗಿ ಇಟ್ಟುಕೊಳ್ಳುತ್ತಿದ್ದರು. ಇಂತಹ ವಸ್ತುವಿನ ಮೌಲ್ಯವನ್ನು ಬೇಗ ಕಂಡುಕೊಂಡವರು ಪಾಶ್ಚಾತ್ಯರು.

    ನಾವು ಒಮ್ಮೆ ಪ್ರವಾಸಕ್ಕಾಗಿ ಈಜಿಪ್ಟ್​ಗೆ ಹೋಗಿದ್ದೆವು. ಈಜಿಪ್ಟ್ ಬಡ ರಾಷ್ಟ್ರ. ಅದರ ಸುತ್ತಮುತ್ತ ಇರುವಂತಹ ಎಲ್ಲ ರಾಷ್ಟ್ರಗಳು ಕೂಡ ಬಡ ರಾಷ್ಟ್ರಗಳೇ. ಹಾಗಾಗಿ ಯುರೋಪಿಯನ್ನರು ಮತ್ತು ಅಮೆರಿಕನ್ನರು ಅಲ್ಲಿರುವ ಸಂಪತ್ತು ಮತ್ತು ವಸ್ತುಗಳೆಲ್ಲವನ್ನೂ ಲೂಟಿ ಮಾಡಿದ್ದಾರೆ ಎಂದು ಹೇಳಬಹುದು.

    ಈಜಿಪ್ಟ್​ನಲ್ಲಿರುವ ಪಿರಮಿಡ್​ಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಂದು ಸೆಂಟಿಮೀಟರ್ ಕೂಡ ವ್ಯತ್ಯಾಸ ಬರದ ಹಾಗೆ ಅವನ್ನು ರಚಿಸಿದ್ದಾರೆ. ಅಂತಹ ಪಿರಮಿಡ್​ಗಳ ಒಳಗಡೆ ರಾಜ, ರಾಣಿ ಅಥವಾ ಬಹಳ ಶ್ರೀಮಂತರ ಶವಗಳು ಇರುತ್ತಿದ್ದವು. ಮುಂದೆಂದೋ ಅವರ ಆತ್ಮ ಇದೇ ದೇಹದೊಳಗೆ ಪ್ರವೇಶಿಸಿ ಅವರು ಬದುಕುತ್ತಾರೆ ಎಂಬ ವಿಶ್ವಾಸದಿಂದ ಹೀಗೆ ಮಾಡುತ್ತಿದ್ದರು. ಹಾಗಾಗಿ ನಾಲ್ಕು ಜಾರ್​ಗಳನ್ನು ಮಾಡಿದರು. ಜಾರ್ ಅಂದರೆ ಪಾತ್ರೆ ಎಂದರ್ಥ. ಈ ಪಾತ್ರಗಳಲ್ಲಿ ಹೃದಯ, ಲಿವರ್, ಕಿಡ್ನಿ ಮತ್ತು ದೇಹದ ಬೇರೆ ಬೇರೆ ಭಾಗಗಳನ್ನು ಇಟ್ಟು ರಕ್ಷಿಸಬೇಕು ಎಂಬುದು ಅವರ ಕಲ್ಪನೆ. ಅದರ ಜೊತೆಗೆ ರಾಜ, ರಾಣಿ ಮತ್ತು ಶ್ರೀಮಂತರು ವೈಯಕ್ತಿಕವಾಗಿ ಬಳಸುತ್ತಿದ್ದ ಚಿನ್ನಾಭರಣ ಇತ್ಯಾದಿ ಅಮೂಲ್ಯವಾದ ವಸ್ತುಗಳನ್ನು ಪಿರಮಿಡ್ಡಿನ ಕೋಣೆಯಲ್ಲಿ ಇಡುತ್ತಿದ್ದರು. ಪಿರಮಿಡ್ ಒಳಗಡೆ ಪ್ರವೇಶ ಮಾಡುವುದು ಅಸಾಧ್ಯವಾದರೂ ವಿದೇಶಿಯರು ಅದರ ಒಳಗಡೆ ಹೋಗಿ ಅಲ್ಲಿರುವ ಸಂಪತ್ತುಗಳನ್ನೆಲ್ಲ ತೆಗೆದು ಸಾಗಿಸಿದ್ದಾರೆ. ವಿಶ್ವದ ಪ್ರತಿಷ್ಠಿತ ಮ್ಯೂಸಿಯಂಗಳಲ್ಲಿ ಈಜಿಪ್ಟಿನಿಂದ ಸಂಗ್ರಹಿಸಿದ ವಸ್ತುಗಳು ಮತ್ತು ಮಮ್ಮಿಗಳಿವೆ.

    ಚೀನಾವು ಭಾರತದಷ್ಟೇ ಪ್ರಾಚೀನ ಇತಿಹಾಸದ ಸಂಸ್ಕೃತಿ ಹೊಂದಿದೆ. ಆ ದೇಶದ ವಸ್ತುಸಂಗ್ರಹಾಲಯಗಳಲ್ಲಿ ಸಾವಿರಾರು ವರ್ಷಗಳಲ್ಲಿ ಅವರು ಸಾಧಿಸಿದ ಕಲಾನೈಪುಣ್ಯಗಳು ಅನಾವರಣಗೊಂಡಿವೆ. ಚೀನಾದವರು ಮೊದಲನೆಯದಾಗಿ ರೇಷ್ಮೆ (ಸಿಲ್ಕ್)ಯ ಬಳಕೆ ಮಾಡಿದರು. ಆಮೇಲೆ ಆನೆಯ ದಂತ ಮತ್ತು ಹಿಂದೆ ಇದ್ದ ಕೆಲವು ಅಮೂಲ್ಯ ಪ್ರಾಣಿಗಳ ಎಲುಬು ಮತ್ತು ಚರ್ಮಗಳನ್ನು ಸಂಗ್ರಹಿಸಿದ್ದಾರೆ. ಅಲ್ಲಿನ ಕಲಾಕಾರರ ನೈಪುಣ್ಯ ಅಚ್ಚರಿ ಹುಟ್ಟಿಸುತ್ತದೆ.

    ಬದುಕು-ಸಾವು ಮತ್ತು ಸಾವಿನ ನಂತರದ ಜೀವನ ವಿಶ್ವದ ಎಲ್ಲ ದೇಶಗಳ ಜನರ ಮೇಲೆ ಪ್ರಭಾವ ಬೀರಿದೆ. ಬದುಕಿಗೆ ಸಂಬಂಧಿಸಿದ ವಿಷಯಗಳು, ಸುಖ ಶಾಂತಿಗಾಗಿ ಏನು ಮಾಡಬೇಕು ಎಂಬುದನ್ನು ಹಾಗೂ ಭೋಗದ ವಸ್ತುಗಳ ಬಳಕೆ ಬಗ್ಗೆ ವಸ್ತುಸಂಗ್ರಹಾಲಯದಲ್ಲಿ ತೋರ್ಪಡಿಸಿದ್ದಾರೆ. ಸತ್ತ ನಂತರ ಏನಾಗುತ್ತದೆ, ಆತ್ಮಕ್ಕೆ ಸದ್ಗತಿ ಎಂಬುದಿದೆಯೇ? ಎಂಬ ಜಿಜ್ಞಾಸೆ ಇದ್ದಂತೆ ಅವರು ಸತ್ತನಂತರ ಈ ಪ್ರೇತಾತ್ಮಗಳಿಗೆ ಸರಿಯಾದ ದಾರಿಯನ್ನು ತೋರಿಸುವುದಕ್ಕಾಗಿ ಅನೇಕ ಅಪರ ಕ್ರಿಯೆಗಳನ್ನು ಮಾಡುತ್ತಾರೆ. ಅದಕ್ಕೆ ಬೇಕಾದಂತಹ ಮಣ್ಣಿನ ಮಡಿಕೆ, ಮಣ್ಣಿನಿಂದಲೇ ಶವಸಂಸ್ಕಾರದ ಪಾತ್ರೆಗಳನ್ನು ಸಿದ್ಧಪಡಿಸುತ್ತಾರೆ. ಅಂಥವೆಲ್ಲ ಮ್ಯೂಸಿಯಂಗಳಲ್ಲಿ ಪ್ರದರ್ಶನ ಗೊಂಡಿವೆ. ಹಾಗೇ, ಆಯಾ ಪ್ರದೇಶದ ವೈವಿಧ್ಯಮಯ ವೇಷಭೂಷಣಗಳೂ ಮ್ಯೂಸಿಯಂಗಳಲ್ಲಿರುತ್ತವೆ. ಜಪಾನ್ ದೇಶದ ವಸ್ತುಸಂಗ್ರಹಾಲಯಗಳು ಬಹಳ ಪ್ರಸಿದ್ಧ. ಶಿಂಟೋಇಸಂ ಅವರ ಮೂಲ ಧರ್ಮ. ಬೌದ್ಧ ಧರ್ಮದ ಪ್ರವೇಶವಾದ ನಂತರ ಅವರ ಧರ್ಮ, ಆಚರಣೆ, ಜೀವನಶೈಲಿ ಭಿನ್ನವಾಯಿತು. ಹೀಗೆ ಶಿಂಟೋಇಸಂ, ಬುದ್ಧಿಸಂ ಮತ್ತು ಕ್ರಿಶ್ಚಿಯಾನಿಟಿ ಈ ಮೂರರ ಪ್ರಭಾವವೂ ಇವರ ವಸ್ತುಸಂಗ್ರಹಾಲಯದಲ್ಲಿ ಕಾಣಸಿಗುತ್ತವೆ.

    ಎರಡನೇ ಮಹಾಯುದ್ಧದಲ್ಲಿ ರಷ್ಯಾದ ಅನೇಕ ಅರಮನೆಗಳನ್ನು ಮತ್ತು ಸುಂದರವಾದ ಕಟ್ಟಡಗಳನ್ನು, ಚರ್ಚುಗಳನ್ನು ನಾಶಮಾಡಿದ್ದಾರೆ. ರಷ್ಯಾದವರು ಹೀಗೆ ಕಳಕೊಂಡ ಕಟ್ಟಡಗಳನ್ನು, ಕುಸುರಿ ಕೆಲಸಗಳನ್ನು ಪುನರ್ನಿರ್ವಣ ಮಾಡಿ ಸುಂದರವಾಗಿ ಜೋಡಿಸಿಟ್ಟಿದ್ದಾರೆ. ಹೀಗಾಗಿ ಅಲ್ಲಿನ ಮ್ಯೂಸಿಯಂಗಳು ಗುಣಾತ್ಮಕ ದೃಷ್ಟಿಯಿಂದ ಶ್ರೇಷ್ಠವಾದದ್ದು. ಅಲ್ಲಿನ ಸೇಂಟ್ ಪೀಟರ್ಸ್​ಬರ್ಗ್, ಮಾಸ್ಕೊದಲ್ಲಿರುವ ಮ್ಯೂಸಿಯಂನಲ್ಲಿ, ಅವರೇ ಹೇಳುವಂತೆ ಒಂದೊಂದು ಅಮೂಲ್ಯವಾದ ವಸ್ತುವಿನ ಮುಂದೆ ಒಂದೊಂದು ಸೆಕೆಂಡು ಕಾಲ ನಿಂತರೂ ಸುಮಾರು 10 ವರ್ಷ ನೋಡಬೇಕಾದಷ್ಟು ವಸ್ತುಗಳಿದ್ದಾವಂತೆ. ನಾವು ಸಾಮಾನ್ಯವಾಗಿ ವಸ್ತುಸಂಗ್ರಹಾಲಯವನ್ನು ಒಂದೇ ದಿನದಲ್ಲಿ ವೇಗವಾಗಿ ನೋಡಿಬಿಡುತ್ತೇವೆ. ಇದರಿಂದ ಕುತೂಹಲಿಗಳ ಕುತೂಹಲ ತಣಿಯುವುದಿಲ್ಲ.

    ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ಅಂದರೆ ಮಲೇಶಿಯಾ, ಇಂಡೋನೇಷಿಯಾ, ಬರ್ವ ಮುಂತಾದ ಕಡೆಗಳಲ್ಲಿ ವಸ್ತು ಸಂಗ್ರಹಾಲಯದಲ್ಲಿ ಬೇರೆಡೆಗೆ ನೋಡಲು ಸಿಗದಂತಹ ಅನೇಕ ವಸ್ತುಗಳ ಸಂಗ್ರಹವಿದೆ. ದಕ್ಷಿಣ ಕೊರಿಯಾದಲ್ಲಿ ಅದ್ಭುತ ವಸ್ತುಪ್ರದರ್ಶನಾಲಯವಿದ್ದು, ಹಳೆಯ ಕಾಲದ ಕೆಲವು ಪ್ರಾತ್ಯಕ್ಷಿಕೆಗಳನ್ನು ತೋರಿಸಿದ್ದಾರೆ. ಅಲ್ಲಿ ನೋಡಿದ ವಸ್ತುಸಂಗ್ರಹಾಲಯ ಮತ್ತು ಪ್ರಾತ್ಯಕ್ಷಿಕೆಯ ಸ್ಪೂರ್ತಿಯಲ್ಲಿಯೇ 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳು ಗ್ರಾಮದ ನಿರ್ಮಾಣ ಮಾಡಿದ್ದೆವು. ಅಂದರೆ ಪ್ರತಿಯೊಂದು ವೃತ್ತಿಧರ್ಮದ ಮೇಲೆ ಬರುವಂತಹ ವ್ಯಕ್ತಿಗಳ ಮನೆಗಳನ್ನು, ಅವರ ದೈನಂದಿನ ಚಟುವಟಿಕೆಗಳನ್ನು ಹಾಗೇ ತೋರಿಸಿ, ಸುಮಾರು ಇನ್ನೂರು ಮುನ್ನೂರು ವರ್ಷಕ್ಕೆ ಹಿಂದೆ ಗ್ರಾಮ ಹೇಗಿತ್ತು, ಅವರ ವೇಷಭೂಷಣ, ಆಹಾರದ ಕ್ರಮ ಹೇಗಿತ್ತು, ಅವರ ಉಪಕರಣಗಳು ಎಂಬೀ ಎಲ್ಲ ಅಂಶಗಳನ್ನು ಪ್ರದರ್ಶಿಸಲಾಗಿತ್ತು. ನಮಗೆ ಬಹಳ ಮೆಚ್ಚುಗೆಯಾದ ಇನ್ನೊಂದು ವಸ್ತುಸಂಗ್ರಹಾಲಯ ಅಂದರೆ ಟರ್ಕಿ ದೇಶದ ಇಸ್ತಾನ್​ಬುಲ್​ನಲ್ಲಿಯದು. ಇಲ್ಲಿ ಖಾಸಗಿಯಾಗಿಯೂ ವಸ್ತುಪ್ರದರ್ಶನವಿದೆ. ಅಲ್ಲಿ ಸಾಮಾನ್ಯವಾಗಿ ಕೈಗಾರಿಕಾ ಕ್ರಾಂತಿ ಆದನಂತರ ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ದೇಶ ಹೇಗೆ ಪ್ರಗತಿ ಸಾಧಿಸಿತು; ಹೇಗೆ ಹೊಸ ಹೊಸ ಉಪಕರಣಗಳ ಸೃಷ್ಟಿಯಾಯಿತು ಎಂಬುದನ್ನು ತೋರಿಸಿದ್ದಾರೆ. ಕೃಷಿ ವಸ್ತುಗಳು, ದಿನಬಳಕೆ ವಸ್ತುಗಳು, ಆಧುನಿಕ ಉಪಕರಣಗಳು, ಸಲಕರಣೆಗಳನ್ನು ಮತ್ತು ರೈಲು, ವಿಮಾನಗಳು, ಜಲಾಂತರ್ಗಾಮಿ (ಸಬ್​ವುರಿನ್) ಮುಂತಾದವನ್ನು ಕೂಡ ಪ್ರದರ್ಶನಕ್ಕೆ ಇರಿಸಿದ್ದಾರೆ. ವಿಶೇಷವಾಗಿ ನನಗೆ ಕುತೂಹಲವನ್ನು ಉಂಟುಮಾಡುವ ಕಾರುಗಳ ಪ್ರದರ್ಶನವಿತ್ತು.

    ನಮಗೆ ಜಲಾಂತರ್ಗಾಮಿಯ ಒಳಗಡೆ ಹೋಗಲು ಅವಕಾಶ ಸಿಕ್ಕಿತ್ತು. ಜಲಾಂತರ್ಗಾಮಿ ಎಂದರೆ ಸಮುದ್ರದಲ್ಲಿ 800 ಅಡಿ ಆಳದವರೆಗೆ ಹೋಗಿ ಅಲ್ಲಿಯೇ ಇರಬಹುದಾದ ಯುದ್ಧಸಾಧನ. ಒಮ್ಮೆ ನೀರಿನ ಒಳಗಡೆ ಪ್ರವೇಶಿಸಿದರೆ 40 ದಿನಗಳವರೆಗೂ ಅಲ್ಲಿಯೇ ವಾಸ ಮಾಡಲು ವ್ಯವಸ್ಥೆ ಇತ್ತು. ಇಂಗ್ಲೆಂಡ್​ನ ವಸ್ತುಸಂಗ್ರಹಾಲಯದಲ್ಲಿ ವೈಮಾನಿಕ ಪ್ರದರ್ಶನ, ವೈಮಾನಿಕ ಸಂಶೋಧನೆಯ ಪ್ರಗತಿಗಳ ಪ್ರಾತ್ಯಕ್ಷಿಕೆಗಳನ್ನು ನೋಡಿದೆವು. ಅಮೆರಿಕಕ್ಕೆ ಕೇವಲ ಮುನ್ನೂರು ಮುನ್ನೂರೈವತ್ತು ವರ್ಷಗಳ ಇತಿಹಾಸವಿರುವುದು. ಹಾಗಾಗಿ ಅಲ್ಲಿನ ಮ್ಯೂಸಿಯಂಗಳಲ್ಲಿ ತಲತಲಾಂತರಗಳಿಂದ ಬೆಳೆದುಕೊಂಡು ಬಂದ ಘಟನೆಯನ್ನು ವಿವರಿಸುವ ವಸ್ತುಗಳು ಇರುವುದಿಲ್ಲ. ಮೂಲ ಅಮೆರಿಕನ್ನರು ಎಂದು ಕೆಲವೇ ಜನಾಂಗಗಳಿವೆ. ಯುರೋಪ್​ನ ದೇಶಗಳಿಂದ ಬಂದು ಅಮೆರಿಕದಲ್ಲಿ ನೆಲೆಸಿದವರು ತಮ್ಮ ತಮ್ಮ ದೇಶಗಳಿಂದ ತಂದಿರುವ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ. ಅಮೆರಿಕೆಯ ವಿಜ್ಞಾನ ಮ್ಯೂಸಿಯಂಗಳಲ್ಲಿ ವಿಶೇಷವಾಗಿ ರಾಕೆಟ್​ಗಳು, ಉಪಗ್ರಹಗಳು, ವಿಮಾನಗಳು ಇವೆಲ್ಲವುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಒಂದು ದೇಶ ಹಿಂದಿನ ಕಾಲದಲ್ಲಿ ಹೇಗಿತ್ತು ಎಂಬುದು ನೇರವಾಗಿ ನಮಗೆ ತಿಳಿದುಕೊಳ್ಳಲು ಸಾಧ್ಯವಾಗದೇ ಇದ್ದರೂ ವಸ್ತುಸಂಗ್ರಹಾಲಯವನ್ನು ಕಂಡಾಗ ಅವರ ಪ್ರಾಗೈತಿಹಾಸಿಕ ಸಾಧನೆಗಳು ಕಂಡುಬರುತ್ತವೆ. ದೇಶ ಹೇಗೆ ಪ್ರಗತಿ ಸಾಧಿಸಿತು ಎಂಬುದನ್ನು ನಾವು ವಸ್ತುಸಂಗ್ರಹಾಲಯದಲ್ಲಿ ಉಳಿಸಿಕೊಳ್ಳಬಹುದು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts