More

    ಜನಪ್ರತಿನಿಧಿ ಆಡಳಿತವಿಲ್ಲದೆ 2 ವರ್ಷ

    -ಸಂದೀಪ್ ಸಾಲ್ಯಾನ್ ಬಂಟ್ವಾಳ
    ನಗರ ಸ್ಥಳಿಯಾಡಳಿತ ಸಂಸ್ಥೆಗೆ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಎರಡು ವರ್ಷ ಸಂದಿದೆ. ಸದಸ್ಯರಿದ್ದರೂ ಅಧಿಕಾರ ಚಲಾವಣೆಗೆ ಕಾನೂನು ಮಾನ್ಯತೆಯಿಲ್ಲದ ಪರಿಣಾಮ ಬಂಟ್ವಾಳ ಪುರಸಭೆಯ ವಾರ್ಡ್‌ನ ಕೆಲಸಗಳು ಕುಂಠಿತಗೊಂಡಿವೆ.

    ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು 2018ರ ಸೆ.3ರಂದು ಫಲಿತಾಂಶ ಪ್ರಕಟವಾಗಿದೆ. ಪುರಸಭೆಯ ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸ್ಥಾನಗಳನ್ನು ಪಡೆದಿತ್ತು. ಅದೇ ದಿನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಕೂಡ ಪ್ರಕಟಗೊಂಡಿದೆ.

    ಆದರೆ ಆಗಿನ ಮೈತ್ರಿ ಸರ್ಕಾರ ಪ್ರಕಟಿಸಿದ ಮೀಸಲಾತಿಗೆ ಕೆಲ ನಗರ ಸಂಸ್ಥೆಯ ಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಡೆಯಾಯಿತು. ಬಂಟ್ವಾಳ ಪುರಸಭೆಗೆ ಪ್ರತಿನಿಧಿಗಳು ಆಯ್ಕೆಯಾಗಿ ಸೆ.3ಕ್ಕೆ ಎರಡು ವರ್ಷ ಸಂದಿದೆ. ಸುದೀರ್ಘ ಕಾಲ ಪುರಸಭೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದೆ.

    ಮೀಸಲಾತಿ ಬದಲಾವಣೆ: ಬಂಟ್ವಾಳ ಪುರಸಭೆಗೆ ಸರ್ಕಾರ ಮೊದಲಿಗೆ ಪ್ರಕಟಿಸಿದ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಿಡಲಾಗಿತ್ತು, ಇದಾದ ಕೆಲ ದಿನದಲ್ಲಿ ಆಗಿನ ಮೈತ್ರಿಸರ್ಕಾರ ಕೆಲ ನಗರಸಭೆ, ಪುರಸಭೆಯ ಮೀಸಲಾತಿಯನ್ನು ರಾಜಕೀಯ ಕಾರಣಕ್ಕಾಗಿ ಬದಲಾಯಿಸಿತ್ತು. ಈ ಸಂದರ್ಭ ಬಂಟ್ವಾಳ ಪುರಸಭೆ ಅಧ್ಯಕ್ಷ ಹುದ್ದೆಯನ್ನು ಮಾತ್ರ ಪರಿಶಿಷ್ಟ ಜಾತಿಗೆ ಮೀಸಲಿಟ್ಟು ಆದೇಶಿಸಿತ್ತು. ಪುರಸಭೆಯ ಸದಸ್ಯರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮತ್ತೆರಡು ಬಾರಿ ಸರ್ಕಾರ ಪ್ರಕಟಿಸಿದ ಮೀಸಲಾತಿಗೆ ರಾಜ್ಯದ ಇತರೆ ನಗರಸಂಸ್ಥೆ ಪ್ರತಿನಿಧಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ.

    ಪ್ರಮಾಣವಚನ ಸ್ವೀಕರಿಸಿಲ್ಲ: ಸದ್ಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದಿದ್ದುದರಿಂದ ಚುನಾವಣೆಯಲ್ಲಿ ಆಯಾಯ ವಾರ್ಡಿನಿಂದ ಗೆಲುವು ಸಾಧಿಸಿ ಸದಸ್ಯರಾದರೂ ಅವರು ಇನ್ನೂ ಪ್ರಮಾಣವಚನ ಸ್ವೀಕರಿಸದಿರುವುದರಿಂದ ಕಾನೂನು ಪ್ರಕಾರ ಯಾವ ಮಾನ್ಯತೆಯೂ ಅವರಿಗಿಲ್ಲ. ವಾರ್ಡ್‌ನ ಅಭಿವೃದ್ಧಿ ಕೆಲಸ, ಸಾರ್ವಜನಿಕರ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪುರಸಭೆಗೆ ಮಂಗಳೂರು ಸಹಾಯಕ ಕಮಿಷನರ್ ಆಡಳಿತಾಧಿಕಾರಿಯಾಗಿದ್ದಾರೆ. ಅವರಿಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಗಳ ಕುರಿತಾಗಿ ಚರ್ಚಿಸುವ ಅವಕಾಶವಿದೆ. ಅವರು ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕದ ವಿವಾದಕ್ಕೆ ಸಂಬಂಧಿಸಿ ಸಭೆ ನಡೆಸಿದ್ದು ಬಿಟ್ಟರೆ ಈವರೆಗೂ ಸದಸ್ಯರ ಸಭೆ ನಡೆಸಿಲ್ಲ.

    ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಬಗ್ಗೆ ಸರ್ಕಾರದಿಂದ ನೋಟಿಫಿಕೇಷನ್ ಬಂದಿಲ್ಲ. ಬಂದ ಕೂಡಲೇ ಆಯ್ಕೆ ಪ್ರಕ್ರಿಯೆ ಮಾಡುತ್ತೇವೆ.
    ಮದನ್‌ಮೋಹನ್ ಬಂಟ್ವಾಳ ಪುರಸಭೆ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts