More

    ಮರುಕಳಿಸವುದೇ ದೇಗುಲಗಳ ವೈಭವ?

    ಮುಂಡರಗಿ: ತಾಲೂಕಿನ ಪ್ರಾಚೀನ ದೇಗುಲಗಳು ಅವಸಾನದ ಅಂಚಿನಲ್ಲಿವೆ. ಬಹುತೇಕ ದೇವಸ್ಥಾನ ಮರೆಯಾಗುವ ಸ್ಥಿತಿಯಲ್ಲಿವೆ. ಇಂತಹ ದೇವಾಲಯಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಎಚ್.ಕೆ. ಪಾಟೀಲರು ಪ್ರವಾಸೋದ್ಯಮ ಸಚಿವರಾಗಿರುವುದರಿಂದ ಭಕ್ತರು ಅವರ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
    ಶಿಂಗಟಾಲೂರು ಕಲ್ಮೇಶ್ವರ, ನಾಗರಹಳ್ಳಿ ಪಂಚಲಿಂಗೇಶ್ವರ, ಕೊರ್ಲಹಳ್ಳಿ ವರಹ, ಈಶ್ವರ, ಕಕ್ಕೂರ ಮಲ್ಲಿಕಾರ್ಜುನ, ಡೋಣಿಯ ಬೆಂಕೀಶ್ವರ, ಡೋಣಿಕವ್ವೆ, ಜಂತ್ಲಿಶಿರೂರದ ಈಶ್ವರ, ಹಿರೇವಡ್ಡಟ್ಟಿ ಕಲ್ಮೇಶ್ವರ, ಬಳ್ಳೇಶ್ವರ, ಸೋಮೇಶ್ವರ, ತಾಮ್ರಗುಂಡಿಯ ಕಲ್ಲೇಶ್ವರ, ಬರದೂರ ಭರತೇಶ್ವರ, ಬಿದರಹಳ್ಳಿ ಸೋಮೇಶ್ವರ, ಗಣಪತಿ, ಮುಂಡರಗಿ ಮಲ್ಲಿಕಾರ್ಜುನ, ಮೇವುಂಡಿ ವೆಂಕಟೇಶ್ವರ, ನೀಲಕಂಠೇಶ್ವರ, ಈಶ್ವರ, ದಿಡೇಶ್ವರ, ಕುಪ್ಪೇಶ್ವರ ಮೊದಲಾದ ದೇವಾಲಯಗಳ ಜೀರ್ಣೋದ್ಧಾರದ ಅಗತ್ಯವಿದೆ.
    ಹಲವು ದೇವಾಲಯಗಳು, ದೇವರ ಮೂರ್ತಿಗಳು, ಶಾಸನಗಳು, ನಂದಿ ವಿಗ್ರಹ, ಸುಂದರ ಕಲ್ಲಿನ ಕಂಬಗಳು ಮನಸೂರೆಗೊಳ್ಳುತ್ತಿವೆ. ಆದರೆ, ಅನೇಕ ದೇವಾಲಯಗಳ ಕಟ್ಟಡ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿವೆ. ಕೊರ್ಲಹಳ್ಳಿ ವರಹ ದೇಗುಲ ನದಿ ದಡದ ತಗ್ಗು ಪ್ರದೇಶದಲ್ಲಿದ್ದು ಮುಚ್ಚಿ ಹೋಗಿರುವ ಸ್ಥಿತಿಯಲ್ಲಿದೆ. ನಾಗರಹಳ್ಳಿ ಪಂಚಲಿಂಗೇಶ್ವರ ದೇಗುಲ ಬಿದ್ದಿದೆ. ಕೆಲವು ಮೂರ್ತಿಗಳು ಭಗ್ನಗೊಂಡಿವೆ. ಹೀಗೆ… ಅನೇಕ ದೇವಸ್ಥಾನಗಳು ನಿರ್ವಹಣೆ ಕೊರತೆಯಿಂದ ಅವಸಾನದತ್ತ ಸಾಗುತ್ತಿವೆ.
    ಶಿಂಗಟಾಲೂರು ಕಲ್ಮೇಶ್ವರ, ನಾಗರಹಳ್ಳಿ ಪಂಚಲಿಂಗೇಶ್ವರ, ಕೊರ್ಲಹಳ್ಳಿ ಈಶ್ವರ, ವರಹ, ಬಿದರಹಳ್ಳಿ ಸೋಮೇಶ್ವರ ಮೊದಲಾದ ದೇವಾಲಯಗಳನ್ನು ಜಕಣಾಚಾರಿ ಕೆತ್ತನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ಕೆಲ ದೇವಾಲಯಗಳಲ್ಲಿ ಶಿಲಾ ಶಾಸನಗಳು ಇತಿಹಾಸ ತಜ್ಞರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ಹೆಚ್ಚಿನ ಸಂಶೋಧನೆ, ಅಧ್ಯಯನದ ಮೂಲಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸವಾದರೆ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರಲಿವೆ. ತಾಲೂಕಿನಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಬಹುತೇಕ ದೇವಾಲಯಗಳು ಕಣ್ಮರೆಯಾಗುವ ಹಂತ ತಲುಪಿವೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಪ್ರಾಚೀನ ಪರಂಪರೆ ಉಳಿವಿಗೆ ಆಸಕ್ತಿ ಮತ್ತು ಆದ್ಯತೆ ನೀಡಬೇಕಾಗಿದೆ. ಅವಸಾನದಂಚಿನ ದೇವಾಲಯಗಳಿಗೆ ಸರ್ಕಾರ ಕಾಯಕಲ್ಪ ನೀಡಬೇಕು ಎನ್ನುವುದು ಭಕ್ತರ ಆಗ್ರಹ.

    ಪ್ರಾಚೀನ ದೇವಾಲಯಗಳು ಶೋಚನೀಯ ಸ್ಥಿತಿಯಲ್ಲಿವೆ. ಅವು ಉಳಿದರೆ ನಾಡಿನ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬಹುದು. ದೇವಾಲಯಗಳು, ಕೋಟೆ, ಕೊತ್ತಲು, ಶಾಸನ ಇವುಗಳೆಲ್ಲ ಇತಿಹಾಸ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ಸಂರಕ್ಷಣೆ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಹೆಚ್ಚಿನ ಸಂಶೋಧನೆ, ಅಧ್ಯಯನಕ್ಕೂ ಅವಕಾಶವಾಗುತ್ತದೆ.
    ಆರ್.ಎಲ್. ಪೊಲೀಸಪಾಟೀಲ ಸಾಹಿತಿ

    ಪ್ರಾಚ್ಯವಸ್ತು ಇಲಾಖೆಯಿಂದ ತಾಲೂಕಿನಲ್ಲಿನ ಸ್ಮಾರಕಗಳು, ಮೂರ್ತಿ, ಶಿಲ್ಪಗಳ ಸರ್ವೇ ಮಾಡಿಸಿ ವರದಿ ತಯಾರಿಸುವ ಕೆಲಸ ನಡೆದಿದೆ. ಅವುಗಳ ಸಂರಕ್ಷಣೆಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸರ್ವೇ ಮಾಡಲಾಗುತ್ತಿಲ್ಲ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಸಂಶೋಧನೆ ಮಾಡಿಕೊಂಡ, ಸ್ನಾತಕೋತ್ತರ ಪದವಿ ಪಡೆದವರಿಂದ ಸರ್ವೇ ಮಾಡಿಸಲಾಗುವುದು.
    ರಾಜಾರಾಮ್ ಬಿ.ಸಿ.,
    ಪ್ರಾಚ್ಯವಸ್ತು ಇಲಾಖೆ ಪ್ರಭಾರಿ ಅಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts