More

    ಸತ್ತಿದ್ದಾಳೆ ಎಂದುಕೊಂಡಾಕೆ ಬದುಕಿದ್ದಳು; ಮಾಡದ ಹತ್ಯೆಗಾಗಿ 8 ತಿಂಗಳಿಂದ ಜೈಲಿನಲ್ಲಿದ್ದಾರೆ ಮೂವರು

    ಲಖನೌ: ತಾನು ಪ್ರೇಮಿಸಿದ ಯುವಕನೊಂದಿಗೆ ಓಡಿ ಹೋದಳೆಂದು ಪುತ್ರಿಯನ್ನು ಅಗೌರವ ಹತ್ಯೆ ಮಾಡಿದ್ದಾರೆ ಎಂಬ ಕಲ್ಪಿತ ಆರೋಪದಡಿ ಮಹಿಳೆಯ ಅಪ್ಪ ಸೇರಿ ಮೂವರು ಅಂದಾಜು 8 ತಿಂಗಳಿಂದ ಜೈಲಿನಲ್ಲಿದ್ದಾರೆ. ಆದರೆ, ಸತ್ತಿದ್ದಾಳೆ ಎಂದು ಭಾವಿಸಲಾದ ಮಹಿಳೆ ಮಾತ್ರ ತನ್ನ ಪ್ರೇಮಿಯೊಂದಿಗೆ ಸಪ್ತಪದಿ ತುಳಿದು, ಊರಿನಿಂದ 5 ಕಿ.ಮೀ. ದೂರದಲ್ಲಿ ಆರಾಮವಾಗಿ ಸಂಸಾರ ನಡೆಸುತ್ತಿದ್ದಾಳೆ. ಆಕೆ ಈಗ ಒಂದು ವರ್ಷದ ಮಗುವಿನ ತಾಯಿಯಾಗಿದ್ದಾಳೆ. ಅಲ್ಲದೆ, ಈಗ ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ.

    ಕಮಲೇಶ್​ ಅಗೌರವ ಹತ್ಯೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗುತ್ತಿದ್ದ ಮಹಿಳೆಯಾಗಿದ್ದಾಳೆ. ಈಕೆ ತನ್ನ ಗ್ರಾಮ ಮಲಕಾಪುರದ ಒಬ್ಬ ಯುವಕನನ್ನು ಪ್ರೇಮಿಸುತ್ತಿದ್ದಳು. ಈ ವಿಷಯ ತಿಳಿದ ಆಕೆಯ ಮನೆಯವರು ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಪಟ್ಟುಬಿಡದ ಕಮಲೇಶ್​ ತನ್ನ ಪ್ರೇಮಿಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಹಾಗೂ ತನ್ನ ಗ್ರಾಮದಿಂದ 5 ಕಿ.ಮೀ. ದೂರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ತನ್ನ ಪ್ರೇಮಿಯ ಜತೆ ಸಂಸಾರ ನಡೆಸುತ್ತಿದ್ದಳು.

    ಈ ದಂಪತಿಗೆ ಈಗ 1 ವರ್ಷದ ಮಗುವಿದೆ. ಜತೆಗೆ ಆಕೆ ಎರಡನೇ ಮಗು 5 ತಿಂಗಳಿಂದ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದೆ. 2019ರ ಫೆಬ್ರವರಿ 6ರಂದು ಈಕೆ ಕಾಣೆಯಾದಾಗ ಈಕೆಯ ತಂದೆ ಸುರೇಶ್​ ಕುಮಾರ್​ ಆಕೆಯನ್ನು ಅಪಹರಿಸಿರುವುದಾಗಿ ಆರೋಪಿಸಿ ಐವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಹೋರಂ ಸಿಂಗ್​ ಮತ್ತು ಹರ್ಪೂಲ್​ ಸಿಂಗ್​ ಎಂಬ ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.

    ಆದರೆ, ಎಷ್ಟೇ ಹುಡುಕಿದರೂ ಕಮಲೇಶ್​ ಪತ್ತೆಯಾಗಿರಲಿಲ್ಲ. ಇವರಿಬ್ಬರೂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದರು. ಆನಂತರದಲ್ಲಿ ಪೊಲೀಸರು ಇವರಿಬ್ಬರ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು. ಅದಾದ ಬಳಿಕವೂ ಪೊಲೀಸರು ಕಮಲೇಶ್​ಗಾಗಿ ಹುಡುಕಾಡಿದ್ದರು. ಆದರೂ ಆಕೆ ಪತ್ತೆಯಾಗಿರಲಿಲ್ಲ.

    ಇದನ್ನೂ ಓದಿ: 6 ವರ್ಷದ ಬಾಲೆಯ ಅಪಹರಿಸಿದ; ಅತ್ಯಾಚಾರ ಎಸಗಿ ಜನನಾಂಗವನ್ನು ಕೊಯ್ದ ಪರಾರಿಯಾದ

    ಕೆಲತಿಂಗಳ ಬಳಿಕ ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಭೇಟಿಯಾಗಿದ್ದ ಸುರೇಶ್​ಕುಮಾರ್​, ತನಿಖೆಯನ್ನು ಚುರುಕುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ಹಿರಿಯ ಅಧಿಕಾರಿಗಳು ಆದಂಪುರ ಪೊಲೀಸ್​ ಠಾಣೆಯ ಎಸ್​ಎಚ್​ಒ ಅಶೋಕ್​ ಕುಮಾರ್​ ಶರ್ಮ ಅವರಿಗೆ ತನಿಖೆಯ ಹೊಣೆ ಹೊರಿಸಿ ಆದೇಶಿಸಿದ್ದರು.

    ತನಿಖೆ ಆರಂಭಿಸಿದ ಅಶೋಕ್​ ಕುಮಾರ್​ ಶರ್ಮ ಅವರು ತನಿಖೆಯ ಆಯಾಮವನ್ನು ಬದಲಿಸಿದರು. ಕಮಲೇಶ್​ ಕಾಣೆಯಾಗುವುದರ ಹಿಂದೆ ಆಕೆಯ ಕುಟುಂಬದವರದ್ದೇ ಕೈವಾಡ ಇರಬಹುದು ಎಂಬ ಅವರ ಶಂಕೆಯೇ ತನಿಖೆಯ ಆಯಾಮ ಬದಲಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ 2019ರ ಡಿಸೆಂಬರ್​ 12ರಂದು ದೂರುದಾರ ಸುರೇಶ್​ಕುಮಾರ್​, ಕಮಲೇಶ್​ಳ ಅಣ್ಣ ರೂಪ್​ಕಿಶೋರ್​ ಮತ್ತು ಸಂಬಂಧಿ ದೇವೇಂದ್ರ ಎಂಬುವರನ್ನು ಬಂಧಿಸಿದ್ದರು. ಕಮಲೇಶ್​ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಇವರು ಆಕೆಯ ಅಗೌರವ ಹತ್ಯೆ ಮಾಡಿರಬೇಕು. ಪ್ರೇಮ ವಿವಾಹವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಕೋಪದಲ್ಲಿ ಆಕೆಯನ್ನು ಗುಂಡಿಟ್ಟು ಕೊಂದು ದೇಹವನ್ನು ನದಿಗೆ ಎಸೆದಿರಬೇಕು ಎಂದು ಅವರು ಆರೋಪಿಸಿದ್ದರು.

    ಅಷ್ಟೇ ಅಲ್ಲ, ನದಿ ದಂಡೆಯ ಮೇಲೆ ಕಮಲೇಶ್​ಳ ಬಟ್ಟೆಗಳು, ಒಂದು ಪಿಸ್ತೂಲ್​ ಮತ್ತು ಒಂದು ಜತೆ ಚಪ್ಪಲಿ ಸಿಕ್ಕಿದ್ದಾಗಿಯೂ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುರೇಶ್​ ಕುಮಾರ್​, ಆತನ ಪುತ್ರ ರೂಪ್​ ಕಿಶೋರ್​ ಮತ್ತು ದೇವೇಂದ್ರ ಅವರಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದ ಅವರು ಪ್ರಕರಣದ ತನಿಖೆ ಮುಂದುವರಿಸಿದ್ದರು.

    ಇದನ್ನೂ ಓದಿ: ಸೋದರತ್ತೆಯಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಪೋರ್ನ್​ ದೃಶ್ಯಗಳನ್ನು ತೋರಿಸಿ ಕೃತ್ಯ

    ಆದರೆ, ಇತ್ತೀಚೆಗೆ ಪೊಲೀಸರಿಗೆ ಕಮಲೇಶ್​ ಬದುಕಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಮಲಕಾಪುರದಿಂದ 5 ಕಿ.ಮೀ. ದೂರದಲ್ಲಿ ಆಕೆ ಮನೆಯೊಂದರಲ್ಲಿ ಇರುವುದಾಗಿಯೂ ಮಾಹಿತಿದಾರರು ತಿಳಿಸಿದ್ದರು. ಅದರಂತೆ ಆ ಮನೆಯ ಬಳಿಗೆ ಹೋದಾಗ ಅಲ್ಲಿ ಕಮಲೇಶ್​ ಪತ್ತೆಯಾಗಿದ್ದಳು.

    ತಾನು ತನ್ನ ಪ್ರೇಮಿಯನ್ನು ಮದುವೆಯಾಗಿದ್ದು, ಆತನೊಂದಿಗೆ ಸಂಸಾರ ಮಾಡುತ್ತಿರುವುದಾಗಿಯೂ, ತನಗೆ ಒಂದು ವರ್ಷದ ಮಗುವಿದ್ದು, ಮತ್ತೆ ಈಗ 5 ತಿಂಗಳ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಳು. ಈ ವಿಷಯವನ್ನು ಕೋರ್ಟ್​ಗೂ ತಿಳಿಸುವಂತೆಯೂ ಪೊಲೀಸರು ಹೇಳಿದ್ದರು.

    ಅದರಂತೆ ಪೊಲೀಸರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಅಲ್ಲದೆ, ಆಕೆಯ ಹೇಳಿಕೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿದದರು. ಇದೀಗ ಆಕೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ನಾವು ಕೂಡ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ. ಬಳಿಕ ಮೂವರು ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರ್ಟ್​ಗೆ ಮನವಿ ಸಲ್ಲಿಸಲಿದ್ದೇವೆ. ಅಲ್ಲದೆ, ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಲು ಆದೇಶಿಸುವುದಾಗಿ ಎಸ್​ಪಿ ವಿಪಿನ್ ತಾಡಾ ಹೇಳಿದ್ದಾರೆ.

    ಕೋವಿಡ್​ ಕೇರ್​ ಸೆಂಟರ್​ ಆಗಿರುವ ಹೋಟೆಲ್​ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 10ಕ್ಕೇರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts